ADVERTISEMENT

ಕ್ಯಾನ್ವಾಸ್‌ಗೂ ಅಂಟಿದ ‘ಕೊರೊನಾ’!

ಕಣ್ಣಿಗೆ ಕಾಣದ ಕೊರೊನಾಕ್ಕೂ ಬಣ್ಣ ಬಳಿದ ಕಲಾವಿದ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 20:59 IST
Last Updated 31 ಮಾರ್ಚ್ 2020, 20:59 IST
ಕೊರೊನಾ ಭವಿಷ್ಯದ ಭೀಕರತೆ ಬಿಂಬಿಸುವ ಡಾ. ಜಗದೀಶ್‌ ಅವರ ಕೃತಿ
ಕೊರೊನಾ ಭವಿಷ್ಯದ ಭೀಕರತೆ ಬಿಂಬಿಸುವ ಡಾ. ಜಗದೀಶ್‌ ಅವರ ಕೃತಿ   

ಬೆಂಗಳೂರು: ಕಣ್ಣಿಗೆ ಕಾಣದಿದ್ದರೂ ಇಡೀ ವಿಶ್ವವನ್ನು ಬೆಚ್ಚಿ ಬೀಳಿಸಿದ ಸೂಕ್ಷ್ಮಾಣು ಜೀವಿ ಕೊರೊನಾ ವೈರಾಣುವನ್ನು ಬಣ್ಣದಲ್ಲಿ ಅದ್ದಿ ತೆಗೆದು ಕ್ಯಾನ್ವಾಸ್‌ ಮೇಲೆ ಹರಡಿದರೆ ಹೇಗಿರಬಹುದು?

ಅಂಥದೊಂದು ಪ್ರಯತ್ನವನ್ನು ಚಿತ್ರಕಲಾವಿದ ಡಾ. ಜಗದೀಶ್‌ ಬಾಣಂಕಿ ಅವರು ಮಾಡಿದ್ದಾರೆ. ಕೊರೊನಾದ ರುದ್ರನರ್ತನ, ಅದು ಭೂಮಂಡಲ ಮತ್ತು ಮನುಕುಲಕ್ಕೆ ತಂದೊಡ್ಡಬಹುದಾದ ಅಪಾಯವನ್ನು ಕ್ಯಾನ್ವಾಸ್‌ ಮೇಲೆ ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ.

ಕೊರೊನಾ ವಿರುದ್ಧದ ಹೋರಾಟದಲ್ಲಿ ಮಾನವ ಹೇಗೆ ಅಸಹಾಯಕನಾಗಿ ಕೈಚೆಲ್ಲಿ ಕುಳಿತಿದ್ದಾನೆ ಎಂದು ಡಾ. ಬಾಣಂಕಿ ರಚಿಸಿರುವ ಕಲಾಕೃತಿಯ ಮೂಲಕ ಸಂದೇಶ ಸಾರಲು ಹೊರಟಿದ್ದಾರೆ. ಒಬ್ಬ ಮಾಡಿದ ತಪ್ಪಿನಿಂದ ಇಡೀ ವಿಶ್ವ ಪರಿತಪಿಸುವಂತಾಗಿದೆ. ಮನುಕುಲ ಎದುರಿಸುತ್ತಿರುವ ಈ ಪ್ರಕ್ಷುಬ್ಧ ಸ್ಥಿತಿಗೆ ಒಬ್ಬ ಕಲಾವಿದ ಹೇಗೆ ಸ್ಪಂದಿಸುತ್ತಾನೆ ಎನ್ನುವುದಕ್ಕೆಅವರ ಚಿತ್ರ ಸಾಕ್ಷಿಯಾಗಿದೆ.ಶತಮಾ

ADVERTISEMENT

ನಗಳಿಂದ ಮಾನವ ತನ್ನದುರಾಸೆಗಳಿಗಾಗಿಪ್ರಕೃತಿಯೊಂದಿಗೆ ನಿರ್ದಯವಾಗಿನಡೆದುಕೊಂಡಿದ್ದಾನೆ. ಅದಕ್ಕೆ ಈಗ ಬೆಲೆ ತೆರುತ್ತಿದ್ದಾನೆ. ಪ್ರಕೃತಿ ಕೂಡ ಆಗಾಗ ಮನು ಕುಲಕ್ಕೆ ತಿರುಗೇಟು ನೀಡುತ್ತಲೇ ಬಂದಿದೆ. ಅದರಿಂದ ಆತ ಪಾಠ ಕಲಿಯುತ್ತಿಲ್ಲ. ಕೊರೊನಾ ಕೂಡ ಪ್ರಕೃತಿಯ ಮತ್ತೊಂದು ಹೊಸ ಪಾಠ ಎನ್ನುವುದು ಈ ಚಿತ್ರದ ಒಟ್ಟಾರೆ ಸಾರಾಂಶ.

