ADVERTISEMENT

ರಜೆ ನೀಡಿದರೂ ಪರೀಕ್ಷೆ ನಡೆಸಿದ ಶಾಲೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2020, 22:02 IST
Last Updated 15 ಮಾರ್ಚ್ 2020, 22:02 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಮಲನಗರ (ಬೀದರ್ ಜಿಲ್ಲೆ): ಕೊರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ರಾಜ್ಯದಾದ್ಯಂತ ಎಲ್ಲ ಶಾಲಾ– ಕಾಲೇಜುಗಳಿಗೆ ರಜೆ ನೀಡಿದ್ದರೂ ಪಟ್ಟಣದ ‘ಗೋಲ್ಡನ್‌ ವ್ಯಾಲಿ’ ಶಾಲೆ ಭಾನುವಾರವೂ ಕಾರ್ಯನಿರ್ವಹಿಸಿತು.

ಇದಕ್ಕೆ ಪ್ರತಿಕ್ರಿಯಿಸಿದ ಸಿಆರ್‌ಪಿ ನಾಗೇಶ ಸಂಗಮೆ, ‘ಶಾಲೆಗಳಿಗೆ ರಜೆ ಘೋಷಿಸುವಂತೆ ಈಗಾಗಲೇ ತಿಳಿಸಲಾಗಿದೆ. ರಜೆಯ ಆದೇಶ ಉಲ್ಲಂಘನೆಯಾಗಿದ್ದರೆ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಿ, ಆ ಶಾಲೆಯ ವಿರುದ್ಧ ಶಿಸ್ತು ಕ್ರಮ ಜರುಗಿಸುವಂತೆ ಕೋರಲಾಗುವುದು’ ಎಂದರು.

‘ಭಾನುವಾರ ಶಾಲೆ ನಡೆಸುವ ಕುರಿತು ನನಗೆ ಮಾಹಿತಿ ಇರಲಿಲ್ಲ. ಸೋಮವಾರ ಶಾಲೆಗೆ ರಜೆ ನೀಡುವಂತೆ ಮುಖ್ಯಶಿಕ್ಷಕರಿಗೆ ಸೂಚಿಸಿದ್ದೇನೆ’ ಎಂದು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ ಅರುಣ ಪಾಟೀಲ ತಿಳಿಸಿದರು.

ADVERTISEMENT

ಸರ್ಕಾರದ ಆತುರದ ನಿರ್ಧಾರ: ಡಿಕೆಶಿ

ಕನಕಪುರ: ಕೊರೊನಾ ವೈರಸ್‌ ವಿಚಾರದಲ್ಲಿ ಸರ್ಕಾರ ಎಡವುತ್ತಿದೆ ಎಂದು ಕೆಪಿಸಿಸಿ ನಿಯೋಜಿತ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿ ಆರೋಪಿಸಿದರು.

ಇಲ್ಲಿನ ತಮ್ಮ ನಿವಾಸದಲ್ಲಿ ಭಾನುವಾರ ಮಾತನಾಡಿದ ಅವರು, ಕೇಂದ್ರ ಮತ್ತು ರಾಜ್ಯ ಸರ್ಕಾರ ಜನರಲ್ಲಿ ಜಾಗೃತಿ ಮೂಡಿಸಿ ಕಾಯಿಲೆ ನಿಯಂತ್ರಣಕ್ಕೆ ಕ್ರಮಕೈಗೊಳ್ಳದೆ ಆತಂಕ ಸೃಷ್ಟಿಸುತ್ತಿದೆ ಎಂದರು.

‘ಕೊರೊನಾಗೆ ಸಂಬಂಧಿಸಿದಂತೆ ಪ್ರತ್ಯೇಕ ಬಜೆಟ್‌ ಇಡಬೇಕು. ಏಕಾಏಕಿ ತುರ್ತು ಪರಿಸ್ಥಿತಿಯನ್ನು ಹೇರಿದರೆ ಜನರ ಸ್ಥಿತಿ ಏನಾಗಬೇಕು’ ಎಂದು ಅವರು ಪ್ರಶ್ನಿಸಿದರು.

ಕೋಳಿ ಮರಿಗಳ ಸಮಾಧಿ

ತುರುವೇಕೆರೆ: ಕೊರೊನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿರುವುದರಿಂದ ತಾಲ್ಲೂಕಿನ ದಂಡಿನಶಿವರ ಹೋಬಳಿಯ ಡಿ.ಕಲ್ಕೆರೆ ಗ್ರಾಮದ ನಂದನ್ ಕುಮಾರ್ ಅವರು ತಮ್ಮ ಫಾರಂನಲ್ಲಿ ಸಾಕಿದ್ದ 12 ಸಾವಿರಕ್ಕೂ ಹೆಚ್ಚು ಕೋಳಿಮರಿಗಳನ್ನು ಗುಂಡಿ ತೆಗೆದು ಜೀವಂತವಾಗಿ ಸಮಾಧಿ ಮಾಡಿದ್ದಾರೆ.

