ADVERTISEMENT

ಸ್ವಪಕ್ಷದ ವಿರುದ್ಧವೇ ಸೀತಾರಾಂ ಅಸಮಾಧಾನ: ತಿಂಗಳ ಕಾಲ ಕಾಯಲು ಸೀತಾರಾಂ ನಿರ್ಧಾರ

ಸ್ವಪಕ್ಷದ ವಿರುದ್ಧವೇ ಅಸಮಾಧಾನ l ಮುಂದಿನ ಹೆಜ್ಜೆ ಕುರಿತು ಸಭೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2022, 20:44 IST
Last Updated 24 ಜೂನ್ 2022, 20:44 IST
ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್‌. ಸೀತಾರಾಂ ಬೆಂಗಳೂರಿನಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಅವರ ಬೆಂಬಲಿಗರು ಬೃಹತ್‌ ಹೂವಿನ ಹಾರ ಹಾಕಿ ಗೌರವಿಸಿದರು. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಯುವ ಕಾಂಗ್ರೆಸ್‌ ಸಮಿತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಇದ್ದರು. – ಪ್ರಜಾವಾಣಿ ಚಿತ್ರ
ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್‌. ಸೀತಾರಾಂ ಬೆಂಗಳೂರಿನಲ್ಲಿ ಶುಕ್ರವಾರ ಕರೆದಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದ ಅವರ ಬೆಂಬಲಿಗರು ಬೃಹತ್‌ ಹೂವಿನ ಹಾರ ಹಾಕಿ ಗೌರವಿಸಿದರು. ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಎಂ.ಡಿ. ಲಕ್ಷ್ಮೀನಾರಾಯಣ, ಯುವ ಕಾಂಗ್ರೆಸ್‌ ಸಮಿತಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಇದ್ದರು. – ಪ್ರಜಾವಾಣಿ ಚಿತ್ರ   

ಬೆಂಗಳೂರು: ತಮ್ಮ ಮುಂದಿನ ರಾಜಕೀಯ ನಡೆ ಕುರಿತು ಒಂದು ತಿಂಗಳ ಬಳಿಕ ಅಂತಿಮ ತೀರ್ಮಾನ ಕೈಗೊಳ್ಳಲು ಕೆಪಿಸಿಸಿ ಉಪಾಧ್ಯಕ್ಷ ಎಂ.ಆರ್‌. ಸೀತಾರಾಂ ನಿರ್ಧರಿಸಿದ್ದಾರೆ.

ಕಾಂಗ್ರೆಸ್‌ ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಅಸಮಾಧಾನ
ಗೊಂಡಿರುವ ಅವರು, ಮುಂದಿನ ರಾಜಕೀಯ ಹೆಜ್ಜೆ ಕುರಿತು ಬೆಂಬಲಿಗರ ಜತೆ ನಗರದ ಅರಮನೆ ಮೈದಾನ
ದಲ್ಲಿ ಶುಕ್ರವಾರ ಸಭೆ ನಡೆಸಿದರು. ಹಲವು ಮುಖಂಡರ ಅಭಿಪ್ರಾಯ ಆಲಿಸಿದ ಅವರು, ತಿಂಗಳ ಬಳಿಕ ಮತ್ತೊಂದು ಸಮಾವೇಶ ನಡೆಸಿ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ಭದ್ರಾವತಿ ಶಾಸಕ ಬಿ.ಕೆ. ಸಂಗಮೇಶ್ವರ, ಕೆಪಿಸಿಸಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ
ಎಂ.ಡಿ. ಲಕ್ಷ್ಮೀನಾರಾಯಣ, ಮಾಜಿ ಶಾಸಕಿ ಅನಸೂಯಮ್ಮ, ರಾಜ್ಯ ಬಲಿಜ ಸಂಘದ ಅಧ್ಯಕ್ಷ ವೇಣುಗೋಪಾಲ್‌, ಭಾರತೀಯ ಯುವ ಕಾಂಗ್ರೆಸ್‌ ರಾಷ್ಟ್ರೀಯ
ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ, ಮಾಜಿ ಮೇಯರ್‌ ಜೆ. ಹುಚ್ಚಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಶಫಿಉಲ್ಲಾ, ಮುಖಂಡರಾದ ಎಲ್‌.ಎನ್‌. ಮೂರ್ತಿ, ಹೆಜ್ಜೆ ವೆಂಕಟೇಶ್‌ ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು.

ADVERTISEMENT

ಮೂರು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಯಿತು. ಕಾಂಗ್ರೆಸ್‌ ತೊರೆಯುವಂತೆ ಕೆಲವರು ಸಲಹೆ ಮಾಡಿದರು. ಪಕ್ಷದಲ್ಲೇ ಮುಂದುವರಿಯುವಂತೆ ಇನ್ನು ಕೆಲವರು ಸಲಹೆ ನೀಡಿದರು. ರಾಜ್ಯದಾದ್ಯಂತ ಪ್ರವಾಸ ಮಾಡಿ, ಒಂದು ತಿಂಗಳ ಬಳಿಕ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ಸೀತಾರಾಂ ಪ್ರಕಟಿಸಿದರು. ಅವರು ಕೈಗೊಳ್ಳುವ ನಿರ್ಧಾರವನ್ನು ಬೆಂಬಲಿ ಸುವುದಾಗಿ ಸಭೆಯಲ್ಲಿದ್ದ ಬಹುತೇಕರು ಹೇಳಿದರು.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಸೀತಾರಾಂ, ‘ಪಕ್ಷದ ನಾಯಕರಿಂದ ನಮಗೆ ನಾಲ್ಕು ಬಾರಿ ಅನ್ಯಾಯವಾಗಿದೆ. 2008ರಲ್ಲಿ ಕಾಂಗ್ರೆಸ್‌ ಸೋಲಿಗೆ ಪಕ್ಷದ ನಾಯಕರೇ ಕಾರಣ. 2009ರ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್‌ ನನಗೆ ಅಂತಿಮಗೊಂಡಿತ್ತು. ದೆಹಲಿಯಿಂದ ಹಾರಿಬಂದ ವೀರಪ್ಪ ಮೊಯಿಲಿ ಸ್ಪರ್ಧಿಸಿದರು. 2014ರ ಲೋಕಸಭಾ ಚುನಾವಣೆ ಟಿಕೆಟ್‌ ನೀಡುವುದಾಗಿ ನಂಬಿಸಿ, ಮತ್ತೆ ಅವರೇ ಸ್ಪರ್ಧಿಸಿದರು’ ಎಂದು ದೂರಿದರು.

‘ವಿಧಾನ ಪರಿಷತ್‌ ಚುನಾವಣೆಯಲ್ಲೂ ಅವಕಾಶ ನೀಡಲಿಲ್ಲ. ನನ್ನ ಮಗ ರಕ್ಷಾ ರಾಮಯ್ಯನನ್ನು
ಒಂದೇ ವರ್ಷಕ್ಕೆ ರಾಜ್ಯ ಯುವ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದರು. ಇನ್ನೊಂದು ಸಮಾವೇಶ ನಡೆಸಿ ಮುಂದಿನ ನಿರ್ಧಾರಕ್ಕೆ ಬರುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.