ಕೊರೊನಾ ಜಾಗೃತಿಗಾಗಿ ಡಾ. ಬಾಣಂಕಿ ಚಿತ್ರಿಸಿರುವ ಈ ಕಲಾಕೃತಿಯಲ್ಲಿಇಡೀ ಭೂಮಂಡಲಕ್ಕೆ ಚುಚ್ಚುಮದ್ದಿನ ಮೂಲಕ ಔಷಧಿ ನೀಡುತ್ತಿರುವುದು ಮಾರ್ಮಿಕವಾಗಿದೆ.ಕೊರೊನಾ ಹೋರಾಟದಲ್ಲಿ ಸೋತಿರುವ ಮನುಷ್ಯ ಹೆಣಗಳ ರಾಶಿಗಳ ಮೇಲೆ ಏಕಾಂಗಿಯಾಗಿ ತಲೆ
ಮೇಲೆ ಕೈಹೊತ್ತು ಕುಳಿತಿರುವ ಚಿತ್ರ ಭವಿಷ್ಯದ ಭೀಕರತೆಯ ಸುಳಿವು ನೀಡುತ್ತದೆ. ಪ್ರಸ್ತುತ ಜಗತ್ತಿ‌ನ ಭವಿಷ್ಯದ ಪಂಚಾಂಗದಂತೆ ಕಾಣುತ್ತದೆ.

ಜಪಾನ್‌ನ ಹೀರೊಶಿಮಾ ಮತ್ತು ನಾಗಾಸಾಕಿಯ ಮೇಲೆ ನಡೆದ ಬಾಂಬ್‌ ದಾಳಿಗಿಂತ ಇಂದಿನ ಸ್ಥಿತಿ ಭೀಕರವಾಗಿದೆ ಎನ್ನುವ ಹಿರಿಯ ಕಲಾವಿದ ಜಗದೀಶ್‌ ಅವರು ಸುತ್ತಮುತ್ತಲಿನ ಬೆಳವಣಿಗೆಗಳಿಗೆ ಸ್ಪಂದಿಸುವ ಸೂಕ್ಷ್ಮ ಮನಸ್ಸಿನ ಕಲಾವಿದ. ಇರಾನ್‌–ಇರಾಕ್ ಯುದ್ಧದ ಸಂದರ್ಭದಲ್ಲಿ ಅವರು ಬಿಡಿಸದ ಯುದ್ಧದ ಭೀಕರತೆ ಬಿಂಬಿಸುವ ಕಲಾಕೃತಿ ಬಿಬಿಸಿಯಲ್ಲಿ ಪ್ರಸಾರವಾಗಿತ್ತು.

ಮೂಕಸಾಕ್ಷಿಯಾಗಿದೆ
ಪ್ರಕೃತಿ ಮುನಿದರೆ ಏನಾಗಬಹುದು ಎಂಬುದಕ್ಕೆ ಇಂದು ಇಡೀ ಜಗತ್ತು ಮೂಕಸಾಕ್ಷಿಯಾಗಿ ನಿಂತಿದೆ. ಕೊರೊನಾ ಕೂಡ ಮನುಷ್ಯನ ಮತ್ತೊಂದು ಸ್ವಯಂಕೃತ ಅಪರಾಧ.ಮನುಕುಲ ಒಟ್ಟಾಗಿ ಹೋರಾಟ ನಡೆಸಬೇಕಾದಸಮಯವಿದು.ಇಲ್ಲದಿದ್ದರೆ ಮಾನವ ಎಂಬ ಪ್ರಾಣಿ ಕೂಡ ಪಳೆಯುಳಿಕೆಯಾಗಬೇಕಾಗುತ್ತದೆ.ಮಾನವ ಜನಾಂಗಕ್ಕೆ ಕೊರೊನಾ ತಂದೊಡ್ಡಬಹುದಾದ ಅತಿ ದೊಡ್ಡ ಅಪಾಯವನ್ನು ಜನಸಾಮಾನ್ಯರಿಗೆ ಬಣ್ಣಗಳ ಮೂಲಕ ಹೇಳಲು ಪ್ರಯತ್ನಿಸಿದ್ದೇನೆ.
– ಡಾ. ಜಗದೀಶ್‌ ಬಾಣಂಕಿ,ಚಿತ್ರ ಕಲಾವಿದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.