ADVERTISEMENT

ಸಂಚಾರ ಕಾನ್‌ಸ್ಟೆಬಲ್‌ಗೂ ಸೋಂಕು: ಪೊಲೀಸರಲ್ಲಿ ಆತಂಕ

​ಪ್ರಜಾವಾಣಿ ವಾರ್ತೆ
Published 23 ಮೇ 2020, 2:46 IST
Last Updated 23 ಮೇ 2020, 2:46 IST
ಗೃಹಸಚಿವ ಬಸವರಾಜ ಬೊಮ್ಮಾಯಿ
ಗೃಹಸಚಿವ ಬಸವರಾಜ ಬೊಮ್ಮಾಯಿ   

ಬೆಂಗಳೂರು: ನಗರದ ಸಂಚಾರ ಠಾಣೆಯೊಂದರ ಕಾನ್‌ಸ್ಟೆಬಲ್‌ಗೆ ಕೊರೊನಾಸೋಂಕು ತಗುಲಿರುವುದು ದೃಢಪಟ್ಟಿದ್ದು, ಕಮಿಷನರೇಟ್ ವ್ಯಾಪ್ತಿಯ ಪೊಲೀಸರ ಆತಂಕಕ್ಕೆ ಕಾರಣವಾಗಿದೆ.

ರಾಮಕೃಷ್ಣ ಹೆಗಡೆ ನಗರ ನಿವಾಸಿಯಾ‌ದ ಕಾನ್‌ಸ್ಟೆಬಲ್, ಪೂರ್ವ ಸಂಚಾರ ವಿಭಾಗ ವ್ಯಾಪ್ತಿಯ ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕೊರೊನಾ ಕರ್ತವ್ಯ ಶುರುವಾಗಿ ಕೆಲ ದಿನಗಳ ನಂತರ ತಮ್ಮ ಕುಟುಂಬದವರನ್ನು ಊರಿಗೆ ಕಳುಹಿಸಿದ್ದರು. ನಂತರ, ಕಾನ್‌ಸ್ಟೆಬಲ್ ಒಬ್ಬರೇ ಮನೆಯಲ್ಲಿ ವಾಸವಿದ್ದರು.

ಫ್ರೇಜರ್ ಟೌನ್ ಹಾಗೂ ಸುತ್ತಮುತ್ತಲಿನ ಕೆಲ ಪ್ರದೇಶಗಳಲ್ಲಿ ಕಾನ್‌ಸ್ಟೆಬಲ್ ಕರ್ತವ್ಯ ನಿರ್ವಹಿಸಿದ್ದರು. ವಾಹನಗಳನ್ನು ತಡೆದು ತಪಾಸಣೆಯನ್ನೂ ಮಾಡಿದ್ದರು.

ADVERTISEMENT

ಇದೇ 20ರಂದು ಠಾಣೆ ಸಿಬ್ಬಂದಿ ಸಿ.ವಿ.ರಾಮನ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೆ ಒಳಪಟ್ಟಿದ್ದರು. ಗುರುವಾರ ರಾತ್ರಿ ವರದಿ ಬಂದಿದ್ದು, ಕಾನ್‌ಸ್ಟೆಬಲ್‌ಗೆ ಸೋಂಕು ಇರುವುದು ದೃಢಪಟ್ಟಿದ್ದು, ಉಳಿದವರದ್ದು ನೆಗೆಟಿವ್ ಫಲಿತಾಂಶ ಬಂದಿದೆ.

ಸಂಪರ್ಕವಿದ್ದವರ ಹುಡುಕಾಟ: ಕಾನ್‌ಸ್ಟೆಬಲ್ ಜೊತೆ ಕೆಲಸ ಮಾಡಿದ್ದ ಹಾಗೂ ಅವರ ಜೊತೆ ಸಂಪರ್ಕವಿಟ್ಟು ಕೊಂಡಿದ್ದವರನ್ನು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ಪತ್ತೆ ಮಾಡುತ್ತಿದೆ.

ಠಾಣೆ ಕೆಲ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಲಾಗಿದ್ದು, ಉಳಿದವರಿಗಾಗಿ ಹುಡುಕಾಟ ನಡೆದಿದೆ. ಠಾಣೆ, ಮನೆ ಹಾಗೂ ಸುತ್ತಮುತ್ತ ಸೋಂಕು ನಿವಾರಕ ದ್ರಾವಣ ಸಿಂಪಡಿಸಲಾಗಿದೆ. ಕಾನ್‌ಸ್ಟೆಬಲ್ ಕೆಲಸ ಮಾಡುತ್ತಿದ್ದ ಠಾಣೆಯನ್ನೂ ಸೀಲ್‌ಡೌನ್ ಮಾಡುವ ಸಾಧ್ಯತೆ ಇದೆ.

