ಬೆಂಗಳೂರು: ಬೆಂಗಳೂರು ಸಹಕಾರಿ ಹಾಲು ಒಕ್ಕೂಟದ (ಬಮೂಲ್) 2025-2030ರ ಅವಧಿಯ ಆಡಳಿತ ಮಂಡಳಿಯ 11 ನಿರ್ದೇಶಕ ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು, ಬಮೂಲ್ ಆಡಳಿತವನ್ನು ‘ಕೈ’ ವಶ ಮಾಡಿಕೊಂಡಿದೆ.
ಬಿಜೆಪಿ–ಜೆಡಿಎಸ್ (ಎನ್‌ಡಿಎ) ಮೈತ್ರಿಕೂಟ ಎರಡು ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ವಿಚಾರಣೆಗೆ ಬಾಕಿ ಇರುವುದರಿಂದ ಬೆಂಗಳೂರು ಉತ್ತರ ಮತ್ತು ಬೆಂಗಳೂರು ಪೂರ್ವ ಕ್ಷೇತ್ರಗಳ ಫಲಿತಾಂಶವನ್ನು ಕಾಯ್ದಿರಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.
ಬಮೂಲ್ ಆಡಳಿತ ಮಂಡಳಿಯ 14 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಮೂರು ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿತ್ತು. ಉಳಿದ 11 ಸ್ಥಾನಗಳಿಗೆ ಸ್ಪರ್ಧೆ ಇತ್ತು. ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಮಾಜಿ ಸಂಸದ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ತಮ್ಮ ಡಿ.ಕೆ. ಸುರೇಶ್ ಅವರು ಈ ಚುನಾವಣೆಯ ಅಖಾಡಕ್ಕೆ ಇಳಿದ ಬಳಿಕ ಹಣಾಹಣಿ ಮತ್ತಷ್ಟು ತೀವ್ರಗೊಂಡಿತ್ತು.
ಸುರೇಶ್ ಸೇರಿದಂತೆ ಮೂವರು ಅವಿರೋಧವಾಗಿ ಆಯ್ಕೆಯಾಗಿದ್ದರು. ರಾಮನಗರ ಜಿಲ್ಲೆಯ ಆರು ಸ್ಥಾನಗಳಲ್ಲೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದಾರೆ.
ನಗರದ ಡೇರಿ ಸರ್ಕಲ್ ಸಮೀಪದ ಐಟಿಐ ಕಾಲೇಜಿನಲ್ಲಿ ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಚುನಾವಣೆ, ನಂತರ ಮತ ಎಣಿಕೆ ಕಾರ್ಯ ನಡೆಯಿತು. 14 ಕ್ಷೇತ್ರಗಳಿಂದ 2132 ಮಂದಿಗೆ ಮತದಾನದ ಹಕ್ಕು ಪಡೆದಿದ್ದರು. ಶೇ 100 ರಷ್ಟು ಮತದಾನವಾಗಿತ್ತು.
ಮತದಾನದ ಸಮಯದಲ್ಲಿ ಮಧ್ಯಾಹ್ನದ ವೇಳೆಗೆ ಮತಗಟ್ಟೆ ಕೇಂದ್ರದ ಬಳಿ ನಾಟಕೀಯ ಬೆಳವಣಿಗೆ ನಡೆಯಿತು. ಬಮೂಲ್ ವ್ಯಾಪ್ತಿಯ ವಿವಿಧ ಕ್ಷೇತ್ರಗಳ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ಅಲ್ಲಿ ಜಮಾಯಿಸಿದ್ದರು.
ಡಿ.ಕೆ.ಸುರೇಶ್, ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್, ಯಲಹಂಕ ವಿಧಾನಸಭಾ ಕ್ಷೇತ್ರದ ಶಾಸಕ ಎಸ್.ಆರ್. ವಿಶ್ವನಾಥ್ ಮತಗಟ್ಟೆ ಕೇಂದ್ರಕ್ಕೆ ಭೇಟಿ ನೀಡಿದ್ದರು.
ಕಾಂಗ್ರೆಸ್ ಕಾರ್ಯಕರ್ತರು ಡಿ.ಕೆ.ಸುರೇಶ್ ಪರ, ಬಿಜೆಪಿಯವರು ಪ್ರಧಾನಿ ಮೋದಿ ಪರ, ಜೆಡಿಎಸ್‌ನವರು ದೇವೇಗೌಡರ ಪರ ಜೈಕಾರ ಕೂಗಿದರು. ಬಮೂಲ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ವಿರುದ್ಧ ಧಿಕ್ಕಾರ ಕೂಗಿದರು. ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.