ADVERTISEMENT

ಬೆಂಗಳೂರು: ಏಳು ಆಸ್ಪತ್ರೆಗಳಿಗೆ ಅಲೆದು ಕೊರೊನಾ ಗೆದ್ದ 50 ವರ್ಷದ ಮಹಿಳೆ

‘ನಮ್ಮಲ್ಲಿನ ಭಯ ರೋಗಕ್ಕಿಂತ ಅಪಾಯ’

​ಪ್ರಜಾವಾಣಿ ವಾರ್ತೆ
Published 21 ಜುಲೈ 2020, 19:37 IST
Last Updated 21 ಜುಲೈ 2020, 19:37 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮಧುಮೇಹ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ನಗರದ 50 ವರ್ಷದ ಮಹಿಳೆಯೊಬ್ಬರು ಏಳು ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದ ಬಳಿಕ ಚಿಕಿತ್ಸೆ ಪಡೆದು ಕೊರೊನಾ ಜಯಿಸಿದ್ದಾರೆ.

‘ನಮ್ಮಲ್ಲಿನ ಭಯವೇ ಜೀವಕ್ಕೆ ಅಪಾಯವನ್ನುಂಟು ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ ಭಯ ಬಿಟ್ಟು ಚಿಕಿತ್ಸೆ ಪಡೆದುಕೊಂಡಲ್ಲಿ ಬೇಗ ಚೇತರಿಸಿಕೊಳ್ಳಬಹುದು’ ಎಂದು ತಮ್ಮ ಅನುಭವದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಫ್ರೇಜರ್‌ ಟೌನ್‌ನಲ್ಲಿ ವಾಸವಿರುವ ಮಹಿಳೆಗೆ ಕೆಲ ದಿನಗಳ ಹಿಂದೆ ಜ್ವರ ಸೇರಿದಂತೆ ಸೋಂಕಿನ ಲಕ್ಷಣಗಳು ಗೋಚರಿಸಿದ್ದವು. ಅವರು ಹತ್ತಿರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೆರಳಿ ತ‍ಪಾಸಣೆ ಮಾಡಿಸಿಕೊಂಡಿದ್ದರು. ಈ ವೇಳೆ ಅವರಿಗೆ ಕೋವಿಡ್ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಲಾಗಿತ್ತು. ಬೌರಿಂಗ್ ಆಸ್ಪತ್ರೆ ಹಾಗೂ ರಾಜೀವ್‌ ಗಾಂಧಿ ಎದೆರೋಗಗಳ ಆಸ್ಪತ್ರೆಯಲ್ಲಿ ಹಾಸಿಗೆಗಳು ಭರ್ತಿಯಾಗಿದ್ದ ಪರಿಣಾಮ ಐದು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಟ ನಡೆಸಿದರು. ಅಂತಿಮವಾಗಿ ಇಂದಿರಾ ನಗರದ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಂ
ಡರು. ಆಸ್ಪತ್ರೆಗೆ ದಾಖಲಾಗಿದ್ದ ಪ್ರಾರಂಭಿಕ ದಿನಗಳಲ್ಲಿ ಕೃತಕ ಉಸಿರಾಟದ ಸಂಪರ್ಕ ಹೊಂದಿದ್ದ ಮಹಿಳೆ, 10 ದಿನಗಳಲ್ಲಿ ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ.

ADVERTISEMENT

‘ಕೊರೊನಾ ಸೋಂಕು ಹೇಗೆ ತಗುಲಿತು ಎನ್ನುವುದು ತಿಳಿದಿಲ್ಲ. ಸೋಂಕಿನ ಲಕ್ಷಣಗಳು ಗೋಚರಿಸಿದ ಕೂಡಲೇ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಿಕೊಂಡೆ. ಬಳಿಕ ಚಿಕಿತ್ಸೆಗಾಗಿ ಹಲವು ಆಸ್ಪತ್ರೆಗಳಿಗೆಅಲೆದಾಟ ನಡೆಸಬೇಕಾಯಿತು. ಇದರಿಂದ ಇನ್ನಷ್ಟು ಭಯಭೀತಳಾಗಿ ಕಂಗಾಲಾಗಿದ್ದೆ. ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯ ವೈದ್ಯರು ದಾಖಲಿಸಿಕೊಂಡು ಉತ್ತಮ ಚಿಕಿತ್ಸೆ ನೀಡಿದರು. ಸರ್ಕಾರಿ ಆಸ್ಪತ್ರೆಗಳ ಬಗ್ಗೆ ಇದ್ದ ತಪ್ಪು ಕಲ್ಪನೆ ಕೂಡ ದೂರವಾಗಿದೆ. ಅಲ್ಲಿನ ಎಲ್ಲರೂ ಆರೋಗ್ಯ ವಿಚಾರಿಸಿ, ಆರೈಕೆ ಮಾಡಿದರು. ಇದರಿಂದಾಗಿ ಕೊರೊನಾ ಸೋಂಕಿಗೆ ಅನಗತ್ಯವಾಗಿ ಭಯಪಡುತ್ತಿದ್ದೇವೆ ಅನಿಸಿತು. ಇದು ಕೂಡ ಒಂದು ಜ್ವರದಂತೆಯೇ ಬಂದು ಹೋಗಲಿದೆ. ಯಾರೂ ಭಯಪಡಬೇಕಾಗಿಲ್ಲ’ ಎಂದು ಮಹಿಳೆ ತಿಳಿಸಿದರು.

ಅವರ ಪುತ್ರ ಮಾತನಾಡಿ, ‘ತಾಯಿಗೆ ಸೋಂಕು ಕಾಣಿಸಿಕೊಂಡ ಬಳಿಕ ತಂದೆ ಕೂಡ ಕೋವಿಡ್ ಪೀಡಿತರಾದರು. ಅವರನ್ನು ಕೂಡ ಸಾಂಕ್ರಾಮಿಕ ರೋಗಗಳ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈಗ ಇಬ್ಬರೂ ಗುಣಮುಖರಾಗಿ ಮನೆಗೆ ಬಂದಿದ್ದಾರೆ. ವೈದ್ಯರು ನೀಡಿದ ವಿಟಮಿನ್, ಮಿನರಲ್ಸ್ ಮಾತ್ರೆಗಳನ್ನು ಸೇವಿಸುತ್ತಿದ್ದಾರೆ. ಸೋಂಕಿನ ಬಗ್ಗೆ ಎಷ್ಟೋ ಮಂದಿ ತಪ್ಪುಕಲ್ಪನೆ ಹೊಂದಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.