ಮತ್ತೊಮ್ಮೆ ಮಾದರಿ ಸಂಗ್ರಹ: ವರದಿ ಬರುತ್ತಿದ್ದಂತೆ ಕಾನ್‌ಸ್ಟೆಬಲ್‌ ಅವರನ್ನು ಆರೋಗ್ಯ ಇಲಾಖೆ ಸಿಬ್ಬಂದಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ದು ದಾಖಲಿಸಿದ್ದಾರೆ. ಮತ್ತೊಮ್ಮೆ ಗಂಟಲಿನ ದ್ರವ ಸಂಗ್ರಹಿಸಿ ಪರೀಕ್ಷೆಗಾಗಿ ಕಳುಹಿಸಲಾಗಿದೆ.

ಇತ್ತೀಚೆಗೆನಗರದ ಕಾನ್‌ಸ್ಟೆಬಲೊಬ್ಬರಿಗೆ ಕೊರೊನಾ ಇಲ್ಲದಿದ್ದರೂ ಪಾಸಿಟಿವ್ ವರದಿ ಬಂದಿತ್ತು. ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್ ಬಂದಿತ್ತು. ಇದೇ ಕಾರಣಕ್ಕೆ ಎರಡನೇ ಬಾರಿ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.

*

ಠಾಣೆ, ವಾಸವಿದ್ದ ಮನೆ ಸುತ್ತಮುತ್ತ ಸೋಂಕು ನಿವಾರಕಾ ದ್ರಾವಣ ಸಿಂಪಡಿಸುವಂತೆ ಸೂಚಿಸಲಾಗಿದೆ. ಸಂಪರ್ಕವಿದ್ದವರ ಮಾಹಿತಿಯನ್ನೂ ಕಲೆಹಾಕಲಾಗುತ್ತಿದೆ.
-ಬಿ.ಆರ್.ರವಿಕಾಂತೇಗೌಡ, ಜಂಟಿ ಪೊಲೀಸ್ ಕಮಿಷನರ್ (ಸಂಚಾರ)

****

ಕನಿಷ್ಠ 10 ದಿನಗಳಿಗೊಮ್ಮೆ ರಜೆ ನೀಡಿ

ಮೈಸೂರು: ‘ಕೊರೊನಾ ಸೋಂಕು ಹಿನ್ನೆಲೆಯಲ್ಲಿ 55 ವರ್ಷ ಮೀರಿದ ಪೊಲೀಸರಿಗೆ ಠಾಣೆಯಲ್ಲೇ ಸೇವೆಗೆ ನಿಯೋಜಿಸಬೇಕು ಹಾಗೂ ಸಿಬ್ಬಂದಿಗೆ ಕನಿಷ್ಠ 10 ದಿನಗಳಿಗೊಮ್ಮೆ ರಜೆ ನೀಡಲು ಸೂಚಿಸಲಾಗಿದೆ’ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪೊಲೀಸರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಸಿಬ್ಬಂದಿಯನ್ನು ವೈಜ್ಞಾನಿಕವಾಗಿ ಪಾಳಿ ಆಧಾರದಲ್ಲಿ ಸೇವೆಗೆ ನಿಯೋಜಿಸಬೇಕು ಎಂದು ಸೂಚಿಸಲಾಗಿದೆ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

‘ಕೊರೊನಾ ಸೋಂಕಿತರಾದ ಪೊಲೀಸ್ ಸಿಬ್ಬಂದಿಯ ಸಂಚಾರದ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ. ಅಗತ್ಯ ಕಂಡು ಬಂದರೆ ಕೆಲವು ಪೊಲೀಸ್ ಠಾಣೆಗಳನ್ನು ಹಾಗೂ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯನ್ನು ಸೀಲ್‌ಡೌನ್‌ ಮಾಡಲಾಗುತ್ತದೆ’ ಎಂದರು.

ಅಕ್ರಮ ಪ್ರವೇಶ ತಡೆಗೆ ಪರಿವೀಕ್ಷಣಾ ತಂಡ: ಆನೇಕಲ್ ಗಡಿ ಪ್ರದೇಶದಲ್ಲಿ ವಲಸಿಗರು ಅಕ್ರಮವಾಗಿ ರಾಜ್ಯವನ್ನು ಪ್ರವೇಶಿಸುತ್ತಿದ್ದಾರೆ. ಇದನ್ನು ತಡೆಯಲು ವಿಶೇಷ ಪರಿವೀಕ್ಷಣಾ ತಂಡ ರಚಿಸಲಾಗುವುದು ಎಂದು ತಿಳಿಸಿದರು. ಕೆಲ ಜಿಲ್ಲೆಗಳಿಗೆ ಈಗಾಗಲೇ 30 ಸಾವಿರಕ್ಕೂ ಅಧಿಕ ಜನರು ಬಂದಿದ್ದಾರೆ. ಇನ್ನು ದೊಡ್ಡ ಸಂಖ್ಯೆಯಲ್ಲಿ ಬರಲಿದ್ದಾರೆ. ಈ ಎಲ್ಲರನ್ನೂ ಕ್ವಾರಂಟೈನ್‌ ಮಾಡಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.