ಪ್ರಜಾವಾಣಿ ವಾರ್ತೆ
ಬೆಂಗಳೂರು: ಕಳೆದ ಲೋಕಸಭಾ ಚುನಾವಣೆಯಲ್ಲಿ ಮತ ಕಳವು ಆಗಿದೆ ಎಂದು ಆರೋಪಿಸಿ ನಗರದಲ್ಲಿ ಕಾಂಗ್ರೆಸ್ ಪಕ್ಷ ಶುಕ್ರವಾರ ಆಯೋಜಿಸಿದ್ದ ಬೃಹತ್ ಸಮಾವೇಶಕ್ಕೆ ಭಾರಿ ಜನಸಾಗರ ಕಂಡು ಬಂತು. ಕಿಕ್ಕಿರಿದ್ದು ಸೇರಿದ್ದ ಜನರು ಕಾಂಗ್ರೆಸ್ ಪರ ಘೋಷಣೆ ಕೂಗಿ ಸಂಭ್ರಮಿಸಿದರು. ರಸ್ತೆಗಳಲ್ಲಿ ಕಾಂಗ್ರೆಸ್ ಬಾವುಟಗಳು, ರಾಹುಲ್ ಗಾಂಧಿ ಕಟೌಟ್‌ಗಳು ರಾರಾಜಿಸಿದವು. ಕಾರ್ಯಕರ್ತರಲ್ಲಿ ಎಲ್ಲೇ ಮೀರಿದ ಸಂಭ್ರಮ ಕಂಡುಬಂತು.
ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಸಮಾವೇಶಕ್ಕೆ ನಗರ ಮಾತ್ರವಲ್ಲದೇ ಹೊರ ಜಿಲ್ಲೆಗಳಿಂದಲೂ ಬಸ್, ಕಾರು ಹಾಗೂ ಇನ್ನಿತರ ವಾಹನಗಳಲ್ಲಿ ಮುಖಂಡರು, ಕಾರ್ಯಕರ್ತರು ಹುರುಪಿನಿಂದಲೇ ಬಂದಿದ್ದರು. ಹತ್ತು ಸಾವಿರ ಜನರಿಗೆ ಆಸನ ವ್ಯವಸ್ಥೆ ಮಾಡಲಾಗಿತ್ತು. ನಿರೀಕ್ಷೆಗಿಂತ ಹೆಚ್ಚು ಜನ ಸೇರಿದ್ದರಿಂದ ಆಸನಗಳಿಗೆ ಪರದಾಡಿದರು. ಹಲವರು ರಸ್ತೆಯಲ್ಲಿ, ಮರದ ಕೆಳಗೆ ನಿಂತುಕೊಂಡೇ ಭಾಷಣ ಆಲಿಸಿದರು.
ರಾಹುಲ್ ಗಾಂಧಿ ಹಾಗೂ ಸಿದ್ದರಾಮಯ್ಯ ಅವರು ವೇದಿಕೆಗೆ ಬರುತ್ತಿದ್ದಂತೆಯೇ ಕಾರ್ಯಕರ್ತರು ಸಿಳ್ಳೆ, ಚಪ್ಪಾಳೆ ತಟ್ಟಿ ಸಂಭ್ರಮಿಸಿದರು.
ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲ ರಸ್ತೆಗಳು ಜನಸಾಗರದಿಂದ ಕಿಕ್ಕಿರಿದಿದ್ದವು. ತಡವಾಗಿ ಬಂದವರು ವೇದಿಕೆ ಕಡೆಗೆ ತೆರಳಲು ಯತ್ನಿಸಿದರು. ಪೊಲೀಸರು ಮುಖ್ಯಗೇಟ್ ಬಂದ್ ಮಾಡಿದ್ದರಿಂದ ಅರಮನೆ ರಸ್ತೆ ಹಾಗೂ ಶೇಷಾದ್ರಿ ರಸ್ತೆವರೆಗೂ ಜನರು ನಿಂತಿದ್ದರು. ವೇದಿಕೆ ಕಾರ್ಯಕ್ರಮ ಮುಗಿಯುತ್ತ ಬಂದರೂ ದೂರದ ಊರಿನಿಂದ ಜನರು ಬರುತ್ತಲೇ ಇದ್ದರು.
ಗಾಂಧಿನಗರ, ದಾಸರಹಳ್ಳಿ, ಶಾಂತಿನಗರ, ಚಾಮರಾಜಪೇಟೆ, ಬ್ಯಾಟರಾಯನಪುರ, ಶಿವಾಜಿ ನಗರ, ವಿಜಯನಗರ, ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ಮುಖಂಡರ ನೇತೃತ್ವದಲ್ಲಿ ಜನರು ಮೆರವಣಿಗೆಯಲ್ಲಿ ಬಂದರು.
