ADVERTISEMENT

ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ

ಸಾರಿಗೆ ನಿಗಮಗಳ ನೌಕರರಿಂದ ಹಕ್ಕೊತ್ತಾಯ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 5:13 IST
Last Updated 28 ಡಿಸೆಂಬರ್ 2019, 5:13 IST
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸದಸ್ಯರು ಪುರಭವನ ಮುಂಭಾಗದಲ್ಲಿ ಶುಕ್ರವಾರ ಭಿತ್ತಿ ಪತ್ರ ಪ್ರದರ್ಶನ ಮಾಡಿದರು ಪ್ರಜಾವಾಣಿ ಚಿತ್ರ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಸದಸ್ಯರು ಪುರಭವನ ಮುಂಭಾಗದಲ್ಲಿ ಶುಕ್ರವಾರ ಭಿತ್ತಿ ಪತ್ರ ಪ್ರದರ್ಶನ ಮಾಡಿದರು ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಾರಿಗೆ ನಿಗಮಗಳ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಬೇಕು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಆರಂಭಿಸಿರುವ ನೇಮಕಾತಿ ಪ್ರಕ್ರಿಯೆ ರದ್ದು ಮಾಡಿ ಅಂತರ ನಿಗಮ ವರ್ಗಾವಣೆ ಪೂರ್ಣಗೊಳಿಸಬೇಕು... ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ವತಿಯಿಂದ ಪುರಭವನದ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ 2 ಸಾವಿರಕ್ಕೂ ಹೆಚ್ಚು ನೌಕರರು ಭಿತ್ತಿಪತ್ರ ಪ್ರದರ್ಶನ ಮಾಡಿ, ಹಕ್ಕೊತ್ತಾಯ ಮಾಡಿದರು. ಭಿತ್ತಿಪತ್ರ ಪ್ರದರ್ಶನಕ್ಕೆ ಸಾಹಿತಿ ಶಾಂತಕುಮಾರಿ ಚಾಲನೆ ನೀಡಿದರು.

ನೌಕರರ ಕೂಟದ ರಾಜ್ಯ ಘಟಕದ ಅಧ್ಯಕ್ಷ ಆರ್‌. ಚಂದ್ರಶೇಖರ, ‘ಸಾರಿಗೆ ನಿಗಮಗಳಲ್ಲಿ ಕೆಲಸ ಮಾಡುತ್ತಿರುವ ಎಲ್ಲ ನೌಕರರನ್ನು ಸರ್ಕಾರ ಆದಷ್ಟು ಬೇಗ ಸರ್ಕಾರಿ ನೌಕರರಾಗಿ ಪರಿಗಣಿಸಿ, ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಚಾಲಕ ಕಂ ನಿರ್ವಾಹಕರ ಹುದ್ದೆಗಳನ್ನು ಭರ್ತಿ ಮಾಡಲು ವಾಯವ್ಯ ಸಾರಿಗೆ ನಿಗಮ ಹೊರಡಿಸಿರುವ ಅಧಿಸೂಚನೆ ರದ್ದು ಪಡಿಸಬೇಕು’ ಎಂದು ಆಗ್ರಹಿಸಿದರು.

ADVERTISEMENT

‘ಈಗಾಗಲೇ ಒಂದು ಹಂತದ ಅಂತರ ವಲಯ ವರ್ಗಾವಣೆ ನಡೆದಿದೆ. ಆದರೆ, ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿಯಲ್ಲಿ ಕೆಲಸ ಮಾಡುತ್ತಿರುವ ಉತ್ತರ ಕರ್ನಾಟಕ ಭಾಗದ ಅಂದಾಜು 2,800 ನೌಕರರು ಅಂತರ ವಲಯ ವರ್ಗಾವಣೆಗಾಗಿ ಕಾಯುತ್ತಿದ್ದಾರೆ. ಅವರ ವರ್ಗಾವಣೆ ತಕ್ಷಣ ಕ್ರಮ ತೆಗದುಕೊಳ್ಳಬೇಕು’ ಎಂದೂ ಮನವಿ ಮಾಡಿದರು.

ನೌಕರರ ಕೂಟದ ಉಪಾಧ್ಯಕ್ಷ ಮಲ್ಲಿಕಾರ್ಜುನ್‌, ಪ್ರಧಾನ ಕಾರ್ಯದರ್ಶಿ ತಿಪ್ಪೇಸ್ವಾಮಿ, ರಾಜ್ಯ ಸಂಚಾಲಕ ಶೌಖತ್‌ ಅಲಿ, ಮಹಿಳಾ ಘಟಕದ ಅಧ್ಯಕ್ಷೆ ಚಂಪಕವತಿ ಮತ್ತಿತರರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಪ್ರತಿಭಟನೆ ಸಂದರ್ಭದಲ್ಲಿ ಪುರಭವನ ಮುಂಭಾಗದ ರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಉಂಟಾಗದಂತೆ ಪೊಲೀಸರು ಭದ್ರತೆ ಕೈಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.