ADVERTISEMENT

ಪ್ರಯಾಣಿಕನಿಗೆ ಕೈ ಕೊಟ್ಟು ಬಂದಿದ್ದ ಬಸ್: KSRTC ಗೆ ಬಿಸಿ ಮುಟ್ಟಿಸಿದ ಕೋರ್ಟ್!

ಪ್ರಯಾಣಿಕನನ್ನು ಬಿಟ್ಟು ಬಂದಿದ್ದ ಕೆಎಸ್ಆರ್‌ಟಿಸಿ ಬಸ್‌

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2021, 16:28 IST
Last Updated 15 ನವೆಂಬರ್ 2021, 16:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಹಿರಿಯ ನಾಗರಿಕರೊಬ್ಬರನ್ನು ನಿಗದಿತ ನಿಲ್ದಾಣದಿಂದ ಹತ್ತಿಸಿಕೊಳ್ಳದೆ ಬಿಟ್ಟು ಬಂದಿದ್ದಕ್ಕೆ ₹ 1 ಸಾವಿರ ಪರಿಹಾರ ನೀಡುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಗ್ರಾಹಕರ ನ್ಯಾಯಾಲಯ ಆದೇಶಿಸಿದೆ.

‘ಟಿಕೆಟ್ ಕಾಯ್ದಿರಿಸಿದ್ದರೂ ನನ್ನನ್ನು ಬಸ್ ನಿಲ್ದಾಣದಲ್ಲೇ ಬಿಟ್ಟು ಬರಲಾಯಿತು. ಇದರಿಂದಾಗಿ ನಾನು ತಮಿಳುನಾಡಿನಿಂದ ಎರಡು ಬಸ್ಸುಗಳನ್ನು ಬದಲಿಸಿ ಬರುವಂತಾಯಿತು’ ಎಂದು ದೂರಿ, ಬೆಂಗಳೂರಿನ ಬನಶಂಕರಿ ನಿವಾಸಿ ಎಸ್. ಸಂಗಮೇಶ್ವರನ್ ನಗರದ ಎರಡನೇ ಹೆಚ್ಚುವರಿ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.

ದೂರಿನ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿದಾರರಿಗೆ ಆದ ಅನಾನುಕೂಲಕ್ಕೆ ₹ 1 ಸಾವಿರ ಪರಿಹಾರ ಪಾವತಿಸುವಂತೆ ನಿಗಮಕ್ಕೆ ಆದೇಶಿಸಿದೆ.

ADVERTISEMENT

ಏನಿದು ಪ್ರಕರಣ?

ಎಸ್. ಸಂಗಮೇಶ್ವರನ್ ಬೆಂಗಳೂರಿನಿಂದ ತಮಿಳುನಾಡಿನ ತಿರುವಣ್ಣಾಮಲೈಗೆ ಹೋಗಿ ಬರಲು ಕೆಎಸ್‌ಆರ್‌ಟಿಸಿ ಐರಾವತ ಬಸ್‌ಗೆ ಆನ್‌ಲೈನ್‌ನಲ್ಲಿ ಟಿಕೆಟ್‌ ಬುಕ್ ಮಾಡಿದ್ದರು. ಅದರಂತೆ, 2019ರ ಅಕ್ಟೋಬರ್ 12 ಬೆಂಗಳೂರಿನಿಂದ ಹೊರಟು ಮರುದಿನ ನಗರಕ್ಕೆ ಹಿಂತಿರುಗಬೇಕಿತ್ತು. ಗೊತ್ತುಪಡಿಸಿದ ಸಮಯಕ್ಕೆ ಬಸ್ ನಿಲ್ದಾಣ ತಲುಪಿದ್ದರು. ಆದರೆ, ಒಂದು ಗಂಟೆ ಕಾದರೂ ಬಸ್‌ ಬಂದಿರಲಿಲ್ಲ.

ಈ ಹಿನ್ನೆಲೆಯಲ್ಲಿ ಸಂಗಮೇಶ್ವರನ್ ಟಿಕೆಟ್ ಬುಕಿಂಗ್ ಟೈಮ್‌ನ ಎಸ್ಎಂಎಸ್‌ನಲ್ಲಿದ್ದ ಕಂಡಕ್ಟರ್ ನಂಬರ್‌ಗೆ ಫೋನ್ ಮಾಡಿದ್ದರು. ಕರೆ ಸ್ವೀಕರಿಸಿದ ಕಂಡಕ್ಟರ್, ‘ಪೊಲೀಸರ ಸೂಚನೆಯಂತೆ ಪಿಕಪ್ ಪಾಯಿಂಟ್‌ ಬದಲಾದ ಕಾರಣ,ಬಸ್ ತಿರುವಣ್ಣಾಮಲೈ ನಿಲ್ದಾಣಕ್ಕೆ ಬರಲಿಲ್ಲ. ಹೊಸ ತಾತ್ಕಾಲಿಕ ನಿಲ್ದಾಣದಿಂದ ಈಗಾಗಲೇ ಬೆಂಗಳೂರಿನ ಕಡೆ ಹೊರಟಾಗಿದೆ’ ಎಂದು ತಿಳಿಸಿದ್ದರು.

ಇದಕ್ಕೆ ಪ್ರತಿವಾದ ಮಂಡಿಸಿದ್ದ ನಿಗಮದ ಪರ ವಕೀಲರು, ‘ಹುಣ್ಣಿಮೆ ಸಮಯದಲ್ಲಿ ಜನಸಂದಣಿ ನಿಯಂತ್ರಿಸಲು ಸ್ಥಳೀಯ ಪೊಲೀಸರು ಬಸ್ ನಿಲ್ದಾಣವನ್ನು ತಾತ್ಕಾಲಿಕವಾಗಿ ಹೊರವಲಯಕ್ಕೆ ಸ್ಥಳಾಂತರಿಸಿದ್ದರು. ಈ ಬಗ್ಗೆ ಬಸ್‌ ಕಂಡಕ್ಟರ್ ದೂರುದಾರರಿಗೆ ಎಸ್‌ಎಂಎಸ್ ಕಳುಹಿಸಿದ್ದಾರೆ. ಉಳಿದ 23 ಪ್ರಯಾಣಿಕರೆಲ್ಲಾ ಬಸ್‌ಗೆ ಹತ್ತಿದ್ದರೂ, ದೂರುದಾರರು ಬಂದಿರಲಿಲ್ಲ. ಇದು ಅವರದೇ ತಪ್ಪು’ ಎಂದು ವಾದಿಸಿದ್ದರು.

ಇದನ್ನು ಒಪ್ಪದ ನ್ಯಾಯಾಲಯ, ಹಿರಿಯ ನಾಗರಿಕರು ತೊಂದರೆ ಎದುರಿಸಿದ್ದಕ್ಕೆ ಒಟ್ಟು 1 ಸಾವಿರ ಪರಿಹಾರವನ್ನು 1 ತಿಂಗಳಲ್ಲಿ ಪಾವತಿಸಬೇಕು ಎಂದು ನಿಗಮಕ್ಕೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.