ADVERTISEMENT

ವಿಮಾನ ನಿಲ್ದಾಣ ರಸ್ತೆಯಿಂದ ಜೆ.ಪಿ. ನಗರಕ್ಕೆ ₹4,500!

ಕೊರೊನಾದಿಂದ ಗುಣಮುಖರಾದವರನ್ನು ಕರೆದೊಯ್ಯಲು ಬೇಕಾಬಿಟ್ಟಿ ಹಣ ಕೇಳುತ್ತಿರುವ ಟ್ಯಾಕ್ಸಿ ಚಾಲಕರು

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 19:29 IST
Last Updated 25 ಜುಲೈ 2020, 19:29 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕಿನಿಂದ ಗುಣಮುಖರಾದವರನ್ನು ಕರೆದೊಯ್ಯಲು ಟ್ಯಾಕ್ಸಿ ಚಾಲಕರು ಬೇಕಾಬಿಟ್ಟಿಯಾಗಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.

‘ವಿಮಾನ ನಿಲ್ದಾಣ ರಸ್ತೆಯಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಕೋವಿಡ್‌ನಿಂದ ಗುಣಮುಖನಾಗಿದ್ದೆ. ಮನೆಗೆ ತೆರಳಲು ಓಲಾ ಮತ್ತು ಉಬರ್‌ಗೆ ಕರೆ ಮಾಡಿದೆ. ಆದರೆ, ಅವರು ಸೇವೆ ರದ್ದುಗೊಳಿಸಿದರು. ಕೊನೆಗೆ ಟ್ಯಾಕ್ಸಿ ಚಾಲಕರೊಬ್ಬರು ಏರ್‌ಪೋರ್ಟ್‌ ರಸ್ತೆಯಿಂದ ಜೆ.ಪಿ. ನಗರಕ್ಕೆ ಬರಲು ₹4,500 ಕೇಳಿದರು. ಅನಿವಾರ್ಯವಾಗಿ ಅಷ್ಟು ಹಣ ನೀಡಬೇಕಾಯಿತು’ ಎಂದು ವ್ಯಕ್ತಿಯೊಬ್ಬರು ದೂರಿದರು.

‘ಸೋಂಕು ದೃಢಪಟ್ಟ ಮೇಲೆ ಬಿಬಿಎಂಪಿಯಿಂದ ಆಂಬುಲೆನ್ಸ್‌ ಬಂದು ನಿರ್ದಿಷ್ಟ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತದೆ. ಆದರೆ, ಗುಣಮುಖರಾದ ಮೇಲೆ ನಾವೇ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು. ಹೆಚ್ಚು ದುಡ್ಡು ಏಕೆ ಎಂದು ಕೇಳಿದರೆ, ನೀವು ಕೋವಿಡ್‌ ರೋಗಿಗಳು. ನೀವು ಇಳಿದು ಹೋದ ಮೇಲೆ ವಾಹನವನ್ನು ಸ್ಯಾನಿಟೈಸ್‌ ಮಾಡಬೇಕಾಗುತ್ತದೆ. ಅದಕ್ಕೆ ಇಷ್ಟು ಹಣ ನೀಡಲೇಬೇಕಾಗುತ್ತದೆ ಎಂದು ಚಾಲಕರು ಹೇಳುತ್ತಾರೆ’ ಎಂಬುದಾಗಿ ಅವರು ತಿಳಿಸಿದರು.

ADVERTISEMENT

‘ಚಿಕ್ಕಬಳ್ಳಾಪುರದಿಂದ ವಿಮಾನ ನಿಲ್ದಾಣ ರಸ್ತೆಯಲ್ಲಿರುವ ಇದೇ ಆಸ್ಪತ್ರೆಗೆ ಬರಲು ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರಿಂದ ಟ್ಯಾಕ್ಸಿ ಚಾಲಕರು ₹12 ಸಾವಿರ ತೆಗೆದುಕೊಂಡಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ವ್ಯಕ್ತಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.