ADVERTISEMENT

ಕೊರೊನಾ ಗೆದ್ದವರು - ಕುಟುಂಬದವರೆಲ್ಲ ಸೋಂಕಿಗೆ ಸೆಡ್ಡು ಹೊಡೆದೆವು: ಸೀತಾಲಕ್ಷ್ಮಿ

​ಪ್ರಜಾವಾಣಿ ವಾರ್ತೆ
Published 18 ಮೇ 2021, 19:02 IST
Last Updated 18 ಮೇ 2021, 19:02 IST
ಬಿ.ಕೆ.ಸೀತಾಲಕ್ಷ್ಮೀ
ಬಿ.ಕೆ.ಸೀತಾಲಕ್ಷ್ಮೀ   

ಬೆಂಗಳೂರು: ‘80 ವರ್ಷದ ನನಗೆ ಕೊರೊನಾ ಸೋಂಕು ದೃಢವಾಗಿದ್ದರಿಂದ ಮನೆಯವರೆಲ್ಲ ಕಳವಳಗೊಂಡರು. ಕುಟುಂಬದ ನಾಲ್ಕು ಸದಸ್ಯರಿಗೂ ಸೋಂಕು ತಗುಲಿತ್ತು. ಧೈರ್ಯ ಕಳೆದುಕೊಳ್ಳದೆ, ಎಲ್ಲರೂ ಕ್ವಾರಂಟೈನ್ ಆಗಿ ಸೋಂಕನ್ನು ಗೆದ್ದಿದ್ದೇವೆ’.

ಇದು ಕೊರೊನಾ ಗೆದ್ದು ಬಂದಿರುವ ನಗರದಬಿ.ಕೆ.ಸೀತಾಲಕ್ಷ್ಮಿ ಎಂಬುವರ ಅನುಭವದ ಮಾತು.

‘ನನಗೆ ಒಂದು ದಿನ ಗಂಟಲು ಕೆರೆತ, ಕೆಮ್ಮು ಕಾಣಿಸಿಕೊಂಡಿತು. ನನ್ನ ಸೊಸೆ, ಅವಳ ತಂಗಿ ಹಾಗೂ ಮೊಮ್ಮಗನಿಗೂ ಹೀಗೆಯೇ ಆಗಿತ್ತು. ನನ್ನ ಮಗಎಲ್ಲರೂ ಕ್ವಾರಂಟೈನ್ ಆಗುವಂತೆ ಸೂಚಿಸಿದ’.

ADVERTISEMENT

‘ಮರುದಿನ ವೈದ್ಯರ ಸಲಹೆಯ ಮೇರೆಗೆ ನನ್ನ ಮಗ ಕೋವಿಡ್ ಪರೀಕ್ಷೆ ಮಾಡಿಸಿದ. ವರದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿತು. ವಯಸ್ಸಾದ ನಾನು ಸೋಂಕು ದೃಢಪಟ್ಟಿರುವುದನ್ನು ಹೇಗೆ ಸ್ವೀಕರಿಸುತ್ತೇನೆ ಎಂಬ ಆತಂಕ ಮನೆಯವರಲ್ಲಿತ್ತು. ಆ ದೃಷ್ಟಿಯಿಂದಲೇ ಅವರೆಲ್ಲ ನನ್ನತ್ತ ಕಣ್ಣು ಹಾಯಿಸಿದ್ದರು’.

‘ನನಗೆ ಮಧುಮೇಹ ಇದ್ದಿದ್ದರಿಂದ ಸೋಂಕಿನ ವಿಚಾರವಾಗಿ ಎಲ್ಲರೂ ಭೀತಿಯಲ್ಲಿದ್ದರು. ಕುಟುಂಬದ ನಾಲ್ಕೂ ಮಂದಿಗೆ ಸೋಂಕು ತಗುಲಿ, ಎಲ್ಲರಿಗೂ ಹೀಗಾಯಿತಲ್ಲಾ ಎಂಬ ಯೋಚನೆ ನನ್ನನ್ನು ಆವರಿಸಿತ್ತು. ನಾನೂ ಒಂದು ಕ್ಷಣ ಅಧೀರಳಾದೆ. ಈಗ ಕೈಕಟ್ಟಿ ಕೂರುವ ಪರಿಸ್ಥಿತಿಯಲ್ಲ, ‘ಸೋಂಕು ಬಂದಾಗಿದೆ, ಅದನ್ನು ಎದುರಿಸಲೇಬೇಕು’ ಎಂಬ ನಿರ್ಧಾರ ತೆಗೆದುಕೊಂಡೆ’.

