ADVERTISEMENT

ರಾಷ್ಟ್ರ ನಿರ್ಮಾಣದಲ್ಲಿ ಭಾಗಿಗಳಾಗಿ: ಪ್ರಹ್ಲಾದ್‌ ರಾಮರಾವ್‌

ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವದದಲ್ಲಿ ಪ್ರಹ್ಲಾದ್‌ ರಾಮರಾವ್‌

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 13:54 IST
Last Updated 8 ಅಕ್ಟೋಬರ್ 2025, 13:54 IST
ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಸನ್ನ ಟಿ.ಬಿ. ಮತ್ತು ಡಿ, ಮಾದೇಗೌಡ ಅವರಿಗೆ ಗೌರವ ಡಾಕ್ಟರೇಟ್‌ ಅನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರದಾನ ಮಾಡಿದರು.
ಪ್ರಜಾವಾಣಿ ಚಿತ್ರ
ಬೆಂಗಳೂರು ವಿಶ್ವವಿದ್ಯಾಲಯದಿಂದ ಪ್ರಸನ್ನ ಟಿ.ಬಿ. ಮತ್ತು ಡಿ, ಮಾದೇಗೌಡ ಅವರಿಗೆ ಗೌರವ ಡಾಕ್ಟರೇಟ್‌ ಅನ್ನು ರಾಜ್ಯಪಾಲ ಥಾವರಚಂದ್ ಗೆಹಲೋತ್ ಪ್ರದಾನ ಮಾಡಿದರು. ಪ್ರಜಾವಾಣಿ ಚಿತ್ರ   

ಬೆಂಗಳೂರು: ಪದವಿ ಪಡೆಯುವುದು ಜೀವನದ ಕೊನೆಯ ಘಟ್ಟವಲ್ಲ. ಕಲಿಕೆ ಎಂದಿಗೂ ಕೊನೆಗೊಳ್ಳುವುದಿಲ್ಲ. ಇದು ಬದುಕಿನ ಮುಂದಿನ ಅಧ್ಯಾಯದ ಆರಂಭ. ಮಹಾನ್ ಸಾಧನೆ ಮಾಡುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ನೀವು ಭಾಗಿಗಳಾಗಬೇಕು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯದ (ಡಿಆರ್‌ಡಿಎಲ್‌) ಮಾಜಿ ನಿರ್ದೇಶಕ ಪ್ರಹ್ಲಾದ್‌ ರಾಮರಾವ್‌ ತಿಳಿಸಿದರು.

ಬುಧವಾರ ನಡೆದ ಬೆಂಗಳೂರು ವಿಶ್ವವಿದ್ಯಾಲಯದ 60ನೇ ಘಟಿಕೋತ್ಸವದದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳ ಶಕ್ತಿ ಕೇವಲ ವಯಸ್ಸಿನಲ್ಲಿಲ್ಲ. ಶಿಕ್ಷಣ, ಜ್ಞಾನದಲ್ಲಿಯೂ ಇಲ್ಲ. ಸ್ಪಷ್ಟ ನಿರ್ಧಾರ, ಸವಾಲುಗಳನ್ನು ಎದುರಿಸುವ ಚಾಕಚಕ್ಯತೆ, ಸಮಸ್ಯೆ ಪರಿಹರಿಸುವ ಬದ್ಧತೆ, ಕಠಿಣ ಪರಿಶ್ರಮದಲ್ಲಿ ನಿಮ್ಮ ಶಕ್ತಿ ಇದೆ. ಧೈರ್ಯಶಾಲಿ ಮನಸ್ಸಿನಲ್ಲಿದೆ ಎಂದು ವಿವರಿಸಿದರು.

ADVERTISEMENT

ರಾಜ್ಯಪಾಲ ಥಾವರಚಂದ್ ಗೆಹಲೋತ್‌ ಮಾತನಾಡಿ, ‘ಶಿಕ್ಷಣದ ಉದ್ದೇಶ ಜ್ಞಾನ ಗಳಿಸುವುದಷ್ಟೇ ಅಲ್ಲ. ಗಳಿಸಿದ ಜ್ಞಾನ ಸಮಾಜದ ಕಲ್ಯಾಣಕ್ಕಾಗಿ ಉಪಯೋಗವಾಗಬೇಕು. ಇಂದು ಪದವಿ ಪಡೆದವರೆಲ್ಲ ಸಮಾಜ ಮತ್ತು ರಾಷ್ಟ್ರದ ಹಿತಕ್ಕಾಗಿ ಕೆಲಸ ಮಾಡಬೇಕು’ ಎಂದು ಸಲಹೆ ನೀಡಿದರು.

