ADVERTISEMENT

ಕೊರೊನಾ: ಬೆಂಗಳೂರಿನಲ್ಲಿ ಕಲಾ ಪ್ರಪಂಚವೂ ತಲ್ಲಣ

ಸೋಂಕು ಭೀತಿ ಹಿನ್ನೆಲೆಯಲ್ಲಿ ನಡೆಯದ ಕಾರ್ಯಕ್ರಮಗಳು, ಕಲಾವಿದರಲ್ಲಿ ಆತಂಕ

ವರುಣ ಹೆಗಡೆ
Published 20 ಮಾರ್ಚ್ 2020, 4:24 IST
Last Updated 20 ಮಾರ್ಚ್ 2020, 4:24 IST
ಜೆ.ಸಿ. ರಸ್ತೆಯ ಕಡೆಯಿಂದ ಕನ್ನಡ ಭವನಕ್ಕೆ ತೆರಳುವ ಮುಖ್ಯ ಪ್ರವೇಶದ್ವಾರವನ್ನು ಬಂದ್ ಮಾಡಲಾಗಿದೆ – ಪ್ರಜಾವಾಣಿ ಚಿತ್ರ
ಜೆ.ಸಿ. ರಸ್ತೆಯ ಕಡೆಯಿಂದ ಕನ್ನಡ ಭವನಕ್ಕೆ ತೆರಳುವ ಮುಖ್ಯ ಪ್ರವೇಶದ್ವಾರವನ್ನು ಬಂದ್ ಮಾಡಲಾಗಿದೆ – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯುಅನುದಾನದ ಕೊರತೆಯಿಂದ ಕಲಾ ತಂಡಗಳ ಪ್ರಾಯೋಜಕತ್ವ ಕೈಬಿಟ್ಟಿದೆ. ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ರದ್ದು ಮಾಡಲಾಗಿದ್ದು, ಕಲಾವಿದರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಾರ್ಚ್‌– ಮೇ ಅವಧಿಯಲ್ಲಿ ಜಾತ್ರೆ, ಉತ್ಸವಗಳು ಎಲ್ಲೆಡೆ ನಡೆಯುತ್ತವೆ. ಈ ಅವಧಿಯಲ್ಲಿ ಕಲಾ ತಂಡಗಳು ಹಾಗೂ ಕಲಾವಿದರಿಗೆ ಸಹಜವಾಗಿಯೇ ಬೇಡಿಕೆ ಅಧಿಕ. ಸಂಗೀತ–ನೃತ್ಯೋತ್ಸವ, ನಾಟಕ–ಯಕ್ಷಗಾನ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ಪ್ರದರ್ಶನಗಳನ್ನು ಆಯೋಜಿಸಲಾಗುತ್ತದೆ. ರಾಜ್ಯದಲ್ಲಿ 2,500ಕ್ಕೂ ಅಧಿಕ ಸಾಂಸ್ಕೃತಿಕ ಸಂಘ–ಸಂಸ್ಥೆಗಳಿದ್ದು, ಅವುಗಳಲ್ಲಿ ಬಹುತೇಕವು ನಗರದಲ್ಲಿಯೇ ಅಸ್ತಿತ್ವ ಕಂಡುಕೊಂಡಿವೆ. ಸರ್ಕಾರ ಈ ಬಾರಿ ಸಂಘ–ಸಂಸ್ಥೆಗಳಿಗೆ ಅನುದಾನವನ್ನು ಕಡಿತ ಮಾಡಿರುವುದರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಳಿಮುಖವಾಗಿವೆ. ಕೊರೊನಾ ಭೀತಿಯಿಂದಾಗಿ ಕಲಾವಿದರ ಕೈಯಲ್ಲಿದ್ದ ಕಾರ್ಯಕ್ರಮಗಳು ರದ್ದಾಗಿದೆ.

ನಗರದಲ್ಲಿ 50 ಜಾನಪದ ಕಲಾ ತಂಡಗಳಿದ್ದು, ಅವುಗಳಿಗೆ ಕಲಾ ತಂಡಗಳ ಪ್ರಾಯೋಜಕತ್ವ ಯೋಜನೆಯಡಿ ಪಾವತಿಸಬೇಕಾದ ₹ 40 ಲಕ್ಷವನ್ನು ಇಲಾಖೆ ಬಾಕಿ ಉಳಿಸಿಕೊಂಡಿದೆ. ಅನುದಾನದ ಕೊರತೆಯಿಂದ ಏಪ್ರಿಲ್‌ ತಿಂಗಳವರೆಗೂ ಕಲಾ ತಂಡಗಳನ್ನು ಪ್ರಾಯೋಜಿಸುವುದಿಲ್ಲ. ರವೀಂದ್ರ ಕಲಾಕ್ಷೇತ್ರ, ನಯನ ರಂಗಮಂದಿರ, ಸಂಸ ಬಯಲು ರಂಗ ಮಂದಿರಗಳಲ್ಲಿ ಮಾ.31ರವರೆಗೆ ಮುಂಗಡ ಬುಕ್ಕಿಂಗ್‌ಗಳನ್ನು ರದ್ದು ಮಾಡಲಾಗಿದೆ. ಬಿಬಿಎಂಪಿ ಅಧೀನದಲ್ಲಿರುವ ಪುರಭವನಕ್ಕೂ ಬೀಗ ಹಾಕಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ಬಿ.ಪಿ. ವಾಡಿಯಾ, ಚೌಡಯ್ಯ ಸ್ಮಾರಕ ಭವನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕೇಂದ್ರಗಳಲ್ಲಿ ನಡೆಯಬೇಕಿದ್ದ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ.

ADVERTISEMENT

ಹಾಕಿದ ಹಣವೂ ನಷ್ಟ: ‘ಸರ್ಕಾರದ ಆದೇಶದಿಂದ ಕಲಾವಿದರು ಮನೆಯಲ್ಲಿಯೇ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ. 35 ಕಾಯಂ ಕಲಾವಿದರಿದ್ದು, ಅವರಿಗೆ ವೇತನ ನೀಡಬೇಕು. ಗುತ್ತಿಗೆ ಕಲಾವಿದರಿಗೆ ಗೌರವ ಧನ ಕೊಡಬೇಕು. ಸೆಟ್‌ಗಳ ನಿರ್ಮಾಣ ಸೇರಿದಂತೆ ಸಿದ್ಧತೆಗೆ ಹೂಡಿಕೆ ಮಾಡಿದ ಹಣವೂ ಬರಲಿಲ್ಲ’ ಎಂದುವಿಶ್ವಜ್ಯೋತಿ ಪಂಚಾಕ್ಷರ ನಾಟ್ಯಸಂಘದ ಮಾಲೀಕರಾಜಣ್ಣ ಜೇವರ್ಗಿ ತಿಳಿಸಿದರು.

ಗಾಯಕ ಎಚ್. ಫಲ್ಗುಣ, ‘ಕಲೆ ಯನ್ನೇ ನಂಬಿಕೊಂಡಿರುವ ಕಲಾವಿದರು ವೇದಿಕೆ ಇಲ್ಲದೆಯೇ ಮನೆಯಲ್ಲಿಯೇ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇಲಾಖೆ ಸಹ ಅನುದಾನ ಸ್ಥಗಿತ ಮಾಡಿದೆ. ಸ್ಥಿತಿ ಹೀಗೆ ಮುಂದುವರಿದರೆ ಕಲಾವಿದರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.