ADVERTISEMENT

ಕೋಳಿ ಮಾಂಸದಲ್ಲಿದೆಯೇ ಕೋವಿಡ್‌ ಸೋಂಕು? ಸರ್ಕಾರ ಏನು ಹೇಳುತ್ತದೆ?

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 15:29 IST
Last Updated 16 ಫೆಬ್ರುವರಿ 2020, 15:29 IST
   

ಬೆಂಗಳೂರು:‌ ಕೋಳಿ ಮಾಂಸದಲ್ಲಿ 'ಕೋವಿಡ್-19' (ಕೊರೊನಾ) ಸೋಂಕು ಇದೆ ಎಂಬ ವದಂತಿ ಸತ್ಯಕ್ಕೆ ದೂರವಾಗಿದ್ದು, ಇದಕ್ಕೆ ಯಾರು ಕಿವಿಗೊಡಬಾರದು ಎಂದು ರಾಜ್ಯ ಸರ್ಕಾರ ಮನವಿ ಮಾಡಿದೆ.

ಚೀನಾ ದೇಶದಲ್ಲಿ ಕಾಣಿಸಿಕೊಂಡಿದ್ದ ಕೋವಿಡ್ ಸೋಂಕು ಕೋಳಿಗಳಿಂದ ಹರಡುತ್ತದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಆದರೆ, ಈ ವದಂತಿಗೆ ಯಾವುದೇ ವೈಜ್ಞಾನಿಕ ಆಧಾರ ಇರುವುದಿಲ್ಲ. ದೇಶದಲ್ಲಿ ಕೋಳಿಗಳಿಗೆ ಕೋವಿಡ್ ಸೋಂಕು ಕಾಣಿಸಿಕೊಂಡ ಬಗ್ಗೆ ಇದು ವರೆಗೂ ಯಾವುದೇ ವರದಿಯಾಗಿಲ್ಲ. ಈ ಸೋಂಕು ಹರಡುವಿಕೆಯಲ್ಲಿ ಕೋಳಿಗಳ ಪಾತ್ರವಿಲ್ಲ.ಸಾಮಾನ್ಯವಾಗಿ ಕೋಳಿ ಮಾಂಸವನ್ನು 100 ಡಿಗ್ರಿ ಸೆಂಟಿಗ್ರೇಡ್ ಉಷ್ಣತೆಯಲ್ಲಿ ಬೇಯಿಸಲಾಗುತ್ತದೆ. ಈ ಉಷ್ಣತೆಯಲ್ಲಿ ಯಾವುದೇ ವೈರಾಣುಗಳು ಬದುಕುಳಿಯಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಈ ರೀತಿಯ ವದಂತಿಗಳನ್ನು ಹರಡುವುದರಿಂದ ಉತ್ತಮ ಪೌಷ್ಟಿಕಾಂಶ ನೀಡುವ ಕೋಳಿ ಮಾಂಸ ಮತ್ತು ಮೊಟ್ಟೆ ಸೇವನೆಯ ಮೇಲೆ ಗಣನೀಯ ದುಷ್ಪರಿಣಾಮ ಬೀರುತ್ತದೆ. ಈಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು, ಬಾಣಂತಿಯರು ಪೋಷಕಾಂಶ ಕೊರತೆಯಿಂದ ನರಳುತ್ತಿದ್ದಾರೆ. ಈ ಸಂದರ್ಭದಲ್ಲಿ ಇಂತಹ ವದಂತಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಮತ್ತಷ್ಟು ಹದಗೆಡಿಸುತ್ತವೆ ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.

ADVERTISEMENT

ಕೋವಿಡ್ ವೈರಸ್‌ಗೆ ಹೋಮಿಯೋಪಥಿ ಔಷಧಿ, ಶಂಕಿತರಿಗೆ ಚಿಕಿತ್ಸೆ ಒದಗಿಸಲು ಬೆಂಗಳೂರಿನ ಯಲಹಂಕದಲ್ಲಿ ಶಿಬಿರ ಸೇರಿದಂತೆ ಹಲವು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಆದರೆ, ಇವೆಲ್ಲ ಸತ್ಯಕ್ಕೆ ದೂರವಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಪಡಿಸಿದೆ.

ಸಹಾಯವಾಣಿ ಸಂಖ್ಯೆ– 1800 425 012

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.