ಎಫ್‌ಐಆರ್
ಬೆಂಗಳೂರು: ಕಂಪನಿಗೆ ಸೇರಿದ ₹250 ಕೋಟಿಯನ್ನು ದುರುಪಯೋಗ ಮಾಡಿಕೊಂಡಿರುವ ಆರೋಪದ ಮೇರೆಗೆ ಗೇಮ್ಸ್‌ಕ್ರಾಪ್ಟ್ ಟೆಕ್ನಾಲಜೀಸ್‌ನ ಹಣಕಾಸು ವಿಭಾಗದ ಮಾಜಿ ಅಧಿಕಾರಿ ವಿರುದ್ಧ ಮಾರತ್‌ಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗೇಮ್ಸ್‌ಕ್ರಾಪ್ಟ್ ಟೆಕ್ನಾಲಜೀಸ್‌ನ ಉಪಾಧ್ಯಕ್ಷ ಗುಲ್ಸಾನ್ ಯಾದವ್ ಅವರು ನೀಡಿದ ದೂರು ಆಧರಿಸಿ ಹೆಬ್ಬಾಳದ ನಿವಾಸಿ ರಮೇಶ್ ಬಾಬು (47) ಅವರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಕಂಪನಿ ಹಣವನ್ನು ರಮೇಶ್ ಬಾಬು ಅವರು ಟ್ರೇಡಿಂಗ್ ಕಂಪನಿಗಳಲ್ಲಿ ಹೂಡಿಕೆ ಮಾಡಿಕೊಂಡು ಅವ್ಯವಹಾರ ನಡೆಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗೇಮ್ಸ್‌ಕ್ರಾಫ್ಟ್ ಟೆಕ್ನಾಲಜೀಸ್ ಆನ್‌ಲೈನ್ ಗೇಮ್ಸ್‌ಗೆ ಸಂಬಂಧಿಸಿದ ಕಂಪನಿ ಆಗಿತ್ತು. ಕೇಂದ್ರ ಸರ್ಕಾರವು ಇತ್ತೀಚೆಗೆ ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ–2025 ಜಾರಿಗೆ ತಂದ ಮೇಲೆ ಕಂಪನಿ ತನ್ನ ಕಾರ್ಯ ಚಟುವಟಿಕೆ ಸ್ಥಗಿತಗೊಳಿಸಿತ್ತು.
ಆರೋಪಿಯ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್‌ಗಳಾದ 316(4), 318(4), 335, 344, 336(2) ಅಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದರು.
ರಮೇಶ್ ಬಾಬು ಅವರು ಕಳೆದ ನಾಲ್ಕು ವರ್ಷದಿಂದ ಕಂಪನಿ ಹಣವನ್ನು ತಮ್ಮ ಹೆಸರಿನಲ್ಲಿ ಹೂಡಿಕೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
‘ಆರೋಪಿ ರಮೇಶ್ ಬಾಬು ಅವರು ನಾಲ್ಕು ತಿಂಗಳ ಹಿಂದೆಯೇ ವಿದೇಶಕ್ಕೆ ಪರಾರಿಯಾಗಿರುವ ಮಾಹಿತಿ ಸಿಕ್ಕಿದೆ. ಆರೋಪಿಗೆ ನೋಟಿಸ್ ಜಾರಿಗೊಳಿಸಿ, ಮುಂದಿನ ವಿಚಾರಣೆ ನಡೆಸಲಾಗುವುದು’ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.