ADVERTISEMENT

ಕೋವಿಡ್‌–19 ಸೋಂಕು: ಅನಿವಾರ್ಯ–ಅಗತ್ಯ ಸೇವೆಗೆ ಮಾತ್ರ ಮೆಟ್ರೊ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2020, 15:19 IST
Last Updated 21 ಮಾರ್ಚ್ 2020, 15:19 IST
   

ಬೆಂಗಳೂರು: ‘ಕೋವಿಡ್‌–19’ ಹರಡುತ್ತಿರುವ ಹಿನ್ನೆಲೆಯಲ್ಲಿ, ಮೆಟ್ರೊ ರೈಲು ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವು ನಿಯಂತ್ರಣ ಕ್ರಮಗಳನ್ನು ಕೈಗೊಂಡಿರುವ ಬಿಎಂಆರ್‌ಸಿಎಲ್, ಅಗತ್ಯ ಸೇವೆಗಳನ್ನು ಒದಗಿಸುವವರು ಮತ್ತು ತೀರಾ ಅಗತ್ಯವಿರುವವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಕೊಡಲಾಗುವುದು ಎಂದು ಹೇಳಿದೆ.

ರೈಲಿನಲ್ಲಿ ಪ್ರಯಾಣಿಕರ ನಡುವೆ ಸೂಕ್ತ ಅಂತರವನ್ನು ಕಾಪಾಡಿಕೊಳ್ಳಬೇಕಾಗಿರುವುದರಿಂದ ಪ್ರತಿ ರೈಲಿನಲ್ಲಿ 150 ಪ್ರಯಾಣಿಕರಿಗೆ ಮಾತ್ರ ಆಸನಗಳು ಸೀಮಿತವಾಗಿರುತ್ತವೆ. ಪರ್ಯಾಯ ಆಸನಗಳನ್ನು ಖಾಲಿ ಬಿಡಬೇಕು ಮತ್ತು ಯಾರೇ ಆಗಲಿ ನಿಂತು ಪ್ರಯಾಣಿಸುವಂತಿಲ್ಲ ಎಂದು ಬೆಂಗಳೂರು ಮೆಟ್ರೊ ರೈಲು ನಿಗಮ ಹೇಳಿದೆ.

ಪ್ರತಿ ನಿಲ್ದಾಣದಲ್ಲಿ ಗರಿಷ್ಠ ಎರಡು ಪ್ರವೇಶ ಮತ್ತು ನಿರ್ಗಮನ ದ್ವಾರಗಳು ಮಾತ್ರ ಇರುತ್ತವೆ ಎಂದೂ ಅದು ಹೇಳಿದೆ.

ADVERTISEMENT

ಮಳಿಗೆ ಬಂದ್: ಮೆಟ್ರೊ ನಿಲ್ದಾಣಗಳಲ್ಲಿರುವ ಎಲ್ಲ ವಾಣಿಜ್ಯ ಮಳಿಗೆಗಳು, ಹೋಟೆಲ್‌ಗಳು ಮತ್ತು ವಾಹನ ನಿಲುಗಡೆ ಸ್ಥಳವನ್ನು ಮಾರ್ಚ್‌ 31ರವರೆಗೆ ಸಂಪೂರ್ಣವಾಗಿ ಮುಚ್ಚಲಾಗವುದು ಎಂದು ನಿಗಮ ತಿಳಿಸಿದೆ.

ವೇಳಾಪಟ್ಟಿಯಲ್ಲಿ ಬದಲಾವಣೆ

‘ಜನತಾ ಕರ್ಫ್ಯೂ’ ನಿಮಿತ್ತ ಮಾ. 22ರಂದು ಮೆಟ್ರೊ ರೈಲು ಸಂಚಾರ ಸಂಪೂರ್ಣ ಸ್ಥಗಿತಗೊಂಡಿರುತ್ತದೆ. 23ರಿಂದ ಮಾ. 31ರವರೆಗೆ ನಿಗಮವು ರೈಲು ಸಂಚಾರದ ವೇಳಾಪಟ್ಟಿಯಲ್ಲಿ ಕೆಲವು ಬದಲಾವಣೆ ಮಾಡಿದೆ.

