ADVERTISEMENT

ಬೆಂಗಳೂರಿನಲ್ಲಿ ಒಂದೇ ದಿನ 8 ಮಂದಿಗೆ ಸೋಂಕು

​ಪ್ರಜಾವಾಣಿ ವಾರ್ತೆ
Published 25 ಮೇ 2020, 20:06 IST
Last Updated 25 ಮೇ 2020, 20:06 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಜೆ.ಪಿ.ನಗರದ ಮಿಲೆನಿಯಮ್ ಅಪಾರ್ಟ್‍ಮೆಂಟ್‌ ಸಮುಚ್ಚಯದ ಮೂವರು ನಿವಾಸಿಗಳು ಸೇರಿದಂತೆ ಎಂಟು ಮಂದಿಗೆ ಸೋಮವಾರ ಒಂದೇ ದಿನ ಕೊರೊನಾ ಸೋಂಕು ತಗುಲಿದೆ. ಇದರಿಂದಾಗಿ ನಗರದಲ್ಲಿ ಸೋಂಕಿತರ ಸಂಖ್ಯೆ 274 ಕ್ಕೆ ತಲುಪಿದೆ.

ಚೆನ್ನೈನಿಂದ ಇದೇ 12ರಂದು ನಗರಕ್ಕೆ ವಾಪಸ್ ಆಗಿದ್ದ 57 ವರ್ಷದ ವ್ಯಕ್ತಿಗೆ ಸೋಂಕು ತಗುಲಿರುವುದು ಶನಿವಾರ ದೃಢಪಟ್ಟಿತ್ತು. ಈಗ ಅವರ ಸಂಪರ್ಕದಿಂದ 20 ವರ್ಷದ ಯುವತಿ, 27 ವರ್ಷದ ಯುವಕ ಹಾಗೂ 54 ವರ್ಷದ ಮಹಿಳೆಗೆ ಸೋಂಕು ಇರುವುದು ಖಚಿತವಾಗಿದೆ.

ನಗರದ ಎಸ್.ಕೆ.ಗಾರ್ಡನ್‌ನ ಕೊಳೆಗೇರಿಯಲ್ಲಿ ವಾಸಿಸುತ್ತಿದ್ದ 38 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಮಹಿಳೆ ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಅವರು ಕೆಲ ದಿನಗಳ ಹಿಂದೆಯಷ್ಟೇ ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಮಹಿಳೆಯ ಸಂಪರ್ಕಿತ ವ್ಯಕ್ತಿಗಳನ್ನು ಪತ್ತೆ ಮಾಡಲಾಗುತ್ತಿದೆ.

ADVERTISEMENT

ಪಾದರಾಯನಪುರದಲ್ಲಿ ರ‍್ಯಾಂಡಮ್‌ ಪರೀಕ್ಷೆ ವೇಳೆ 30 ವರ್ಷದ ಮಹಿಳೆಗೆ ಸೋಂಕು ಪತ್ತೆಯಾಗಿದೆ. ಅವರ ಪತಿ ಹಾಗೂ ಮಗನನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ಪಾದರಾಯನಪುರದಲ್ಲಿ ಸೋಂಕಿತರ ಸಂಖ್ಯೆ 64ಕ್ಕೆ ಏರಿದೆ.

4 ದಿನಗಳ ಹಿಂದೆ ಮಹಾರಾಷ್ಟ್ರದಿಂದ ನಗರಕ್ಕೆ ಬಂದಿದ್ದ 53 ವರ್ಷದ ಮಹಿಳೆಗೆ ಸೋಂಕು ತಗುಲಿದೆ. ಇಂಗ್ಲೆಂಡ್‌ನಿಂದ ನಗರಕ್ಕೆ ಬಂದ 25 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದ್ದು, ಸಂಪರ್ಕ ಪತ್ತೆ ಮಾಡಲಾಗುತ್ತಿದೆ.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಾಮನಗರದ ಮಹಿಳೆಗೆ ಕೆಲದಿನಗಳ ಹಿಂದೆ ಸೋಂಕು ಕಾಣಿಸಿಕೊಂಡಿತ್ತು. ಈಗ ಅವರ ಪತಿ ಸಹ ಕೋವಿಡ್‌–19 ರೋಗಪೀಡಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.