ADVERTISEMENT

ದುಬಾರಿ ಶುಲ್ಕ | ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುತ್ತಿರುವ ಸೋಂಕಿತರು

ಸಕಾಲಕ್ಕೆ ಸಿಗದ ಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2020, 21:28 IST
Last Updated 17 ಜುಲೈ 2020, 21:28 IST

ಬೆಂಗಳೂರು: ಆಸ್ಪತ್ರೆಗಳಲ್ಲಿ ಹಾಸಿಗೆಯ ಕೊರತೆ, ಸಕಾಲಕ್ಕೆ ಬಾರದ ಆಂಬುಲೆನ್ಸ್‌, ವರದಿ ನೀಡಲು ಅಥವಾ ವರದಿಗಾಗಿ ಅಲೆದಾಡಿಸುವುದು, ಸಿಗದ ಚಿಕಿತ್ಸೆ...

ನಗರದಲ್ಲಿ ಶುಕ್ರವಾರವೂ ಕೊರೊನಾ ಸೋಂಕಿತರ ಪರದಾಟ ಮುಂದುವರಿಯಿತು. ಸೋಂಕಿತರು ಮಾತ್ರವಲ್ಲದೆ, ಉಳಿದ ರೋಗಿಗಳೂ ಚಿಕಿತ್ಸೆಗಾಗಿ ಅಲೆದಾಡಬೇಕಾಗಿದೆ.

ಗರ್ಭಿಣಿ ಅಲೆದಾಟ:ಚಂದ್ರಲೇಔಟ್ ನಿವಾಸಿ ಕೌಸರ್ ಬಾನು ಎಂಬುವರಿಗೆ ಬುಧವಾರ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಕುಟುಂಬದ ಸದಸ್ಯರು ದ್ವಿಚಕ್ರ ವಾಹನದಲ್ಲೇ ಅನೇಕ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ.

ADVERTISEMENT

ಕ್ವೀನ್ಸ್ ರಸ್ತೆಯ ಖಾಸಗಿ ಆಸ್ಪತ್ರೆ ದಾಖಲಿಸಿಕೊಂಡಿಲ್ಲ. ನಂತರ ಇನ್ನೊಂದು ಖಾಸಗಿ ಆಸ್ಪತ್ರೆಗೆ ಸಂಪರ್ಕಿಸಿದಾಗ, ₹85 ಸಾವಿರ ಕೇಳಿದ್ದಾರೆ. ಆದರೆ, ಆಯುಷ್ಮಾನ್ ಭಾರತ್ ಕಾರ್ಡ್ ಬಳಕೆ ಸಾಧ್ಯವಿಲ್ಲ ಎಂದು ಆಸ್ಪತ್ರೆಯವರು ಹೇಳಿದಾಗ, ಕೋರಮಂಗಲದ ಖಾಸಗಿ ಆಸ್ಪತ್ರೆಗೆ ತೆರಳಿದ್ದಾರೆ. ಅಲ್ಲಿಯೂ ಸ್ಪಂದಿಸಿಲ್ಲ. ನಂತರ 1912 ಸಹಾಯವಾಣಿಗೆ ಕರೆ ಮಾಡಿದರೂ ಸ್ಪಂದನೆ ಸಿಕ್ಕಿಲ್ಲ. ಬಳಿಕ ವಾಣಿವಿಲಾಸ ಆಸ್ಪತ್ರೆಗೆ ದಾಖಲಿಸಿದ್ದು, ಗುರುವಾರ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ದೊರೆಯದ ಸುರಕ್ಷತಾ ಕಿಟ್‌:ರಾಜಾಜಿನಗರದ ಇಎಸ್ಐ ಆಸ್ಪತ್ರೆಯಲ್ಲಿ ಹೌಸ್ ಕೀಪಿಂಗ್ ಸಿಬ್ಬಂದಿಗೆ ಮಾಸ್ಕ್, ಪಿಪಿಇ ಕಿಟ್ ಹಾಗೂ ರಜೆ ಸೌಲಭ್ಯ ನೀಡದೆ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿ ಹೌಸ್ ಕೀಪಿಂಗ್ ಸಿಬ್ಬಂದಿ ಶುಕ್ರವಾರ ಆಸ್ಪತ್ರೆಯ ಆವರಣದಲ್ಲಿ ಪ್ರತಿಭಟನೆ ನಡೆಸಿದರು.

‘ನಮ್ಮ ಜೊತೆಕೆಲಸ ಮಾಡುವ ಮೂವರಿಗೆ ಈಗಾಗಲೇ ಸೋಂಕು ದೃಢಪಟ್ಟಿದ್ದು, ಇಬ್ಬರನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಉಳಿದ ಒಬ್ಬರಿಗೆ ಚಿಕಿತ್ಸೆ ನೀಡಲು ನಿರಾಕರಿಸುತ್ತಿದ್ದಾರೆ. ಜತೆಗೆ ಸೋಂಕಿತರ ಸಂಪರ್ಕದಲ್ಲಿದ್ದ ಇತರೆ ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡದೇ ನಿರಂತರ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದಾರೆ’ ಎಂದು ಸಿಬ್ಬಂದಿ ಆರೋಪಿಸಿದರು.

ವರದಿಗಾಗಿ ಅಲೆದಾಟ:‘ರಾಜಾಜಿನಗರದ ಖಾಸಗಿ ಆಸ್ಪತ್ರೆಯಲ್ಲಿ ₹5 ಸಾವಿರ ಪಾವತಿಸಿ, ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದ್ದೆ. ಏಳು ದಿನವಾದರೂ ವರದಿ ಬಂದಿಲ್ಲ. ನನಗೆ ಸೋಂಕು ಇದೆಯೋ, ಇಲ್ಲವೋ ಎಂಬ ಗೊಂದಲದಲ್ಲಿಯೇ ದಿನ ದೂಡುವಂತಾಗಿದೆ. ಸೋಂಕು ತಗುಲಿದ್ದರೆ, ನನ್ನಿಂದ ಉಳಿದವರಿಗೂ ಹರಡಿದರೆ ಏನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ. ಆಸ್ಪತ್ರೆಯವರಿಗೆ ಕೇಳಿದರೆ ಏಕೆ ಅವಸರ ಮಾಡುತ್ತೀರಿ ಎಂದು ನನಗೇ ದಬಾಯಿಸುತ್ತಾರೆ’ ಎಂದು ವ್ಯಕ್ತಿಯೊಬ್ಬರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.