ADVERTISEMENT

ಪರಿಸರಕ್ಕೆ ಧಕ್ಕೆಯಾಗದಂತೆ ಭವನ ನಿರ್ಮಾಣ: ಕುಲಪತಿ ಎಸ್‌.ಎಂ.ಜಯಕರ್‌

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 17:56 IST
Last Updated 27 ಜೂನ್ 2025, 17:56 IST
<div class="paragraphs"><p>ಬೆಂಗಳೂರು&nbsp;ವಿಶ್ವವಿದ್ಯಾಲಯ</p></div>

ಬೆಂಗಳೂರು ವಿಶ್ವವಿದ್ಯಾಲಯ

   

ಬೆಂಗಳೂರು: ‘ಪಿಎಂ ಉಷಾ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ಶೈಕ್ಷಣಿಕ ಮತ್ತು ಸಂಶೋಧನಾ ಭವನ ನಿರ್ಮಾಣ ಆಗಲಿದ್ದು, ಇದು ಜೈವಿಕ ಉದ್ಯಾನ ಅಥವಾ ಪರಿಸರ ಪ್ರದೇಶದಲ್ಲಿ ಬರುವುದಿಲ್ಲ’ ಎಂದು ಕುಲಪತಿ ಎಸ್‌.ಎಂ.ಜಯಕರ್‌ ಹೇಳಿದರು.

ಕೇಂದ್ರ ಸರ್ಕಾರ ಪಿಎಂ ಉಷಾ ಯೋಜನೆಯಡಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ₹100 ಕೋಟಿ ಅನುದಾನ ಘೋಷಿಸಿತ್ತು. ಇದರಲ್ಲಿ ಶೇ 60ರಷ್ಟು ಕೇಂದ್ರ ಸರ್ಕಾರ ಮತ್ತು ಶೇ 40ರಷ್ಟು ರಾಜ್ಯ ಸರ್ಕಾರ ಭರಿಸುತ್ತದೆ‌. ಮೂಲಸೌಕರ್ಯ ನಿರ್ಮಾಣದಡಿ ಶೈಕ್ಷಣಿಕ ಮತ್ತು ಸಂಶೋಧನಾ ಭವನವನ್ನು ₹58 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಭವನ ನಿರ್ಮಾಣದ ಜಾಗ ವಿಶ್ವವಿದ್ಯಾಲಯದ ಜೈವಿಕ ಉದ್ಯಾನ, ಪರಿಸರ ಪ್ರದೇಶದಲ್ಲಿ ಇಲ್ಲ. ಈ ಪ್ರದೇಶದಲ್ಲಿ 419 ಮರಗಳಿವೆ. ಹೆಚ್ಚಿನವು ಅಕೇಶಿಯ ಮತ್ತು ನಿಲಗಿರಿ ಮರಗಳಾಗಿವೆ. 282 ಮರಗಳನ್ನು ಮಾತ್ರ ಕಟ್ಟಡ ನಿರ್ಮಾಣಕ್ಕಾಗಿ ಕಡಿಯಲಾಗುತ್ತಿದೆ. ಉಳಿದ 137 ಮರಗಳನ್ನು ಬಫರ್ ಝೋನ್‌ನಲ್ಲಿ ಉಳಿಸಲಾಗುತ್ತದೆ. ಸಣ್ಣ ಮರಗಳನ್ನು ಹತ್ತಿರದ ಸ್ಥಳದಲ್ಲೆ ಪುನಃ ನೆಡಲಾಗುವುದು ಎಂದರು.