ನಂದನ್ ಹಲವು ವರ್ಷಗಳಿಂದ ಕೋಳಿ ಫಾರಂ ನಡೆಸುತ್ತಿದ್ದಾರೆ. ಶನಿವಾರ ರಾತ್ರಿ 12ರ ಸಮಯದಲ್ಲಿ ಟ್ರಾಕ್ಟರ್‌ನಲ್ಲಿ ಕೋಳಿಮರಿಗಳನ್ನು ತುಂಬಿಕೊಂಡು ಗ್ರಾಮದ ಹೊರವಲಯದಲ್ಲಿ ತೆಗೆಸಿದ್ದ ಗುಂಡಿಯಲ್ಲಿ ಮುಚ್ಚಿದ್ದಾರೆ.

ಎಚ್‌ಡಿಕೆ ಟೀಕೆಗೆ ಸಚಿವರ ತಿರುಗೇಟು!

ಬೆಂಗಳೂರು: ಕೊರೊನಾ ವೈರಸ್‌ ನಿಯಂತ್ರಣ ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯ ಸಚಿವರು ಮತ್ತು ವೈದ್ಯಕೀಯ ಶಿಕ್ಷಣ ಸಚಿವರು ಪರಸ್ಪರ ಸಹಕಾರದಿಂದ ಕಾರ್ಯ ನಿರ್ವಹಿಸಬೇಕು, ಪ್ರಚಾರಕ್ಕಾಗಿ ಪ್ರಹಸನ ಮಾಡಬಾರದು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರ ಟೀಕೆಗೆ, ಸಚಿವರಾದ ಶ್ರೀರಾಮುಲು ಮತ್ತು ಸಿ.ಟಿ.ರವಿ ತಿರುಗೇಟು ನೀಡಿದ್ದಾರೆ.

‘ಆರೋಗ್ಯ ಸಚಿವರು, ವೈದ್ಯಕೀಯ ಶಿಕ್ಷಣ ಸಚಿವರು ಒಮ್ಮತದಿಂದ ಕಾರ್ಯ ನಿರ್ವಹಿಸಲಿ. ಜನರಲ್ಲಿ ಗೊಂದಲ ಮೂಡಿಸು
ವುದು ಬೇಡ’ ಎಂದು ಕುಮಾರಸ್ವಾಮಿ ಭಾನುವಾರ ಸರಣಿ ಟ್ವೀಟ್‌ ಮಾಡಿದ್ದರು.

‘ಖಾಲಿ ಇರುವ ಸರ್ಕಾರಿ ಕಟ್ಟಡಗಳನ್ನು ವೈರಸ್‌ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಳಸಬೇಕು. ಆಸ್ಪತ್ರೆಗಳಲ್ಲಿ ಇತರ ರೋಗಿಗಳೊಂದಿಗೆ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವುದು ಎಷ್ಟರ ಮಟ್ಟಿಗೆ ಸರಿ’ ಎಂದೂ ಪ್ರಶ್ನಿಸಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಸಚಿವ ಬಿ.ಶ್ರೀರಾಮುಲು, ‘ನಾನು ಮತ್ತು ಸುಧಾಕರ್‌ ಜತೆಗೆ ಕೆಲಸ ಮಾಡುತ್ತಿದ್ದೇವೆ. ಮುಂಜಾಗ್ರತಾ ಕ್ರಮಗಳನ್ನು ಪರಸ್ಪರ ಚರ್ಚಿಸಿಯೇ ತೆಗೆದುಕೊಂಡಿದ್ದೇವೆ. ಗೊಂದಲದಲ್ಲಿರುವ ನೀವು ಜನರನ್ನು ಗೊಂದಲಕ್ಕೆ ದೂಡಬೇಡಿ’ ಎಂದಿದ್ದಾರೆ.

ಕಲಬುರ್ಗಿಯಲ್ಲಿ ಮಾತನಾಡಿದ ಸಚಿವ ಸಿ.ಟಿ.ರವಿ, ‘ಆರೋಗ್ಯ ಇಲಾಖೆಯು ಮುಂಜಾಗ್ರತೆ ವಹಿಸಿ ಎನ್ನಬಹುದು; ನಿರ್ದೇಶನ ಕೊಡಬ
ಹುದು. ಒಟ್ಟು ಸಮಾಜ ಎದುರಿಸಬೇಕಾದ ವಿಷಯವಿದು. ಇಲಾಖೆ ಅಥವಾ ವ್ಯಕ್ತಿ ಮಾಡುವ ಕೆಲಸವಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.