ADVERTISEMENT

ಜನಸಂಚಾರ ವಿರಳ: ಉದ್ಯಮಕ್ಕೆ ಹೊಡೆತ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2020, 21:29 IST
Last Updated 13 ಮಾರ್ಚ್ 2020, 21:29 IST
   

ಬೆಂಗಳೂರು: ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕು ಆತಂಕ ಹೆಚ್ಚಾದ ಕಾರಣ ನಗರದಲ್ಲಿ ಜನ ಸಂಚಾರವೇ ಕಡಿಮೆಯಾಗಿದ್ದು, ಶನಿವಾರ ಇನ್ನಷ್ಟು ವಿರಳವಾಗುವ ಸಾಧ್ಯತೆ ಇದೆ.

ಕಲಬುರ್ಗಿಯಲ್ಲಿ ಮೃತಪಟ್ಟ ವೃದ್ಧನಿಗೆ ಕೋವಿಡ್ –19 ದೃಢಪಟ್ಟ ನಂತರ ಜನರಲ್ಲಿ ಆತಂಕ ಹೆಚ್ಚಾಗಿದೆ. ಮಾಲ್‌ಗಳು, ಚಿತ್ರಮಂದಿರಗಳು ಶುಕ್ರವಾರವೂ ಖಾಲಿ ಇದ್ದವು. ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಜನ ಸಂಚಾರ ವಿರಳವಾಗಿತ್ತು. ಸೋಂಕು ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಭೆ, ಸಮಾರಂಭ, ಮಾಲ್, ಚಿತ್ರಮಂದಿರಗಳನ್ನು ಶನಿವಾರದಿಂದ ಬಂದ್ ಮಾಡುವುದಾಗಿ ಘೋಷಣೆ ಮಾಡಿದ ಕಾರಣ ಸಂಜೆ ನಂತರ ಜನಸಂಚಾರ ಮತ್ತಷ್ಟು ಕಡಿಮೆ ಆಯಿತು.

ಸರ್ಕಾರ ಆದೇಶ ಮಾಡಿರುವಂತೆ ಎಲ್ಲಾ ಪಬ್‌, ಮಾಲ್, ಚಿತ್ರಮಂದಿರಗಳನ್ನು ಬಂದ್ ಮಾಡಿಸಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಬಹುತೇಕ ಖಾಸಗಿ ಕಂಪನಿಗಳಲ್ಲಿ ಬಯೋಮೆಟ್ರಿಕ್ ಹಾಜರಾತಿ ಕೈಬಿಡಲಾಗಿದೆ. ವಿದೇಶಗಳಲ್ಲಿ ಪ್ರವಾಸ ಮಾಡಿದ್ದರೆ ಕಚೇರಿಗೆ ಬರದೆ ಮನೆಯಿಂದ ಕೆಲಸ ಮಾಡಲು ಮತ್ತು ಶೀತ, ಜ್ವರ ಮತ್ತು ಕೆಮ್ಮು ಇದ್ದರೆ ಕಚೇರಿಗಳತ್ತ ತಲೆ ಹಾಕಲೇಬೇಡಿ ಎಂದು ತಿಳಿಸಲಾಗಿದೆ.

ಕಚೇರಿಯಿಂದ ಹೊರಗೆ ಕೂಡ ಹೆಚ್ಚು ಜನರೊಂದಿಗೆ ಬೆರೆಯದಂತೆ ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ತಿಳಿ ಹೇಳಿವೆ. ಹೊರಗಿನಿಂದ ಬರುವ ಸಂದರ್ಶಕರಿಗೆ ಕಚೇರಿ ಒಳಗೆ ಪ್ರವೇಶ ನೀಡುವುದನ್ನೂ ಹಲವು ಕಂಪನಿಗಳು ನಿಷೇಧಿಸಿವೆ.

ಮೂರು ದಿನಗಳಿಂದಲೂಪ್ರವಾಸಿಗರಿಲ್ಲದ ಕಾರಣ ಹೋಟೆಲ್‌ ಉದ್ಯಮದ ಮೇಲೆ ಭಾರಿ ಹೊಡೆತವೇ ಬಿದ್ದಿದೆ. ನಗರದಲ್ಲಿ 2 ಸ್ಟಾರ್‌ನಿಂದ 5 ಸ್ಟಾರ್ ಹೋಟೆಲ್‌ಗಳು 580ಕ್ಕೂ ಹೆಚ್ಚಿವೆ. ದೇಶ–ವಿದೇಶದ ಪ್ರವಾಸಿಗರು ನಗರದತ್ತ ಬಾರದ ಕಾರಣ ಅವುಗಳಲ್ಲಿ ಶೇ 50ರಷ್ಟು ಕೊಠಡಿಗಳು ಖಾಲಿ ಇವೆ.

‘ಮಾಂಸಾಹಾರ ಸೇವನೆಯಿಂದ ವೈರಸ್ ಹರಡಲಿದೆ ಎಂಬ ತಪ್ಪು ಕಲ್ಪನೆ ಕೂಡ ಹೋಟೆಲ್‌ಗಳ ವಹಿವಾಟು ಕುಸಿಯುವಂತೆ ಮಾಡಿದೆ. ಈ ರೀತಿಯ ತಪ್ಪು ಮಾಹಿತಿ ಹರಡಬಾರದು. ಹೋಟೆಲ್‌ಗಳಲ್ಲಿ ಶುಚಿತ್ವ ಕಾಪಾಡಿಕೊಳ್ಳಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹೋಟೆಲ್ ಮಾಲೀಕರ ತುರ್ತು ಸಭೆ ಕರೆದು ತಿಳಿಸಲಾಗಿದೆ’ ಎಂದು ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದರು.

