ADVERTISEMENT

ಬೆಂಗಳೂರು | ಆಸ್ಪತ್ರೆಗಳಿಗೆ ಕೋವಿಡ್‌ ರೋಗಿಗಳ ಅಲೆದಾಟ !

ಕೊರೊನಾ ಸೋಂಕಿತರು–ಶಂಕಿತರ ಸಂಖ್ಯೆ ಹೆಚ್ಚಳ * ಚಿಕಿತ್ಸೆ ಸಿಗದೆ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 2 ಜುಲೈ 2020, 21:36 IST
Last Updated 2 ಜುಲೈ 2020, 21:36 IST
ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿರುವ ಸಾವಿರಾರು ವಲಸೆ ಕಾರ್ಮಿಕರು ಗುರುವಾರ ಅರಮನೆ ಮೈದಾನದಲ್ಲಿ ಟಿಕೆಟ್‌ ಖರೀದಿಗಾಗಿ ಕಾದುನಿಂತಿದ್ದರು –ಪ್ರಜಾವಾಣಿ ಚಿತ್ರ
ತಮ್ಮ ಊರುಗಳಿಗೆ ತೆರಳಲು ಸಜ್ಜಾಗಿರುವ ಸಾವಿರಾರು ವಲಸೆ ಕಾರ್ಮಿಕರು ಗುರುವಾರ ಅರಮನೆ ಮೈದಾನದಲ್ಲಿ ಟಿಕೆಟ್‌ ಖರೀದಿಗಾಗಿ ಕಾದುನಿಂತಿದ್ದರು –ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಆಸ್ಪತ್ರೆಗಳೂ ಭರ್ತಿಯಾಗುತ್ತಿವೆ. ಸೋಂಕಿತರು ಮತ್ತು ಕೊರೊನಾ ಶಂಕಿತರು ಚಿಕಿತ್ಸೆಗಾಗಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

‘ಕೋವಿಡ್‌ ಚಿಕಿತ್ಸೆಗಾಗಿ ಗಂಟೆಗೆ ಐದರಿಂದ ಏಳು ಜನರು ಬರುತ್ತಾರೆ. ಆಸ್ಪತ್ರೆ ಎಲ್ಲ ಹಾಸಿಗೆ ಭರ್ತಿಯಾಗಿರುವುದರಿಂದ ದಿನಕ್ಕೆ ಸುಮಾರು 40 ರೋಗಿಗಳನ್ನು ವಾಪಸ್‌ ಕಳುಹಿಸುತ್ತಿದ್ದೇವೆ’ ಎಂದು ಸೇಂಟ್‌ ಜಾನ್‌ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

‘ಗುರುವಾರ ಸಂಜೆ ಒಂದಾದ ನಂತರ ಒಂದು ಆಂಬುಲೆನ್ಸ್‌ಗಳು ಆಸ್ಪತ್ರೆಗೆ ಬಂದವು. ಕೆಲವರು ಕಾರಿನಲ್ಲಿ ಬಂದಿದ್ದರು. ನಮ್ಮ ಆಸ್ಪತ್ರೆಯಲ್ಲಿ ಹಾಸಿಗೆಗಳು ಇರಲಿಲ್ಲ. ಒಬ್ಬರು ಶ್ವಾಸಕೋಶದ ತೊಂದರೆಯಿಂದ ಬಳಲುತ್ತಿದ್ದರೆ, ಮತ್ತೊಬ್ಬರು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಬಿಬಿಎಂಪಿ ಪಟ್ಟಿ ಮಾಡಿರುವ ಹತ್ತಾರು ಆಸ್ಪತ್ರೆಗಳಿಗೆ ಕರೆ ಮಾಡಿದೆವು. ಆದರೆ, ಆ ಎಲ್ಲ ಆಸ್ಪತ್ರೆಗಳಲ್ಲಿಯೂ ಹಾಸಿಗೆಗಳು ಭರ್ತಿಯಾಗಿದ್ದವು’ ಎಂದು ಅವರು ತಿಳಿಸಿದರು.

