ADVERTISEMENT

ಮಾಲ್‌ನಲ್ಲಿ ಕಾರ್ಡ್‌, ಅಂಗಡಿಯಲ್ಲಿ ‘ಕ್ಯಾಶ್‌’

ನೋಟುಗಳ ಮೂಲಕ ಸೋಂಕು ಹರಡುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2020, 21:06 IST
Last Updated 28 ಮಾರ್ಚ್ 2020, 21:06 IST
ಚಾಮರಾಜಪೇಟೆ 5ನೇ ಮುಖ್ಯರಸ್ತೆಯ ಮಳಿಗೆಯಲ್ಲಿ ಗ್ರಾಹಕರು ಆಹಾರ ಸಾಮಗ್ರಿಗಳನ್ನು ಖರೀದಿಸಿದರು    –-ಪ್ರಜಾವಾಣಿ ಚಿತ್ರ
ಚಾಮರಾಜಪೇಟೆ 5ನೇ ಮುಖ್ಯರಸ್ತೆಯ ಮಳಿಗೆಯಲ್ಲಿ ಗ್ರಾಹಕರು ಆಹಾರ ಸಾಮಗ್ರಿಗಳನ್ನು ಖರೀದಿಸಿದರು    –-ಪ್ರಜಾವಾಣಿ ಚಿತ್ರ   

ಬೆಂಗಳೂರು:ನೋಟುಗಳ ಮೂಲಕ ಕೊರೊನಾ ಸೋಂಕು ಹರಡುವ ಸಾಧ್ಯತೆ ಇರುವ ಕಾರಣದಿಂದ, ನಗರದ ಸೂಪರ್‌ ಮಾರ್ಕೆಟ್‌ಗಳಲ್ಲಿ, ಮಾಲ್‌ಗಳಲ್ಲಿ ಕಾರ್ಡ್‌ಗಳ ಮೂಲಕ ಮಾತ್ರ ಹಣವನ್ನು ಸ್ವೀಕರಿಸಲಾಗುತ್ತಿದೆ. ಆದರೆ, ಸಣ್ಣ ದಿನಸಿ ಅಂಗಡಿಗಳಲ್ಲಿ, ತರಕಾರಿ ಮಳಿಗೆಗಳಲ್ಲಿ ಉತ್ಪನ್ನಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ನಗದು ರೂಪದಲ್ಲಿಯೇ ಹಣವನ್ನು ತೆಗೆದುಕೊಳ್ಳುತ್ತಿದ್ದಾರೆ.

‘ಅಕ್ಕಿ, ಬೇಳೆ, ತರಕಾರಿ ಸೇರಿ ದಂತೆ ಎಲ್ಲವನ್ನೂ ₹20ರಿಂದ ₹30 ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಎಟಿಎಂಗಳಿಗೆ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಕಾರ್ಡ್‌ ಸ್ವೈಪ್‌ ಮಾಡುತ್ತೇನೆ ಎಂದರೂ ಸಣ್ಣ ದಿನಸಿ ಅಂಗಡಿಯವರು ಒಪ್ಪಿಕೊಳ್ಳುತ್ತಿಲ್ಲ’ ಎಂದು ಯಶವಂತಪುರದ ಜಯಪ್ರಕಾಶ್‌ ಅಸಮಾಧಾನ ವ್ಯಕ್ತಪಡಿಸಿದರು.

‘ಗರಿಷ್ಠ ಮಾರಾಟ ದರಕ್ಕಿಂತಲೂ ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವುದರಿಂದ ಸಣ್ಣ ಮಳಿಗೆಯವರು ಬಿಲ್‌ಗಳನ್ನೂ ಕೊಡುತ್ತಿಲ್ಲ. ಕಾರ್ಡ್‌ ಮೂಲಕ ಹಣ ಪಾವತಿಸಲೂ ಒಪ್ಪುತ್ತಿಲ್ಲ’ ಎಂದು ಮಹಾಲಕ್ಷ್ಮೀ ಲೇಔಟ್‌ ನಿವಾಸಿ ರಮೇಶ್‌ ದೂರಿದರು.

ADVERTISEMENT

ಕಾರ್ಡ್‌ ಬಳಕೆ:‘ನೋಟುಗಳು ಹಲವು ಜನರ ಕೈಗಳನ್ನು ದಾಟಿ ಬಂದಿರುತ್ತವೆ. ಇವುಗಳ ಮೂಲಕ ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ. ನಾವು ಕಾರ್ಡ್‌ಗಳ ಮೂಲಕ ಮಾತ್ರ ವಹಿವಾಟು ನಡೆಸುತ್ತಿದ್ದೇವೆ’ ಎಂದು ಮೆಟ್ರೊ ಸೂಪರ್‌ ಮಾರ್ಕೆಟ್‌ನ ಸಿಬ್ಬಂದಿ ಚಿದಾನಂದ್ ಹೇಳಿದರು.

‘ಕೊರೊನಾ ಸೋಂಕು ಹರಡುವ ಆತಂಕ ಪ್ರಾರಂಭಗೊಂಡ ದಿನದಿಂದಲೇ, ಡಿಜಿಟಲ್‌ ಪಾವತಿಗೆ ಜನ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.