ರಾಹುಲ್ ಗಾಂಧಿ, ಚುನಾವಣಾ ಆಯೋಗ
ಪಿಟಿಐ ಚಿತ್ರ
ಬೆಂಗಳೂರು: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಮಹದೇವಪುರ ಮತ್ತು ರಾಜಾಜಿನಗರದಲ್ಲಿ ಮತಗಳ್ಳತನ ನಡೆದಿದೆ ಎಂದು ಆರೋಪಿಸಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಇಲ್ಲಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಆಗಸ್ಟ್ 8ರಂದು ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿದೆ.
ಪ್ರತಿಭಟನೆಗೆ ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಸೇರುವ ನಿರೀಕ್ಷೆಯಿದ್ದು ಸ್ವಾತಂತ್ರ್ಯ ಉದ್ಯಾನ, ವಿಧಾನಸೌಧದ ಸುತ್ತಮುತ್ತಲ ರಸ್ತೆಗಳು, ಚಾಲುಕ್ಯ ವೃತ್ತ, ಅರಮನೆ ರಸ್ತೆ, ನೃಪತುಂಗ ರಸ್ತೆ, ಮೈಸೂರು ಬ್ಯಾಂಕ್ ವೃತ್ತ ಹಾಗೂ ಮೆಜೆಸ್ಟಿಕ್ ಆಸುಪಾಸಿನಲ್ಲಿ ವಾಹನ ಚಾಲಕರು ಹಾಗೂ ದ್ವಿಚಕ್ರ ವಾಹನಗಳ ಸವಾರರಿಗೆ ಶುಕ್ರವಾರ ದಿನವಿಡೀ ದಟ್ಟಣೆಯ ಬಿಸಿ ತಟ್ಟುವ ಸಾಧ್ಯತೆಯಿದೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯ ಶೇಷಾದ್ರಿ ರಸ್ತೆ, ಸ್ವಾತಂತ್ರ್ಯ ಉದ್ಯಾನ ಸೇರಿದಂತೆ ಹಲವು ಕಡೆ ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಸಂಚಾರ ನಿರ್ಬಂಧ: ಶಾಂತಲಾ ಜಂಕ್ಷನ್, ಆನಂದ ರಾವ್ ಮೇಲ್ಸೇತುವೆ, ಜೆಡಿಎಸ್ ಹಳೇ ಕಚೇರಿ ಕ್ರಾಸ್, ಶೇಷಾದ್ರಿ ರಸ್ತೆಯಿಂದ ಸ್ವಾತಂತ್ರ್ಯ ಉದ್ಯಾನದ ಕಡೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಅಲ್ಲದೇ ಮೈಸೂರು ಬ್ಯಾಂಕ್ ಕಡೆಯಿಂದ ಚಾಲುಕ್ಯ ವೃತ್ತದ ಕಡೆಗೆ ಹಾಗೂ ಚಾಲುಕ್ಯ ವೃತ್ತದಿಂದ ಮೈಸೂರು ಬ್ಯಾಂಕ್ ಕಡೆಗೆ, ಕಾಳಿದಾಸ ರಸ್ತೆಯ ಕನಕದಾಸ ಜಂಕ್ಷನ್ ಕಡೆಯಿಂದ ಸ್ವಾತಂತ್ರ್ಯ ಉದ್ಯಾನ ಕಡೆಗೆ, ಮೌರ್ಯ, ಸುಬ್ಭಣ್ಣ ಜಂಕ್ಷನ್‌ನಿಂದ ಸ್ವಾತಂತ್ರ್ಯ ಉದ್ಯಾನ ಕಡೆಗೆ ವಾಹನ ಸಂಚಾರ ನಿರ್ಬಂಧ ಮಾಡಲಾಗಿದೆ.
ವಾಹನ ಸಂಚಾರಕ್ಕೆ ಪರ್ಯಾಯ ಮಾರ್ಗ: ಲುಲು ಮಾಲ್, ಕೆಎಫ್‌ಎಂ, ರಾಜೀವ್ ಗಾಂಧಿ ವೃತ್ತ, ಮಂತ್ರಿ ಮಾಲ್, ಸ್ವಸ್ತಿಕ್ ವೃತ್ತ, ಶೇಷಾದ್ರಿಪುರ, ನೆಹರೂ ವೃತ್ತ, ರೇಸ್ ಕೋರ್ಸ್ ಮೇಲ್ಸೇತುವೆ, ರೇಸ್ ಕೋರ್ಸ್ ರಸ್ತೆಯ ಮೂಲಕ ವಾಹನಗಳು ಸಂಚರಿಸಬಹುದು.
ಕೆ.ಜಿ. ರಸ್ತೆ, ಮೈಸೂರು ಬ್ಯಾಂಕ್ ಜಂಕ್ಷನ್, ಸಾಗರ್ ಜಂಕ್ಷನ್, ಕೆ.ಜಿ.ಜಂಕ್ಷನ್, ಎಲೈಟ್, ಟಿ.ಬಿ. ರಸ್ತೆ, ಕೆಎಂಎಫ್, ರಾಜೀವ್ ಗಾಂಧಿ ವೃತ್ತ, ಸ್ವಸ್ತಿಕ್, ನೆಹರೂ ವೃತ್ತ, ರೇಸ್ ಕೋರ್ಸ್ ಮೇಲ್ಸೇತುವೆ ರಸ್ತೆಯ ಮೂಲಕ ಸಂಚರಿಸಬಹುದಾಗಿದೆ. ಚಾಲುಕ್ಯ ವೃತ್ತ, ಎಲ್‌ಆರ್‌ಡಿ, ರಾಜಭವನ ರಸ್ತೆ, ಇನ್‌ಫೆಂಟ್ರಿ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ವೃತ್ತದ ಮೂಲಕ ವಾಹನಗಳು ತೆರಳಬಹುದು. ಸುಬ್ಬಣ್ಣ ಜಂಕ್ಷನ್‌ನಿಂದ ಬಲಕ್ಕೆ ತಿರುವು ಪಡೆದು, ಆನಂದ್ ರಾವ್ ವೃತ್ತದ ಕಡೆಗೆ ಸಂಚರಿಸಬಹುದಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.