ಶೈಕ್ಷಣಿಕ ಭವನ 1,07,376 ಚದರ ಅಡಿ ವಿಸ್ತೀರ್ಣ ಹೊಂದಿದ್ದು ಮೂರು ಮಹಡಿಗಳನ್ನು ಒಳಗೊಂಡಿರುತ್ತದೆ. ಡಿಜಿಟಲ್ ಶಿಕ್ಷಣ, ದೂರಶಿಕ್ಷಣ, ವಿಜ್ಞಾನ, ತಂತ್ರಜ್ಞಾನ, ಗಣಿತ ಸೇರಿದಂತೆ ಆಧುನಿಕ ವಿಷಯಗಳ ಕುರಿತು ಅಧ್ಯಯನ ನಡೆಸಲು ಇದನ್ನು ಬಳಸಲಾಗುತ್ತದೆ. ಸಂಶೋಧನಾ ಭವನವು 16,163 ಚದರ ಅಡಿ ವಿಸ್ತೀರ್ಣವಿದ್ದು ಎರಡು ಮಹಡಿಗಳನ್ನು ಒಳಗೊಂಡಿರುತ್ತದೆ. ಇದನ್ನು ಆರ್ಥಿಕ ಅಭಿವೃದ್ಧಿ, ಸಾಮಾಜಿಕ ಸಮಾನತೆ, ಪರಿಸರ ಸಂರಕ್ಷಣೆ, ಸುಸ್ಥಿರ ಅಭಿವೃದ್ಧಿ, ಹವಾಮಾನ ಬದಲಾವಣೆ, ಕೃತಕ ಬುದ್ದಿಮತ್ತೆ ಸೇರಿದಂತೆ ಆಧುನಿಕ ಶಿಕ್ಷಣ ವ್ಯವಸ್ಥೆಗೆ ಪೂರಕವಾಗುವ ವಿಷಯಗಳ ಕುರಿತ ಸಂಶೋಧನೆಗೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿಸಿದರು.

ಕರ್ನಾಟಕ ವೃಕ್ಷ ಸಂರಕ್ಷಣಾ ಕಾಯ್ದೆ–1976ರ ಪ್ರಕಾರ, ಒಂದು ಮರ ಕಡಿದರೆ 10 ಸಸಿ ನೆಡುವ ನಿಯಮಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯವು ಸಸಿಗಳನ್ನು ನೆಡುವ ಕೆಲಸ ಮಾಡುತ್ತಿದೆ. 1998ರಿಂದ ಇಲ್ಲಿಯವರೆಗೆ 6 ಲಕ್ಷಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ ಎಂದರು.

ಪಿಎಂ-ಉಷಾ ಯೋಜನೆಯಡಿ ₹8 ಕೋಟಿಯನ್ನು ಪರಿಸರ ಸಂರಕ್ಷಣಾ ಚಟುವಟಿಕೆಗಳಿಗೆ ಮೀಸಲಿಡಲಾಗಿದೆ. ಕ್ಯಾಂಪಸ್‌ನಲ್ಲಿ ಎಲ್ಇಡಿ ದೀಪಗಳ ವ್ಯವಸ್ಥೆ, ಪಾದಚಾರಿ ಮಾರ್ಗಗಳ ನವೀಕರಣ, ಎಲೆಕ್ಟ್ರಿಕ್‌ ವಾಹನಗಳು, ಬೈಸಿಕಲ್‌ಗಳ ಬಳಕೆಗೆ ಉತ್ತೇಜನ, ಚಾರಕವನ, ಪಂಚವಟಿ ವಲಯಗಳ ಪುನರುಜ್ಜೀವನ, ಮಳೆನೀರು ಸಂಗ್ರಹಣಾ ವ್ಯವಸ್ಥೆ ಪುನರ್‌ ನಿರ್ಮಾಣ ಸೇರಿವೆ ಎಂದು ತಿಳಿಸಿದರು.

ಜ್ಞಾನಭಾರತಿ ವಾಯುವಿಹಾರಿಗಳ ಸಂಘದವರು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮಕೈಗೊಳ್ಳುವ ಬಗ್ಗೆ ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ, ತೀರ್ಮಾನಿಸಲಾಗುವುದು. ಯೋಜನೆ ಬಗ್ಗೆ ಸರ್ಕಾರಕ್ಕೆ ಎಲ್ಲ ಮಾಹಿತಿ ನೀಡಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.