ADVERTISEMENT

ಕೊರೊನಾ: ವಿಧಾನಸೌಧ ಭದ್ರತಾ ವಿಭಾಗದ ಎಎಸ್‌ಐ ಸಾವು

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 17:18 IST
Last Updated 6 ಜುಲೈ 2020, 17:18 IST

ಬೆಂಗಳೂರು: ಕೊರೊನಾ ಸೋಂಕು ತಗುಲಿದ್ದ ವಿಧಾನಸೌಧ ಭದ್ರತಾ ವಿಭಾಗದ ಎಎಸ್ಐಯೊಬ್ಬರು ಚಿಕಿತ್ಸೆಗೆ ಸ್ಪಂದಿಸದೇ ಸೋಮವಾರ ಮೃತಪಟ್ಟಿದ್ದಾರೆ.

‌58 ವರ್ಷದ ಎಎಸ್ಐ, ಹಲವು ತಿಂಗಳುಗಳಿಂದ ವಿಧಾನಸೌಧ ಭದ್ರತೆ ಕರ್ತವ್ಯ ನಿರ್ವಹಿಸುತ್ತಿದ್ದರು. ವಾರದ ಹಿಂದಷ್ಟೇ ರಜೆ ಪಡೆದಿದ್ದ ಅವರು ಮನೆಯಲ್ಲೇ ಇದ್ದರು. ಅವರಿಗೆ ನೆಗಡಿ ಹಾಗೂ ಜ್ವರ ಕಾಣಿಸಿಕೊಂಡಿತ್ತು. ಉಸಿರಾಟದ ಸಮಸ್ಯೆಯೂ ಇತ್ತು.

ಆಸ್ಪತ್ರೆಗೆ ತೆರಳಿ ಕೊರೊನಾ ಪರೀಕ್ಷೆ ಮಾಡಿಸಿದಾಗ ಪಾಸಿಟಿವ್ ವರದಿ ಬಂದಿತ್ತು. ಚಿಕಿತ್ಸೆಗಾಗಿ ಹೊಸಕೋಟೆ ಸಮೀಪದ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದರು. ಉಸಿರಾಟದ ಸಮಸ್ಯೆ ಹೆಚ್ಚಾಗಿ ಅಲ್ಲಿಯೇ ಕೊನೆಯುಸಿರೆಳೆದಿದ್ದಾರೆ.

ADVERTISEMENT

ಐವರು ಪೊಲೀಸರಿಗೆ ಸೋಂಕು: ನಗರದಲ್ಲಿ ಸೋಮವಾರವೂ ಐವರು ಪೊಲೀಸರಲ್ಲಿ ಸೋಂಕು ಕಾಣಿಸಿಕೊಂಡಿದೆ. ಜೆ.ಜೆ.ನಗರ ಠಾಣೆಯ ಮಹಿಳಾ ಪಿಎಸ್ಐ, ಆರ್.ಟಿ.ನಗರ, ಜೀವನಬಿಮಾನಗರ, ಹನುಮಂತನಗರ ಮತ್ತು ಹಲಸೂರು ಗೇಟ್ ಸಂಚಾರ ಠಾಣೆಯ ನಾಲ್ವರು ಕಾನ್‌ಸ್ಟೆಬಲ್‌ಗಳಿಗೆ ಸೋಂಕು ಇರುವುದು ಪರೀಕ್ಷೆಯಿಂದ ದೃಢಪಟ್ಟಿದೆ.

ನಗರದಲ್ಲಿ ಇದುವರೆಗೆ 210 ಪೊಲೀಸರಿಗೆ ಸೋಂಕು ತಗುಲಿದ್ದು, 69 ಮಂದಿ ಗುಣಮುಖರಾಗಿದ್ದಾರೆ. 136 ಪೊಲೀಸರಿಗೆ ಚಿಕಿತ್ಸೆ ಮುಂದುವರಿದಿದೆ. ಮೂವರು ಎಎಸ್ಐ, ಹೆಡ್ ಕಾನ್‌ಸ್ಟೆಬಲ್‌ಗಳು ಕೊನೆಯುಸಿರೆಳೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.