ಕೋವಿಡ್ ಭೀತಿ: ಕಾರ್ಯಕ್ರಮ ರದ್ದು
‘ಅಖಿಲ ಭಾರತ ಹಿಂದೂ ಮಹಾಸಭಾ ಕರ್ನಾಟಕ ಘಟಕದ ವತಿಯಿಂದ ಇದೇ 15ರಂದು ಹಮ್ಮಿಕೊಂಡಿದ್ದ ಕಾರ್ಯಕ್ರಮ ರದ್ದು ಮಾಡಲಾಗಿದೆ’ ಎಂದು ಮಹಾಸಭಾದ ರಾಜ್ಯ ಘಟಕದ ಅಧ್ಯಕ್ಷ ಎಲ್‌.ಕೆ.ಸುವರ್ಣ ತಿಳಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಅವರಿಗೆ 15ರಂದು ಅಭಿನಂದನಾ ಕಾರ್ಯಕ್ರಮ ಹಾಗೂ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಕೋವಿಡ್‌ ಸೋಂಕು ಹರಡುತ್ತಿರುವ ಹಿನ್ನೆಲೆ ಮುಂಜಾಗ್ರತೆಯಿಂದ ಕಾರ್ಯಕ್ರಮ ರದ್ದು ಮಾಡಿದ್ದೇವೆ’ ಎಂದರು.

ಕರಗದ ಮೇಲೆ ಕರಿನೆರಳು: ಕರಗ ಉತ್ಸವದ ಮೇಲೂ ಕೋವಿಡ್ –19 ಕರಿನೆರಳು ಬೀಳುವ ಸಾಧ್ಯತೆ ಇದೆ. ಏ.8ರಂದು ನಡೆಯಬೇಕಿರುವ ಕರಗ ಉತ್ಸವವನ್ನು ನಡೆಸಬೇಕೇ, ಬೇಡವೇ ಎಂಬುದನ್ನು ಶೀಘ್ರವೇ ತೀರ್ಮಾನಿಸಲಾಗುವುದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ನಗರದ ಇತರೆಡೆ ತಿಂಗಳ ಕೊನೆಯ ವಾರದಲ್ಲಿ ನಡೆಯಬೇಕಿರುವ ರಥೋತ್ಸವ ಮತ್ತು ಜಾತ್ರೆಗಳನ್ನು ನಡೆಸಬೇಕೇ ಬೇಡವೇ ಎಂಬುದು ಇನ್ನೂ ತೀರ್ಮಾನ ಆಗಿಲ್ಲ.

ವಂಡರ್‌ಲಾ 20ರವರೆಗೆ ಬಂದ್
ನಗರದ ಹೊರವಲಯದಲ್ಲಿರುವ ವಂಡರ್‌ಲಾ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಮಾರ್ಚ್ 20ರವರೆಗೆ ರಜೆ ನೀಡಲಾಗಿದೆ.

ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ವಂಡರ್‌ಲಾ ಆಡಳಿತ ಮಂಡಳಿ ತಿಳಿಸಿದೆ.

ಸಾರ್ವಜನಿಕರ ಆರೋಗ್ಯದ ದೃಷ್ಠಿಯಿಂದ ಮಾಲ್‌ಗಳನ್ನು ಬಂದ್ ಮಾಡಲಾಗುವುದು. ಜನರ ಆರೋಗ್ಯ ಕಾಪಾಡುವ ಸಲುವಾಗಿ ಸರ್ಕಾರ ನೀಡುವ ಆರೋಗ್ಯ ಸಲಹೆಗಳನ್ನು ಪಾಲಿಸಲಾಗುವುದು ಎಂದು ಒರಾಯನ್ ಮಾಲ್‌ನ ಹಿರಿಯ ಪ್ರಧಾನ ವ್ಯವಸ್ಥಾಪಕ ಕುಮಾರ್ ಭಾಟಿಯಾ ತಿಳಿಸಿದ್ದಾರೆ.

ಕರಗದ ಮೇಲೆ ಕರಿನೆರಳು
ಕರಗ ಉತ್ಸವದ ಮೇಲೂ ಕೋವಿಡ್ –19 ಕರಿನೆರಳು ಬೀಳುವ ಸಾಧ್ಯತೆ ಇದೆ. ಏ.8ರಂದು ನಡೆಯಬೇಕಿರುವ ಕರಗ ಉತ್ಸವವನ್ನು ನಡೆಸಬೇಕೇ, ಬೇಡವೇ ಎಂಬುದನ್ನು ಶೀಘ್ರವೇ ತೀರ್ಮಾನಿಸಲಾಗುವುದು ಎಂದು ಬಿಬಿಎಂಪಿ ಸ್ಪಷ್ಟಪಡಿಸಿದೆ.

ನಗರದ ಇತರೆಡೆ ತಿಂಗಳ ಕೊನೆಯ ವಾರದಲ್ಲಿ ನಡೆಯಬೇಕಿರುವ ರಥೋತ್ಸವ ಮತ್ತು ಜಾತ್ರೆಗಳನ್ನು ನಡೆಸಬೇಕೇ ಬೇಡವೇ ಎಂಬುದು ಇನ್ನೂ ತೀರ್ಮಾನ ಆಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.