ADVERTISEMENT

ನಿರ್ಮಾಣ ಹಂತದ ಧ್ಯಾನ ಮಂದಿರ ಕುಸಿತ: ಇಬ್ಬರಿಗೆ ಗಾಯ

ಕಳಪೆ ಕಾಮಗಾರಿಯಿಂದ ಅವಘಡ– ವಾರ್ಡ್ ಎಂಜಿನಿಯರ್

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2023, 16:27 IST
Last Updated 1 ಆಗಸ್ಟ್ 2023, 16:27 IST
ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿರುವುದು.
ನಿರ್ಮಾಣ ಹಂತದ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿರುವುದು.   

ಬೊಮ್ಮನಹಳ್ಳಿ: ಐಟಿಐ ಬಡಾವಣೆಯ ಕುವೆಂಪು ಉದ್ಯಾನದಲ್ಲಿ ಬಿಬಿಎಂಪಿಯ ನಿರ್ಮಾಣ ಹಂತದ ಧಾನ್ಯ ಮಂದಿರ ಮಂಗಳವಾರ ಕುಸಿದು ಇಬ್ಬರು ಕಾರ್ಮಿಕರು ಗಾಯಗೊಂಡಿದ್ದಾರೆ.

ಮಧ್ಯಾಹ್ನ 3ರ ಸಮಯದಲ್ಲಿ ಧಾನ್ಯ ಮಂದಿರದ ಮೇಲ್ಚಾವಣೆಗೆ ಹೆಂಚು ಜೋಡಿಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಇಡೀ ಕಟ್ಟಡ ಕುಸಿದು ಬಿದ್ದಿದೆ. ಗಾಯಗೊಂಡ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಸಿತಕ್ಕೆ ಕಳಪೆ ಕಾಮಗಾರಿ ಕಾರಣ?: ನಿರ್ಮಾಣ ಹಂತದಲ್ಲಿ ಕುಸಿದು ಬಿದ್ದಿರುವ ಗೋಪುರ ಆಕಾರದ ಉಕ್ಕಿನ ಚಾವಣಿಯು ದಿಢೀರ್ ಕುಸಿದು ಬಿದ್ದಿರುವುದಕ್ಕೆ ಕಳಪೆ ಕಾಮಗಾರಿಯೇ ಕಾರಣ ಎಂಬ ದೂರು ಕೇಳಿಬಂದಿದೆ.
ಕಟ್ಟಡದ ದೋಷಪೂರಿತ ವಿನ್ಯಾಸ, ಕಡಿಮೆ ತೂಕದ ಉಕ್ಕು ಬಳಕೆ, ಗುಣಮಟ್ಟವಿಲ್ಲದ ಕಂಬಗಳನ್ನು ಬಳಸಲಾಗಿದೆ ಎಂದು ಸ್ಥಳೀಯರು ದೂರಿದರು.

ADVERTISEMENT

ಕಾಮಗಾರಿ ಕೈಗೊಳ್ಳಲು ಕಾಮಗಾರಿ ಆದೇಶವೇ ಇಲ್ಲದೇ ಕಾಮಗಾರಿ ನಡೆಯುತ್ತಿತ್ತು ಎನ್ನಲಾಗಿದೆ. ಟೆಂಡರ್ ಪ್ರಕ್ರಿಯೆ ಮುಗಿದ ಮೇಲೆ ಕಾರ್ಯನಿರ್ವಾಹಕ ಎಂಜಿನಿಯರ್ ಕಾಮಗಾರಿ ಆದೇಶ ಪ್ರತಿಯನ್ನು ಗುತ್ತಿಗೆದಾರರಿಗೆ ನೀಡುವುದು ನಿಯಮ. ಕಾಮಗಾರಿ ಆದೇಶ ಇಲ್ಲದೆ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

‘ಪ್ರತಿ ದಿನ ಮಕ್ಕಳು ಸಂಜೆ 5 ಗಂಟೆ ನಂತರ ಆಟವಾಡಲು ಬರುತ್ತಿದ್ದರು. ಮಧ್ಯಾಹ್ನ ಘಟನೆ ಸಂಭವಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದೆ’ ಎಂದು ಸ್ಥಳೀಯರಾದ ಲೋಕೇಶ್ ಹೇಳಿದರು.

‘ಕಳಪೆ ಕಾಮಗಾರಿಯಿಂದಾಗಿ ಈ ದುರ್ಘಟನೆ ಸಂಭವಿಸಿದೆ, ಹಿಂದೆಯೂ ಎಚ್ಎಸ್ಆರ್ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿದ್ದ ವಾಜಪೇಯಿ ಕ್ರೀಡಾಂಗಣವೂ ಕುಸಿದು ಬಿದ್ದಿತ್ತು. ಬಿಬಿಎಂಪಿಯಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರವೆ ಇದಕ್ಕೆ ಕಾರಣ. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಬೇಕು’ ಎಂದು ಎಚ್ಎಸ್ಆರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ. ವಾಸುದೇವರೆಡ್ಡಿ ಹೇಳಿದರು.

‘ಕಳಪೆ ಕಾಮಗಾರಿಯಿಂದಾಗಿಯೇ ಇದು ಸಂಭವಿಸಿದೆ ಎಂದು ವಾರ್ಡ್ ಎಂಜಿನಿಯರ್ ತಿಳಿಸಿದ್ದಾರೆ. ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವುದಾಗಿ’ ಬಿಬಿಎಂಪಿ ಬೊಮ್ಮನಹಳ್ಳಿ ವಲಯ ಜಂಟಿ ಆಯುಕ್ತ ಅಜಿತ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.