ಬೆಂಗಳೂರು; ಕೊರೊನಾ ವೈರಾಣು ಹರಡದಂತೆ ಜನರಲ್ಲಿ ಜಾಗೃತಿ ಮೂಡಿಸಲು ನಗರ ಪೊಲೀಸರು, ‘ಮಾಸ್ಕ್ ಧರಿಸಿ ಬೆಂಗಳೂರು’ ಅಭಿಯಾನ ಆರಂಭಿಸಿದ್ದಾರೆ. ನಗರದಲ್ಲಿ ಶನಿವಾರ ಕಾರ್ಯಕ್ರಮ ಆಯೋಜಿಸಿದ್ದ ಪೊಲೀಸರು, ಅಂತರ ಕಾಯ್ದುಕೊಳ್ಳುವಂತೆ ಹಾಗೂ ಮಾಸ್ಕ್ ಧರಿಸುವಂತೆ ಜನರನ್ನು ಕೋರಿದರು.
ಸಿಟಿ ಮಾರ್ಕೆಟ್ ಪ್ರದೇಶದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಹಾಜರಿದ್ದ ಪೊಲೀಸ್ ಕಮಿಷನರ್ ಕಮಲ್ ಪಂತ್ ಅವರು ವ್ಯಾಪಾರಿಗಳು ಹಾಗೂ ಸಾರ್ವಜನಿಕರಿಗೆ ಜಾಗೃತಿ ಕರಪತ್ರ ಹಾಗೂ ಉಚಿತವಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ವಿತರಿಸಿದರು.
‘ಆರೋಗ್ಯ ಇಲಾಖೆ ರೂಪಿಸಿರುವ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ನಿಯಮ ಉಲ್ಲಂಘಿಸಿದರೆ ದಂಡ ವಿಧಿಸುವಂತೆ ಸರ್ಕಾರ ಹೇಳಿದೆ. ಜನರಿಂದ ಹಣ ಸಂಗ್ರಹಿಸುವುದು ಸರ್ಕಾರದ ಉದ್ದೇಶವಲ್ಲ. ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು ಹಾಗೂ ಕೊರೊನಾ ವೈರಾಣು ಹರಡುವಿಕೆ ತಡೆಯಬೇಕು ಎಂಬುದಷ್ಟೇ ಉದ್ದೇಶ’ ಎಂದು ಕಮಲ್ ಪಂತ್ ಹೇಳಿದರು.
ಹೆಚ್ಚುವರಿ ಪೊಲೀಸ್ ಕಮಿಷನರ್‌ಗಳಾದ ಮುರುಗನ್, ಸೌಮೇಂದು ಮುಖರ್ಜಿ, ಡಿಸಿಪಿಗಳಾದ ಎಂ.ಎನ್. ಅನುಚೇತ್, ಎಸ್.ಡಿ. ಶರಣಪ್ಪ, ಇಶಾ ಪಂತ್, ಪೂರ್ವ ಸಂಚಾರ ವಿಭಾಗದ ಡಿಸಿಪಿ ನಾರಾಯಣ ಭಾಗವಹಿಸಿದರು.
ಅಭಿಯಾನದ ಅಂಗವಾಗಿ ಡಿಸಿಪಿಗಳು, ಇನ್‌ಸ್ಪೆಕ್ಟರ್, ಪಿಎಸ್‌ಐ ಹಾಗೂ ಸಿಬ್ಬಂದಿ ನಗರದ ಹಲವೆಡೆ ಸೈಕಲ್ ಜಾಥಾ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.