ADVERTISEMENT

ಈಗ ‘ಲಸಿಕೆ’ ಹೆಸರಿನಲ್ಲೂ ನಡೆಯುತ್ತಿದೆ ವಂಚನೆ!

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 21:06 IST
Last Updated 23 ಏಪ್ರಿಲ್ 2021, 21:06 IST
   

ಬೆಂಗಳೂರು: ಕೊರೊನಾ ಸೋಂಕು ತಡೆಯುವ ಲಸಿಕೆ ಹೆಸರಿನಲ್ಲಿ ಸಾರ್ವಜನಿಕರಿಗೆ ಕರೆ ಮಾಡುತ್ತಿರುವ ಸೈಬರ್ ವಂಚಕರು, ಮೊಬೈಲ್ ಹಾಗೂ ವೈಯಕ್ತಿಕ ಮಾಹಿತಿ ಪಡೆದು ವಂಚಿಸುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ.

‘ನೀವು ಲಸಿಕೆ ಪಡೆದುಕೊಂಡಿದ್ದೀರಾ?’, ‘ನೀವು ಲಸಿಕೆ ಹಾಕಿಸಿಕೊಳ್ಳಲು ನೋಂದಣಿ ಮಾಡಿಕೊಳ್ಳಬೇಕೇ?’ ಸೇರಿದಂತೆ ಹಲವು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸಾರ್ವಜನಿಕರಿಗೆ ವಂಚಕರು ಕರೆ ಮಾಡುತ್ತಿದ್ದಾರೆ. ಕೆಲವರಿಗೆ ಮೊಬೈಲ್‌ ಸಂದೇಶ ಕಳುಹಿಸುತ್ತಿದ್ದಾರೆ.

ಇಂಥ ಮೊಬೈಲ್ ಕರೆ ಹಾಗೂ ಸಂದೇಶ ನಂಬಿ ಸಾರ್ವಜನಿಕರು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ. ಅದೇ ಮಾಹಿತಿ ಬಳಸಿ ವಂಚಕರು, ಮೊಬೈಲ್ ಹ್ಯಾಕ್ ಮಾಡುತ್ತಿದ್ದಾರೆ ಎಂದು ಗೊತ್ತಾಗಿದೆ.

ADVERTISEMENT

‘9122500***7 ಸಂಖ್ಯೆಯಿಂದ ನನ್ನ ಮೊಬೈಲ್‌ಗೆ ಕರೆ ಬಂದಿತ್ತು. ಅದನ್ನು ಸ್ವೀಕರಿಸಿದ್ದೆ. ನೀವು ಲಸಿಕೆ ಪಡೆದಿದ್ದಿರಾ? ಎಂಬುದಾದರೆ, 1 ಸಂಖ್ಯೆ ಒತ್ತಿ ಎಂದಿದ್ದರು. ಅದನ್ನು ನಂಬಿ, 1 ಸಂಖ್ಯೆ ಒತ್ತಿದಾಗ ಮೊಬೈಲ್ ಹ್ಯಾಕ್ ಆಯಿತು’ ಎಂದು ನಗರದ ನಿವಾಸಿಯೊಬ್ಬರು ತಿಳಿಸಿದರು.

‘ಮೊಬೈಲ್ ಸ್ವಿಚ್ ಆಫ್ ಮಾಡಿ ಆನ್‌ ಮಾಡಿದೆ. ಪುನಃ ಕರೆ ಬಂತು. ಆದರೆ, ನಾನು ಸ್ವೀಕರಿಸಿಲ್ಲ. ಇದೇ ರೀತಿಯಲ್ಲೇ ಹಲವರಿಗೆ ಕರೆಗಳು ಬರುತ್ತಿದ್ದು, ಜನರು ಎಚ್ಚರಿಕೆ ವಹಿಸಬೇಕು’ ಎಂದೂ ಹೇಳಿದರು.

ಈ ಬಗ್ಗೆ ಮಾತನಾಡಿದ ನಗರದ ಸೈಬರ್ ಕ್ರೈಂ ಠಾಣೆಯೊಂದರ ಪೊಲೀಸ್ ಅಧಿಕಾರಿ, ‘ಲಸಿಕೆ ಹೆಸರಿನಲ್ಲಿ ಕರೆ ಮಾಡಿ ವಂಚಿಸುತ್ತಿರುವ ಬಗ್ಗೆ ಸದ್ಯಕ್ಕೆ ದೂರುಗಳು ಬಂದಿಲ್ಲ. ಯಾರಿಗಾದರೂ ವಂಚನೆ ಆಗಿದ್ದರೆ ಠಾಣೆಗೆ ಬಂದು ದೂರು ನೀಡಬಹುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.