‘ಸೋಂಕಿನಿಂದ ಪಾರಾಗಲು ಯಾವ ನಿಯಮಗಳನ್ನು ಪಾಲಿಸಬೇಕೆಂದು ವೈದ್ಯರಿಂದ ಸಲಹೆಗಳನ್ನು ಪಡೆದುಕೊಂಡೆ. ಅವರು ಹೇಳಿದಂತೆಹಬೆ ತೆಗೆದುಕೊಳ್ಳುವುದು, ಆಮ್ಲಜನಕ ಹಾಗೂ ದೇಹದ ಉಷ್ಣಾಂಶವನ್ನು ಆಗಾಗ ಪರೀಕ್ಷಿಸಿಕೊಳ್ಳುವುದು, ಔಷಧ ತೆಗೆದುಕೊಳ್ಳುವುದನ್ನು ಚಾಚೂ ತಪ್ಪದೆ‍ಪಾಲಿಸಿದೆ’.

‘ಕೊರೊನಾ ಗೆಲ್ಲಲು ವೈದ್ಯಕೀಯೇತರ ಚಟುವಟಿಕೆಗಳಿಗೂ ಹೆಚ್ಚಿನ ಆದ್ಯತೆ ನೀಡಿದೆ. ಸಂಗೀತ ಕೇಳುತ್ತಿದ್ದೆ, ಧ್ಯಾನ ಮಾಡುತ್ತಿದ್ದೆ. ಸಂಬಂಧಿಗಳ ಜೊತೆ ಹಿತವಾದ ಮಾತು, ಮನೆಯವರೆಲ್ಲ ವಿಡಿಯೊ ಕರೆಯಲ್ಲಿ ಸೇರುವುದು, ಪರಸ್ಪರ ಕ್ಷೇಮ ಹಾಗೂ ವಿಚಾರ ವಿನಿಮಯ ಮಾಡುಕೊಳ್ಳುತ್ತಿದ್ದೆವು’.

‘ಮನೆಯವರಿಗೆ ಹಾಗೂ ಸ್ನೇಹಿತರಿಗೆ ನಾನೂ ಧೈರ್ಯ ತುಂಬುತ್ತಿದ್ದೆ. ಅವರೂ ನನಗೆ ಬಲ ನೀಡುತ್ತಿದ್ದರು.ಮಕ್ಕಳ ನೆರವಿನಿಂದಾಗಿ ಕೊರೊನಾ ಜಾಲದಿಂದ ಇಂದು ಹೊರಗೆ ಬಂದಿದ್ದೇನೆ’.

‘ಕೊರೊನಾ ಎಂದರೆ ಹೆದರುವ ಜನಕ್ಕೆ ಆತ್ಮಸ್ಥೈರ್ಯ ತುಂಬುತ್ತಿದ್ದೇನೆ. ಜನ ಹೆದರುವುದನ್ನು ಬದಿಗಿಟ್ಟುಮಾಸ್ಕ್ ಧರಿಸುವುದು, ಕ್ವಾರಂಟೈನ್ ಆಗುವುದು, ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಯಾವುದನ್ನೂ ಉದಾಸೀನ ಮಾಡದೆ, ವೈದ್ಯರ ಸಲಹೆಗಳನ್ನು ಪಾಲಿಸಬೇಕು’.

–ಬಿ.ಕೆ.ಸೀತಾಲಕ್ಷ್ಮಿ, ಬೆಂಗಳೂರು ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.