ADVERTISEMENT

‘ತೀರಾ ಗಂಭೀರ ಪರಿಸ್ಥಿತಿಯಲ್ಲಿ ರೋಗಿಗಳು ಆಸ್ಪತ್ರೆಗಳಿಗೆ ಬರುತ್ತಿದ್ದಾರೆ. ದೊಡ್ಡ ಖಾಸಗಿ ಆಸ್ಪತ್ರೆಗಳು ರೋಗಿಗಳ ಹೊರೆಯನ್ನು ಹಂಚಿಕೊಳ್ಳದಿದ್ದರೆ, ನೂರಾರು ಜನರಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುವುದಿಲ್ಲ. ಹಾಸಿಗೆ ಸಾಮರ್ಥ್ಯ ಹೆಚ್ಚಿಸುವಷ್ಟು ಮಾನವ ಸಂಪನ್ಮೂಲವೂ ನಮ್ಮ ಬಳಿ ಇಲ್ಲ. ಪ್ರತಿ ಹತ್ತು ರೋಗಿಗಳನ್ನು ನೋಡಿಕೊಳ್ಳಲು ಪ್ರತಿ 6 ತಾಸಿಗೆ ಒಬ್ಬರು ಶುಶ್ರೂಷಕರನ್ನು ನಿಯೋಜಿಸಬೇಕಾಗುತ್ತದೆ’ ಎಂದು ಸೇಂಟ್‌ ಜಾನ್ ಆಸ್ಪತ್ರೆಯ ಸಹಾಯಕ ವೈದ್ಯಕೀಯ ಅಧೀಕ್ಷಕಿ ಡಾ. ಮೇರಿ ವರ್ಗೀಸ್‌ ಹೇಳುತ್ತಾರೆ.

‘ಆಸ್ಪತ್ರೆಯ ಹಾಸಿಗೆಗಳೆಲ್ಲ ಭರ್ತಿಯಾಗಿರುವುದರಿಂದ ನಾವು ಏನೂ ಮಾಡಲು ಆಗುವುದಿಲ್ಲ’ ಎಂದು ಖಾಸಗಿ ಆಸ್ಪತ್ರೆಗಳ ಸಂಘಟನೆ ಅಸಹಾಯಕತೆ ವ್ಯಕ್ತಪಡಿಸಿದೆ.

100ಕ್ಕೆ ಏರಿದ ಮೃತರ ಸಂಖ್ಯೆ
ನಗರದಲ್ಲಿ ಕೋವಿಡ್‌ನಿಂದ ಮತ್ತೆ ಮೂರು ಮಂದಿ ಮೃತಪಟ್ಟಿದ್ದು, ಇದುವರೆಗೆ ಸಾವಿಗೀಡಾದವರ ಸಂಖ್ಯೆ 100ಕ್ಕೆ ತಲುಪಿದೆ.

ಕೊರೊನಾ ಸೋಂಕಿತರ ಸಂಖ್ಯೆ ನಗರದಲ್ಲಿ ಹೆಚ್ಚುತ್ತಲೇ ಇದ್ದು, ಹೊಸದಾಗಿ 889 ಪ್ರಕರಣಗಳು ವರದಿಯಾಗಿವೆ. ಈವರೆಗೆ ಒಂದು ದಿನ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ನಗರದಲ್ಲಿ ಕೋವಿಡ್ ಪೀಡಿತರ ಸಂಖ್ಯೆ 6,179ಕ್ಕೆ ತಲುಪಿದೆ. ಸದ್ಯ 5,505 ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗಿದ್ದವರಲ್ಲಿ ಕೆಲ ರೋಗಿಗಳು ಚೇತರಿಸಿಕೊಂಡಿದ್ದು, ಅವರನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರ ಮಾಡಲಾಗಿದೆ.