* ಬೆಳಿಗ್ಗೆ 6ರಿಂದ ಬೆಳಿಗ್ಗೆ 8ಗಂಟೆಯವರೆಗೆ 10 ನಿಮಿಷಗಳ ಅಂತರದಲ್ಲಿ ಅಗತ್ಯ ಸೇವೆಗಳಿಗೆ ಕೆಲಸ ಮಾಡುವ ವ್ಯಕ್ತಿಗಳಿಗೆ ಮಾತ್ರ ಪ್ರಯಾಣಿಸಲು ಅವಕಾಶವಿರುತ್ತದೆ.

* ಬೆಳಿಗ್ಗೆ 8ರಿಂದ, ಬೆಳಿಗ್ಗೆ 10ರವರೆಗೆ ಐದು ನಿಮಿಷಗಳ ಅಂತರದಲ್ಲಿ ಅನಿವಾರ್ಯ ಮತ್ತು ಅಗತ್ಯವಿರುವ ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ.

* ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಮೆಟ್ರೊ ರೈಲು ಸಂಚರಿಸುವುದಿಲ್ಲ

* ಸಂಜೆ 4ರಿಂದ 5ರವರೆಗೆ 10 ನಿಮಿಷಗಳ ಅಂತರದಲ್ಲಿ, ಸಂಜೆ 5ರಿಂದ 7ರವರೆಗೆ ಐದು ನಿಮಿಷಗಳ ಅಂತರದಲ್ಲಿ, ಸಂಜೆ 7ರಿಂದ ರಾತ್ರಿ 8ರವರೆಗೆ 10 ನಿಮಿಷಗಳ ಅಂತರದಲ್ಲಿ ಮೆಟ್ರೊ ಸೇವೆ ಇರಲಿದೆ.

* ರಾತ್ರಿ 8ರಿಂದ ಮರುದಿನ ಬೆಳಿಗ್ಗೆ 6ರವರೆಗೆ ಮೆಟ್ರೊ ರೈಲು ಸಂಚಾರ ಇರುವುದಿಲ್ಲ.

ಯಾರು ಪ್ರಯಾಣಿಸಬಹುದು ?

* ವೈದ್ಯಕೀಯ, ಸಾರ್ವಜನಿಕ ಆರೋಗ್ಯ, ಪೊಲೀಸ್‌ ಮತ್ತು ಇತರೆ ಭದ್ರತಾ ಸೇವೆಗಳನ್ನು ಒದಗಿಸುವವರು

* ನೀರು, ವಿದ್ಯುತ್‌, ಸಾರಿಗೆ, ಪುರಸಭೆ ಮತ್ತು ಸರ್ಕಾರಿ ಸೇವೆಗಳಂತಹ ಅಗತ್ಯ ಸೇವೆಗಳನ್ನು ನಿರ್ವಹಿಸುವ ವ್ಯಕ್ತಿಗಳು.

* ಎಲ್ಲರೂ ತಮ್ಮ ಇಲಾಖೆ ನೀಡಿರುವ ಗುರುತಿನ ಚೀಟಿ ತೋರಿಸಬೇಕು

ಸಾರ್ವಜನಿಕರು ಏನು ಮಾಡಬೇಕು ?

* ಪ್ರಯಾಣದ ಅಗತ್ಯ ಮತ್ತು ಅನಿವಾರ್ಯತೆ ತೋರಿಸಲು ಸಾರ್ವಜನಿಕರು ತಮ್ಮ ಗುರುತಿನ ಚೀಟಿ ಅಥವಾ ಇನ್ನಾವುದೇ ಸಂಬಂಧಿತ ದಾಖಲೆಯನ್ನು ತೋರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.