ADVERTISEMENT

ಬೆಂಗಳೂರು | ಕೊರೋನಾ ಸೋಂಕಿತ ವ್ಯಕ್ತಿ ಆತ್ಮಹತ್ಯೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಏಪ್ರಿಲ್ 2020, 6:32 IST
Last Updated 27 ಏಪ್ರಿಲ್ 2020, 6:32 IST
   

ಬೆಂಗಳೂರು: ವಿಕ್ಟೋರಿಯ ಆಸ್ಪತ್ರೆ ಕಟ್ಟಡದ ಮೇಲಿಂದ ಬಿದ್ದು 50 ವರ್ಷದ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು (ಪ್ರಕರಣ 466) ಸೋಮವಾರ ಮುಂಜಾನೆ 9 ಗಂಟೆಗೆಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಇವರು ವೃತ್ತಿಯಲ್ಲಿ ಆಟೊ ಚಾಲಕರು. ಕೋವಿಡ್–19 ದೃಢಪಟ್ಟ ನಂತರ ಆತಂಕಕ್ಕೆ ಒಳಗಾಗಿ3ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡರು.

3ನೇ ಮಹಡಿಯಲ್ಲಿರುವ ಟ್ರೋಮಾ ಸೆಂಟರ್‌ನ ಕಿಟಕಿಯಿಂದಇವರು ನೆಗೆದಿರಬಹುದು ಎಂದು ಶಂಕಿಸಲಾಗಿದೆ. ನೆಲ ಮಹಡಿಯ ತಾರಸಿಗೆಂದು ಹೊದಿಸಿರುವ ಶೀಟ್‌ ಮೇಲೆ ಭಾರೀ ಸದ್ದಾಗಿದ್ದು ಟ್ರೋಮಾ ಸೆಂಟರ್‌ನಲ್ಲಿದ್ದವರಿಗೆ ಕೇಳಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

ಮೃತನಲ್ಲಿ ಉಸಿರಾಟದ ಸಮಸ್ಯೆ ಕಂಡುಬಂದಿತ್ತು. ಆದರೆ ಆರೋಗ್ಯ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿರಲಿಲ್ಲ. ಕೊರೊನಾ ವೈರಸ್‌ ಸೋಂಕು ತಗುಲಿದ್ದರಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದರು.

ವಿವಿ ಪುರಂ ಪೊಲೀಸ್ ಠಾಣೆಯ ಸಿಬ್ಬಂದಿ ಮತ್ತಷ್ಟು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಟ್ರೋಮಾ ಸೆಂಟರ್‌ನಲ್ಲಿ ಹೆಚ್ಚಿನ ಸಂಖ್ಯೆಯ ಸಿಬ್ಬಂದಿಯಿದ್ದರೂ ಈತ ಅಲ್ಲಿಂದ ಹೇಗೆ ನೆಗೆಯಲು ಸಾಧ್ಯವಾಯಿತು ಎಂದು ಪ್ರಶ್ನಿಸುತ್ತಿದ್ದಾರೆ. ಕೊರೊನಾ ಪಾಸಿಟಿವ್ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡ ಮೊದಲ ಪ್ರಕರಣ ಇದು. ಆತ್ಮಹತ್ಯೆಯ ನಿಖರ ಕಾರಣವನ್ನು ಪೊಲೀಸರು ಇನ್ನೂ ದೃಢಪಡಿಸಬೇಕಿದೆ.

15 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತ ಆತ್ಮಹತ್ಯೆ ಪ್ರಕರಣ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

'ಮೃತ ವ್ಯಕ್ತಿ ತಿಲಕ್ ನಗರದ ನಿವಾಸಿ. ಕಳೆದ 15 ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ. ಕೆಲ ವರ್ಷಗಳಿಂದ ಡಯಾಲಿಸಿಸ್‌ ಮಾಡಿಸಿಕೊಳ್ಳುತ್ತಿದ್ದ' ಎಂದು ದಕ್ಷಿಣ ವಿಭಾಗ ಡಿಸಿಪಿ ರೋಹಿಣಿ ಕಟೋಚ್ ಸೆಪಟ್ ಹೇಳಿದರು.

'ಇದೇ ತಿಂಗಳ 24ರಂದು ಆತನಿಗೆ ಸೋಂಕು ದೃಢಪಟ್ಟಿತ್ತು. 24ರಿಂದಲೂ ಆತನಿಗೆ ವಿಕ್ಟೋರಿಯಾದ ಐಸೊಲೇಟೆಡ್ ವಾರ್ಡ್‌ನಲ್ಲಿರಿಸಲಾಗಿತ್ತು. ಇಂದು ಬೆಳಿಗ್ಗೆ ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ‌. ವಿ.ವಿ ಪುರಂ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ' ಎಂದರು.

ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಹೋಗಿ ಕಟ್ಟಡದಿಂದ ಜಿಗಿದ

'ಆಸ್ಪತ್ರೆಯ ಎಲ್ಲ ಪ್ರವೇಶ ದ್ವಾರಗಳನ್ನು ಹಾಗೂ ಕಿಟಕಿಗಳನ್ನು ಮುಚ್ಚಲಾಗಿದೆ. ಆದರೆ, ಸೋಂಕಿತ ಶೌಚಾಲಯಕ್ಕೆ ಹೋಗುವುದಾಗಿ ಹೇಳಿ ಹೋಗಿ ಅಗ್ನಿ ತುರ್ತು ದ್ವಾರದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ' ಎಂದು ತುರ್ತು ವಿಭಾಗದ ನೋಡಲ್ ಅಧಿಕಾರಿ ಅಸೀಮಾ ಬಾನಿ ಹೇಳಿದರು.

ಘಟನೆ ಸಂಬಂಧ ಪ್ರತಿಕ್ರಿಯಿಸಿದ ಅವರು, 'ಸೋಂಕಿತನನ್ನು ಶುಕ್ರವಾರವಷ್ಟೇ ಆಸ್ಪತ್ರೆಗೆ ಕರೆತರಲಾಗಿತ್ತು. ನೇರವಾಗಿ ತುರ್ತು ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಇಲ್ಲಿ ಎಲ್ಲರಿಗೂ ಒಂದೇ ಶೌಚಾಲಯವಿದೆ. ವೈದ್ಯರು, ನರ್ಸ್ ಗಳು ಹಾಗೂ ಸೆಕ್ಯುರಿಟಿಗಳು ಪಿಪಿಇ ಕಿಟ್ ಬದಲಾಯಿಸಿಕೊಳ್ಳುವ ಸಮಯ ಅದು. ಆಸ್ಪತ್ರೆಯ ಎಲ್ಲ ತುರ್ತು ಪ್ರವೇಶದ್ವಾರ ಹಾಗೂ ಕಿಟಕಿ ಬಂದ್ ಮಾಡಲಾಗಿದೆ. ಅದರ ಕೀಗಳು ನನ್ನ ಬಳಿ ಇವೆ. ಆದರೆ, ತುರ್ತು ನಿಗಾ ಘಟಕದ ಅಗ್ನಿ ತುರ್ತು ದ್ವಾರ ಮಾತ್ರ ತೆರೆದಿತ್ತು. ಶೌಚಾಲಯಕ್ಕೆಂದು ಹೇಳಿ ಹೋಗಿ ಅದರ ಮೂಲಕವೇ ಆತ ಜಿಗಿದಿದ್ದಾನೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.