ADVERTISEMENT

ಸುದ್ದಿ ವಾಹಿನಿಗಳ ಮೇಲೆ ನಿರ್ಬಂಧ ಮುಂದುವರಿಕೆ

25 ದಿನಗಳ ಅಧಿವೇಶನ, ಮಾರ್ಚ್ 5ಕ್ಕೆ ಬಜೆಟ್‌ ಮಂಡನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2020, 19:45 IST
Last Updated 14 ಫೆಬ್ರುವರಿ 2020, 19:45 IST
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ    

ಬೆಂಗಳೂರು: ಇದೇ 17ರಿಂದ ಆರಂಭವಾಗುವ ವಿಧಾನಸಭಾ ಅಧಿವೇಶನ ಒಟ್ಟು 25 ದಿನಗಳ ಕಾಲ ನಡೆಯಲಿದ್ದು,ಈ ಬಾರಿಯೂ ವಿದ್ಯುನ್ಮಾನ ಮಾಧ್ಯಮಗಳ ಮೇಲಿನ ನಿರ್ಬಂಧ ಮುಂದುವರಿಯಲಿದೆ.

ಕಳೆದ ಅಧಿವೇಶನದ ಸಂದರ್ಭದಲ್ಲಿ ವಿಧಾನಸಭೆಯೊಳಗೆ ಖಾಸಗಿ ಸುದ್ದಿ ವಾಹಿನಿಗಳ ಕ್ಯಾಮರಾಗಳಿಗೆ ಪ್ರವೇಶ ನಿಷೇಧಿಸಲಾಗಿತ್ತು. ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ನಿರ್ಬಂಧ ತೆರವುಗೊಳಿಸುವ ನಿರೀಕ್ಷೆ ಇತ್ತು. ಆದರೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ನಿರ್ಬಂಧ ಮುಂದುವರಿಸಿರುವುದಾಗಿ ಪ್ರಕಟಿಸಿದರು.

ಸುದ್ದಿ ವಾಹಿನಿಗಳಿಗೆ ನಿರ್ಬಂಧ ಕಾಯಂ ಆಗುವ ಸೂಚನೆಯನ್ನು ಕಾಗೇರಿ ನೀಡಿದರು. ‘ಲೋಕಸಭೆ, ರಾಜ್ಯಸಭೆ ಮತ್ತು ಹಲವು ರಾಜ್ಯಗಳಲ್ಲಿ ಅನುಸರಿಸುತ್ತಿರುವ ಪದ್ಧತಿಯನ್ನೇ ಇಲ್ಲೂ ಪಾಲಿಸಲಾಗುವುದು’ ಎಂದರು.

ADVERTISEMENT

25 ದಿನಗಳ ಅಧಿವೇಶನ: ಈ ಬಾರಿ ಒಟ್ಟು 25 ದಿನಗಳ ಕಾಲ ಅಧಿವೇಶನ ನಡೆಯಲಿದೆ(ಫೆ.17ರಿಂದ ಮಾರ್ಚ್‌ 31ರವರೆಗೆ). ಮೊದಲ ದಿನ ರಾಜ್ಯಪಾಲ ವಜುಭಾಯಿ ವಾಲಾ ಅವರು ಜಂಟಿ ಸದನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ ಎಂದು ಕಾಗೇರಿ ತಿಳಿಸಿದರು.

ಮಾರ್ಚ್‌ 5ರಂದು ಬೆಳಿಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಬಜೆಟ್‌ ಮಂಡಿಸಲಿದ್ದಾರೆ. ಮಾರ್ಚ್‌ 2 ಮತ್ತು 3ರಂದು ಸಂವಿಧಾನದ ಕುರಿತು ಎರಡು ದಿನಗಳ ಕಾಲ ಚರ್ಚೆ ನಡೆಯಲಿದೆ. ಈ ಕುರಿತು ಆಡಳಿತ ಮತ್ತು ವಿರೋಧ ಪಕ್ಷಗಳ ಜತೆ ಚರ್ಚಿಸಲಾಗಿದೆ. ಸಂವಿಧಾನದ ಆಶಯಗಳು, ವಿಶೇಷತೆ ಕುರಿತು ಚರ್ಚೆ ನಡೆಯಬೇಕಾಗಿದೆ. ರಾಜಕೀಯದ ಸ್ಪರ್ಶ ಇಲ್ಲದಂತೆ ಎಚ್ಚರಿಕೆ ವಹಿಸಿ ಮಾತನಾಡಬೇಕು ಎಂದು ಅವರು ಹೇಳಿದರು.

ಮಾರ್ಚ್‌ 4ರಿಂದ ಮಾರ್ಚ್‌ 31ರ ವರೆಗೆ ಪ್ರಶ್ನೋತ್ತರ ಮತ್ತು ಇತರ ಕಲಾಪಗಳಿಗೆ ಅವಕಾಶ ನೀಡಲಾಗಿದೆ. ಈ ಅಧಿವೇಶನದಲ್ಲಿ ಒಟ್ಟು 6 ಮಸೂದೆಗಳು ಮಂಡನೆಯಾಗಲಿವೆ ಎಂದರು.

ಮಂಡನೆಯಾಗುವ ಮಸೂದೆಗಳು

* ಕರ್ನಾಟಕ ಲೋಕಾಯುಕ್ತ (ತಿದ್ದುಪಡಿ) ಮಸೂದೆ

* ಕರ್ನಾಟಕ ನಾವಿನ್ಯತಾ ಪ್ರಾಧಿಕಾರ ಮಸೂದೆ

* ಭಾರತ ರಾಷ್ಟ್ರೀಯ ಕಾನೂನು ವಿದ್ಯಾಲಯ (ತಿದ್ದುಪಡಿ) ಮಸೂದೆ

* ಕರ್ನಾಟಕ ರಾಜಭಾಷಾ (ತಿದ್ದುಪಡಿ) ಮಸೂದೆ

* ಕರ್ನಾಟಕ ನಗರ ಪಾಲಿಕೆಗಳ (ತಿದ್ದುಪಡಿ) ಮಸೂದೆ

* ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ತಿದ್ದುಪಡಿ) ಮಸೂದೆ

* ಪರ್ಯಾಲೋಚನೆ ಮತ್ತು ಅಂಗೀಕಾರಕ್ಕೆ ಬಾಕಿ ಇರುವ ಮಸೂದೆ– ಕರ್ನಾಟಕ ಅನುಸೂಚಿತ ಜಾತಿಗಳು, ಅನುಸೂಚಿತ ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳ (ನೇಮಕಾತಿ ಮುಂತಾದವುಗಳ ಮೀಸಲಾತಿ) (ತಿದ್ದುಪಡಿ) ಮಸೂದೆ–2018.

***

ಮುಂದಿನ ದಿನಗಳಲ್ಲಿ ಹೊಸ ಮಸೂದೆಗಳನ್ನು ಮಂಡಿಸಲು ಸರ್ಕಾರದಿಂದ ಕೋರಿಕೆ ಬಂದರೆ ಚರ್ಚೆಗೆ ತೆಗೆದುಕೊಳ್ಳಲಾಗುವುದು
-ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.