ಆಸ್ಪತ್ರೆಯಲ್ಲೇ ಉಳಿದ ಶವಗಳು: ಕೊರೊನಾ ಸೋಂಕು ಶಂಕಿತ ಇಬ್ಬರ ಮೃತದೇಹಗಳು ಎರಡು ದಿನಗಳಿಂದ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿಯೇ ಇವೆ. ತೀವ್ರ ಉಸಿರಾಟದ ಸಮಸ್ಯೆಯಿಂದ (ಸಾರಿ) ಬಳಲುತ್ತಿದ್ದ ಅವರನ್ನು ದಾಖಲಿಸಿಕೊಂಡು, ಚಿಕಿತ್ಸೆ ನೀಡಲಾಗಿತ್ತು. ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಆದರೆ, ವರದಿ ಬಾರದ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಮೃತರ ಅಂತ್ಯಸಂಸ್ಕಾರಕ್ಕೆ ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಕುಟುಂಬದ ಸದಸ್ಯರು ಆಸ್ಪತ್ರೆಯ ಆವರಣದಲ್ಲಿಯೇ ದಿನಗಳನ್ನು ಕಳೆಯುತ್ತಿದ್ದಾರೆ.

‘ಬಿಬಿಎಂಪಿ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಿದ್ದೇವೆ. ಆದರೆ, ಅವರು ಬಾರದ ಹಿನ್ನೆಲೆಯಲ್ಲಿ ಮೃತ ದೇಹವನ್ನು ಆಸ್ಪತ್ರೆಯಲ್ಲಿಯೇ ಇರಿಸಿಕೊಂಡಿದ್ದೇವೆ’ ಎಂದು ಆಸ್ಪತ್ರೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

ಕೋವಿಡ್‌ ನಿರ್ವಹಣೆಯಲ್ಲಿ ಸರ್ಕಾರ ವಿಫಲ: ಎಚ್‌ಡಿಕೆ
ಬೆಂಗಳೂರು:
‘ಕೊರೊನಾ ಸೋಂಕು ಪೀಡಿತರು ಹಾಸಿಗೆಗಳಿಲ್ಲದೇ, ಚಿಕಿತ್ಸೆ ಸಿಗದೇ ಮನೆಯಲ್ಲೇ ನರಳಿ ಸಾಯುತ್ತಿದ್ದಾರೆ. ಆರಂಭಿಕ ಹಂತದಲ್ಲೇ ಕೋವಿಡ್ ನಿರ್ವಹಣೆಯತ್ತ ಸರ್ಕಾರ ಮುನ್ನೆಚ್ಚರಿಕೆ ವಹಿಸದೇ ಇದ್ದುದು ಈ ವೈಫಲ್ಯಕ್ಕೆ ಕಾರಣ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ಮೂರು ತಿಂಗಳಿನಿಂದ ರಾಜ್ಯದ ಮುಖ್ಯಮಂತ್ರಿ ಸೇರಿದಂತೆ ಸಚಿವರು ಮಾತಿನ ಮಂಟಪ ಕಟ್ಟುವುದರಲ್ಲಿ ಕಾಲ ಕಳೆದರು. ಕೊರೊನಾ ಸಮರ್ಪಕ ನಿರ್ವಹಣೆಗೆ ನಾನು ಕೊಟ್ಟ ಹತ್ತಾರು ಸಲಹೆಗಳನ್ನು ಲಘುವಾಗಿ ಪರಿಗಣಿಸಿದ ರಾಜ್ಯ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಳ್ಳಲಿ. ಇನ್ನಾದರೂ ಸಮರೋಪಾದಿಯಲ್ಲಿ ಕಾರ್ಯಪ್ರವೃತ್ತವಾಗಲಿ’ ಎಂದು ಪ್ರತಿಪಾದಿಸಿದ್ದಾರೆ.

‘ಸರ್ಕಾರ ಕೇವಲ ಸರ್ವಪಕ್ಷಗಳ ಸಭೆ ಕರೆದರೆ ಸಾಲದು. ಆ ಸಭೆಯಲ್ಲಿ ನೀಡುವ ಸಲಹೆಗಳನ್ನು, ತೆಗೆದುಕೊಂಡ ನಿರ್ಣಯಗಳನ್ನು ಕಾರ್ಯರೂಪಕ್ಕೆ ತರಬೇಕು’ ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.