‘ಬಿಜೆಪಿಗೆ ಧಿಕ್ಕಾರ, ನರೇಂದ್ರ ಮೋದಿಗೆ ಧಿಕ್ಕಾರ’ ಎಂದು ಕೂಗಿದರು. ಮತ ಕಳ್ಳತನ ಮೂಲಕ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ನರೇಂದ್ರ ಮೋದಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವು ನಾಯಕರ ಭಾವಚಿತ್ರ ಹಿಡಿದು ಕಾರ್ಯಕರ್ತರು ಜಯಘೋಷ ಮೊಳಗಿಸಿದರು. ಕಾಂಗ್ರೆಸ್ ಧ್ವಜಗಳು ರಾರಾಜಿಸುತ್ತಿದ್ದವು.
ಗಾಂಧಿ ನಗರ ಸರ್ಕಲ್, ಅರಮನೆ ರಸ್ತೆ, ಶೇಷಾದ್ರಿ ರಸ್ತೆ, ಸೆಂಟ್ರಲ್ ಕಾಲೇಜು, ಮೈಸೂರು ಬ್ಯಾಂಕ್ ವೃತ್ತ ಸುತ್ತಮುತ್ತ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಜಮಾಯಿಸಿದ್ದರು. ಇದರಿಂದ ದಟ್ಟಣೆ ಸಮಸ್ಯೆ ಉಂಟಾಗಿತ್ತು. ಸಮಾವೇಶ ಮುಗಿದ ನಂತರ ಎಲ್ಲ ವಾಹನಗಳು ಒಮ್ಮೆಗೇ ಹೊರ ಹೋಗಲು ಮುಂದಾಗಿದ್ದರಿಂದ ಸಚಿವರಾದಿಯಾಗಿ ಎಲ್ಲರ ವಾಹನಗಳು ಅರ್ಧ ಗಂಟೆಗೂ ಹೆಚ್ಚು ಕಾಯುವಂತಾಯಿತು.
ನಗರದಲ್ಲಿ ವಾಹನಗಳ ದಟ್ಟಣೆ ಜೊತೆಗೆ ಜನದಟ್ಟಣೆ ತೀವ್ರವಾಗಿತ್ತು. ವಾಹನಗಳು ಹಾಗೂ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಸಮಾವೇಶಗಳಿಗೆ ಜನರನ್ನು ಕರೆತರಲು ಆಯೋಜಕರು ವಾಹನ, ಊಟ, ಕುಡಿಯುವ ನೀರು ವ್ಯವಸ್ಥೆ ಮಾಡಿದ್ದರು. ಮೆಟ್ರೊದಲ್ಲಿ ಪ್ರಯಾಣಿಸಲು ಪೇಪರ್ ಟಿಕೆಟ್ ನೀಡಲಾಗಿತ್ತು. ವೇದಿಕೆಯ ಸುತ್ತಮುತ್ತಲಿನ ರಸ್ತೆಗಳಲ್ಲಿ ಖಾಸಗಿ ವಾಹನಗಳ ಓಡಾಟಕ್ಕೆ ಪೊಲೀಸರು ನಿರ್ಬಂಧ ವಿಧಿಸಿ, ಪರ್ಯಾಯ ವ್ಯವಸ್ಥೆ ಮಾಡಿದ್ದರು.
ಬಿಗಿ ಪೊಲೀಸ್ ಭದ್ರತೆ
ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತಲೂ ಭದ್ರತೆಗಾಗಿ ಆರು ಸಾವಿರ ಪೊಲೀಸರನ್ನು ನಿಯೋಜಿಸಿ ಸ್ಥಳದಲ್ಲಿ ತಾತ್ಕಾಲಿಕ ಕಂಟ್ರೋಲ್ ರೂಮ್ ತೆರೆಯಲಾಗಿತ್ತು. ಲೋಹ ಶೋಧ ಯಂತ್ರ ಮೂಲಕ ತಪಾಸಣೆ ಮಾಡಿ ಒಳಗೆ ಬಿಡಲಾಯಿತು. 500ಕ್ಕೂ ಅಧಿಕ ಪೊಲೀಸರು ಭದ್ರತೆಗಾಗಿ ನಿಯೋಜನೆಗೊಂಡಿದ್ದರು.
ರಸ್ತೆಗಳಲ್ಲಿ ಕಟೌಟ್ ಫ್ಲೆಕ್ಸ್ ಅಬ್ಬರ
ನಗರದ ಹಲವು ಕಡೆ ರಾಹುಲ್ ಗಾಂಧಿ ಮಲ್ಲಿಕಾರ್ಜುನ ಖರ್ಗೆ ಅವರ ಕಟೌಟ್ ಫ್ಲೆಕ್ಸ್‌ಗಳು ರಾರಾಜಿಸಿದವು. ಸಿದ್ದರಾಮಯ್ಯ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವ ಸಂಪುಟದ ಎಲ್ಲ ಸದಸ್ಯರ ಫ್ಲೆಕ್ಸ್‌ಗಳು ರಸ್ತೆಯ ವಿದ್ಯುತ್ ಕಂಬಗಳಿಗೆ ಹಾಕಲಾಗಿತ್ತು. ಕಾರ್ಯಕರ್ತರು ಬೆಂಬಲಿಗರು ಅದರ ಫೋಟೊ ವಿಡಿಯೊ ಮಾಡಿಕೊಳ್ಳುತ್ತಿದ್ದ ದೃಶ್ಯ ಕಂಡು ಬಂತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.