ADVERTISEMENT

ಕನ್ನಡ ಸಂಸ್ಥೆಗಳ ಜಮೀನಿನ ಗುತ್ತಿಗೆ ನವೀಕರಣಕ್ಕೆ ಸಮ್ಮತಿ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 22:28 IST
Last Updated 10 ಆಗಸ್ಟ್ 2020, 22:28 IST
   

ಬೆಂಗಳೂರು: ಕನ್ನಡದ ಉಳಿವಿಗೆ ಶ್ರಮಿಸುತ್ತಿರುವ ಸಂಘ ಸಂಸ್ಥೆಗಳಿಗೆ ನೀಡಿದ್ದ ಜಮೀನಿನ ಗುತ್ತಿಗೆ ಅವಧಿ ಮುಗಿದಿದ್ದರೆ ಅದನ್ನು ನವೀಕರಿಸಲು ಬಿಬಿಎಂಪಿ ಸಮ್ಮತಿಸಿದೆ.

ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ಸೋಮವಾರ ಈ ಕುರಿತು ಪ್ರಸ್ತಾಪಿಸಿದ್ದ ಆಡಳಿತ ಪಕ್ಷದ ಸದಸ್ಯ ಬಿ.ಎಸ್‌.ಸತ್ಯನಾರಾಯಣ, ‘ಕನ್ನಡದ ನೆಲ ಹಾಗೂ ಭಾಷೆಯ ಉಳಿವಿಗಾಗಿ ಹೋರಾಟ ಮಾಡಿದ ಅನೇಕ ಕನ್ನಡ ಸಂಘ ಸಂಸ್ಥೆಗಳಿಗೆ ಹಾಗೂ ಕನ್ನಡ ಶಾಲೆಗಳನ್ನು ನಡೆಸುವ ಸಂಸ್ಥೆಗಳಿಗೆ ಬಿಬಿಎಂಪಿ ವತಿಯಿಂದ ಜಾಗವನ್ನು ಗುತ್ತಿಗೆಗೆ ನೀಡಲಾಗಿತ್ತು. ಈ ಅವಧಿ ಮುಗಿದಿರುವ ಸಂಸ್ಥೆಗಳ ಗುತ್ತಿಗೆಯನ್ನು ನವೀಕರಿಸುವ ಬದಲು ಆ ಜಾಗವನ್ನು ನೀವೇ ಖರೀದಿಸಿ ಎಂದು ಸಂಸ್ಥೆಗಳ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ. ಅಷ್ಟೊಂದು ಹಣ ಈ ಸಂಸ್ಥೆಗಳ ಬಳಿ ಎಲ್ಲಿದೆ. ದಯವಿಟ್ಟು ಈ ಸಂಸ್ಥೆಗಳ ಜಾಗದ ಗುತ್ತಿಗೆಯನ್ನು ನವೀಕರಿಸಿ’ ಎಂದು ಒತ್ತಾಯಿಸಿದರು.

‘ಹಳೆಗನ್ನಡದ ಅಧ್ಯಯನ ಹಾಗೂ ತಾಳೆಗರಿಗಳ ಸಂರಕ್ಷಣೆ ಸೇರಿದಂತೆ ಭಾಷೆಯ ಉಳಿವಿಗಾಗಿ ಬಹಳಷ್ಟು ಕೆಲಸ ಮಾಡಿರುವ ಬಿಎಂಶ್ರಿ ಪ್ರತಿಷ್ಠಾನ, ಉದಯಭಾನು ಕಲಾಸಂಘದಂತಹ ಸಂಸ್ಥೆಗಳ ಗುತ್ತಿಗೆಯನ್ನು ನವೀಕರಿಸದಿದ್ದರೆ ನಾವೂ ಸೇರಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಇದಕ್ಕೆ ಉತ್ತರಿಸಿದ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌, ‘ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 921 ಎಕರೆ ಜಮೀನನ್ನು 115 ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದೆ. ಇದರಿಂದ ಪ್ರತಿ ವರ್ಷ ₹ 6.5 ಕೋಟಿ ವರಮಾನ ಮಾತ್ರ ಬರುತ್ತಿದೆ. ಕೋವಿಡ್‌ ಸಮಯದಲ್ಲಿ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕಾಗಿ ಇಂತಹ ಸಂಸ್ಥೆಗಳಿಗೆ ಗುತ್ತಿಗೆ ನೀಡಿದ್ದ ಜಮೀನನ್ನು ಅವರಿಗೇ ಮಾರಾಟ ಮಾಡಲು ಸರ್ಕಾರ ಮುಂದಾಗಿದ್ದು ನಿಜ. ಈ ವರಮಾನ ಬಿಬಿಎಂಪಿ ಹಾಗೂ ಬಿಡಿಎಗೆ ಸಂದಾಯವಾಗುತ್ತದೆ’ ಎಂದು ವಿವರಿಸಿದರು.

‘ನಾನು ಕೂಡಾ ಬಿಎಂಶ್ರಿ ಪ್ರತಿಷ್ಠಾನದ ವಿದ್ಯಾರ್ಥಿ. ಕನ್ನಡದ ಸಂಸ್ಥೆಗಳ ಗುತ್ತಿಗೆ ನವೀಕರಿಸಬೇಕೆಂಬ ಬೇಡಿಕೆ ನ್ಯಾಯಯುತವಾದುದು. ಕನ್ನಡ ಸಂಸ್ಥೆಗಳಿಗೆ ಸೀಮಿತವಾಗಿ ಗುತ್ತಿಗೆ ನವೀಕರಿಸುವ ಬಗ್ಗೆ ನಿರ್ಣಯ ಕೈಗೊಳ್ಳಬಹುದು’ ಎಂದರು.

ಬಿಬಿಎಂಪಿ ಶ್ರೀ ಪ್ರತಿಷ್ಠಾನದ ಜಾಗದ ಗುತ್ತಿಗೆ ನವೀಕರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮೀನಮೇಷ ಎಣಿಸುತ್ತಿರುವ ಬಗ್ಗೆ ’ಪ್ರಜಾವಾಣಿ‘ ಜುಲೈ ತಿಂಗಳಲ್ಲಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.