ವಿಶ್ವವಿದ್ಯಾಲಯಗಳು ಸಂಶೋಧನೆ, ನಾವೀನ್ಯತೆ, ಸ್ಥಳೀಯ ಭಾಷೆಗಳ ಮೂಲಕ ಉನ್ನತ ಶಿಕ್ಷಣ ಪ್ರಚಾರ, ಪರಿಸರ ಸಂರಕ್ಷಣೆ ಮತ್ತು ಸ್ವಚ್ಛತಾ ಅಭಿಯಾನಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.

ಉನ್ನತ ಶಿಕ್ಷಣ ಸಚಿವ ಎಂ.ಸಿ. ಸುಧಾಕರ್‌ ಮಾತನಾಡಿ, ‘ಅವಕಾಶಗಳು ಬಹಳಷ್ಟಿವೆ. ಆದರೆ, ನಿಮ್ಮ ಮನೆ ಬಾಗಿಲಿಗೆ ಅವಕಾಶಗಳು ಬರುವುದಿಲ್ಲ. ನೀವೇ ಹುಡುಕಿಕೊಂಡು ಹೋಗಿ ಬದುಕು ರೂಪಿಸಿಕೊಳ್ಳಬೇಕು. ಸೋಲು, ಸವಾಲುಗಳನ್ನು ಎದುರಿಸಲು ಕಲಿಯಬೇಕು’ ಎಂದು ಸಲಹೆ ನೀಡಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಎಂ.ಎಸ್‌. ಜಯಕರ್‌ ಉಪಸ್ಥಿತರಿದ್ದರು.

23388 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಘಟಿಕೋತ್ಸವದಲ್ಲಿ 9878 ವಿದ್ಯಾರ್ಥಿಗಳು 13510 ವಿದ್ಯಾರ್ಥಿನಿಯರು ಸೇರಿ 23388 ಮಂದಿಗೆ ಪದವಿ 64 ಪುರುಷ  ಹಾಗೂ 76 ಮಹಿಳಾ ಅಭ್ಯರ್ಥಿಗಳು ಸೇರಿ 140 ಮಂದಿಗೆ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಯಿತು. ಪದವಿಯಲ್ಲಿ 31 ವಿದ್ಯಾರ್ಥಿಗಳು ಹಾಗೂ 55 ವಿದ್ಯಾರ್ಥಿನಿಯರು ಚಿನ್ನದ ಪದಕ 15 ವಿದ್ಯಾರ್ಥಿಗಳು ಹಾಗೂ 25 ವಿದ್ಯಾರ್ಥಿನಿಯರು ನಗದು ಬಹುಮಾನ ಪಡೆದರು.

ಸ್ನಾತಕೋತ್ತರ ವಿಭಾಗದಲ್ಲಿ 25 ವಿದ್ಯಾರ್ಥಿಗಳು 46 ವಿದ್ಯಾರ್ಥಿನಿಯರು ಚಿನ್ನದ ಪದಕ 21 ವಿದ್ಯಾರ್ಥಿಗಳು ಹಾಗೂ 40 ವಿದ್ಯಾರ್ಥಿನಿಯರು ನಗದು ಬಹುಮಾನ ಸ್ವೀಕರಿಸಿದರು. ಎಸ್‌.ದಿವ್ಯ ಕೆ.ಜಿ.ಮಾನಸ ಡಿ.ಎಚ್‌.ನಂದಿನಿ ಆರ್‌.ಚೇತನ್‌ ಎಸ್‌.ಭರತ್‌ಕುಮಾರ್‌ ಅವರು ಬಿ.ಆರ್‌.ಅಂಬೇಡ್ಕರ್ ಚಿನ್ನದ ಪದಕವನ್ನು ಸ್ವೀಕರಿಸಿದರು. ಎಸ್‌ಎಫ್‌ ಕಾಲೇಜಿನ ಎಸ್‌.ಸ್ವರೂಪ್‌ ಸೆಂಟ್‌ ಕ್ಲಾರೆಟ್‌ ಕಾಲೇಜಿನ ರಂಜಿತ ಜಾಧವ್‌ ಅವರಿಗೆ ಅತ್ಯುತ್ತಮ ಕ್ರೀಡಾಪಟು ಪ್ರಶಸ್ತಿ ಪ್ರದಾನ ಮಾಡಲಾಯಿತು.

ಗೌರವ ಡಾಕ್ಟರೇಟ್

ಬೆಂಗಳೂರು ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ವಿಧಾನ ಪರಿಷತ್‌ ಮಾಜಿ ಸದಸ್ಯ ಡಿ. ಮಾದೇಗೌಡ ಮತ್ತು ಜೆ.ಪಿ.ಅಗ್ರಿ ಜೆನೆಟಿಕ್ಸ್‌ ಸಂಸ್ಥಾಪಕ ಟಿ.ಬಿ. ಪ್ರಸನ್ನ ಸ್ವೀಕರಿಸಿದರು. ಗೌರವ ಡಾಕ್ಟರೇಟ್‌ಗೆ ಪಾತ್ರರಾಗಿದ್ದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್‌ ಗೈರು ಹಾಜರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.