ADVERTISEMENT

ಸಂಸ್ಕೃತಿ ಪರಿಚಯಿಸಿದ ‌‌‘ಕಾಸ್ಟ್ಯೂಮ್‌ ಪ್ಲೇ’

ರಂಜಿಸಿದ ಆನಿಮೇಷನ್‌ ಗೇಮಿಂಗ್‌ ಪಾತ್ರಗಳು

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2019, 20:07 IST
Last Updated 24 ಮಾರ್ಚ್ 2019, 20:07 IST
ಸ್ಪೈಡರ್‌ಮ್ಯಾನ್‌ ವೇಷ ಧರಿಸಿದ್ದ ಯುವಕರು ಕಸರತ್ತು ಪ್ರದರ್ಶಿಸಿದರು–ಪ್ರಜಾವಾಣಿ ಚಿತ್ರ
ಸ್ಪೈಡರ್‌ಮ್ಯಾನ್‌ ವೇಷ ಧರಿಸಿದ್ದ ಯುವಕರು ಕಸರತ್ತು ಪ್ರದರ್ಶಿಸಿದರು–ಪ್ರಜಾವಾಣಿ ಚಿತ್ರ   

ಬೆಂಗಳೂರು: ಜಪಾನ್‌ ಅಭಿವೃದ್ಧಿಪಡಿಸಿದ ಅನಿಮೇಷನ್‌ ಆಟಗಳ ಪಾತ್ರಗಳವರ್ಣರಂಜಿತ ವೇಷಭೂಷಣ ಧರಿಸಿದ್ದ ಪ್ರವಾಸಿಗರು, ಅವರೊಂದಿಗೆ ಫೋಟೊ ತೆಗೆಸಿಕೊಳ್ಳಲು ಮುಗಿಬಿದ್ದ ಜನ, ಗೇಮಿಂಗ್ ಸ್ಟೇ‌ಷನ್‌ಗಳಲ್ಲಿ ವಿಡಿಯೊ ಗೇಮ್ಸ್‌ ಆಡಲು ಸಾಲಾಗಿ ನಿಂತಿದ್ದ ಮಕ್ಕಳ ದಂಡು...

ಬೆಂಗಳೂರಿನ ಜಪಾನ್ ರಾಯಭಾರ ಕಚೇರಿ ಸಹಯೋಗದೊಂದಿಗೆ ಜಪಾನ್‌ ಸಂಸ್ಕೃತಿಯನ್ನು ಉತ್ತೇಜಿಸುವ ಸಲುವಾಗಿ ಮಾಂಗಾ ಪ್ಲಾನೆಟ್‌ ಸಂಸ್ಥೆಯು ಭಾನುವಾರ ಆಯೋಜಿಸಿದ್ದ ‘ಕಾಸ್ಟ್ಯೂಮ್‌ ಪ್ಲೇ’ ಕಾರ್ಯಕ್ರಮದಲ್ಲಿ‌‌ ಕಂಡುಬಂದ ನೋಟವಿದು.

ಪಕ್ಷಿ, ಪ್ರಾಣಿಗಳ ವೇಷಧಾರಿಗಳು ಹಾಗೂಬಣ್ಣಬಣ್ಣದ ಕಾರ್ಟೂನ್‌ಗಳು ಸೂಜಿಗಲ್ಲಿನಂತೆ ಸೆಳೆದವು. ಸೈನಿಕ, ಕಮಾಂಡರ್‌, ಕಿಂಗ್‌ ಪ್ರೊಟೆಸ್ಟ್‌, ಸ್ಪೈಡರ್‌ಮ್ಯಾನ್‌, ಶಕ್ತಿಮಾನ್‌ ವೇಷಧಾರಿಗಳು ಆ ಪಾತ್ರಗಳಂತೆ ನಟಿಸಿ ಮೋಡಿ ಮಾಡಿದರು. ಗೋಸ್ಟ್‌, ನಾರೋಟೊ, ಒನ್‌ ಫೀಸ್‌, ಸೂಪರ್‌ ಮ್ಯಾನಿಯೋಂ, ಅವತಾರ್‌, ಏಲಿಯನ್ಸ್‌.... ರೂಪದಲ್ಲಿ ಕಾಣಿಸಿಕೊಂಡ ಪ್ರವಾಸಿಗರು ಜನರ ಮೆಚ್ಚುಗೆಗೆ ಪಾತ್ರರಾದರು. ತಮ್ಮ ಇಷ್ಟದ ‍ವೇಷ ಧರಿಸಿದ ಪ್ರವಾಸಿಗರೊಂದಿಗೆ ಜನ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.

ADVERTISEMENT

ಅನಿಮೇಷನ್‌ ಪಾತ್ರಗಳ ವೇಷ ಧರಿಸಲು ಆರಂಭದಲ್ಲಿ 200 ಮಂದಿಗೆ ಮಾತ್ರ ಅವಕಾಶ ನೀಡಲಾಗಿತ್ತು. ವೀಕ್ಷಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಇನ್ನಷ್ಟು ಮಂದಿಗೆ ಅವಕಾಶ ಮಾಡಿಕೊಡಲಾಯಿತು. ವಿಷಯ ತಿಳಿಯುತ್ತಿದ್ದಂತೆ ತಮಗಿಷ್ಟದ ವೇಷಗಳನ್ನು ಧರಿಸಲು ಜನರು ಮುಗಿಬಿದ್ದರು. ಸ್ನೇಹಿತರೊಂದಿಗೆ ಬಂದಿದ್ದ ಯುವಕ–ಯುವತಿಯರು, ಮಕ್ಕಳೊಂದಿಗೆ ಆಗಮಿಸಿದ್ದ ಪೋಷಕರು ಈ ಅವಕಾಶ ಬಳಸಿಕೊಂಡು ತಾವೂ ಪಾತ್ರಗಳಾದರು.

ಚಿಣ್ಣರ ಚಿತ್ತ ಸೋನಿ ಇಂಡಿಯಾದ ಗೇಮಿಂಗ್ ಸ್ಟೇಷನ್‌ಗಳತ್ತ ಹರಿದಿತ್ತು. ಮೊದಲು ಹಾಕಿದ್ದ ವೇಷಗಳನ್ನು ಕಳಚಿಟ್ಟ ಮಕ್ಕಳು ವಿಡಿಯೊ ಗೇಮ್‌ ಮೊರೆಹೋದರು. ನಾಯಕನ್ನು ರೌಡಿಗಳು ಸುತ್ತುವರಿದು ದಾಳಿ ನಡೆಸುವ ‘ರೌಂಡ್ ಫೈಟ್’, ‘ಡೇ ಗಾನ್‌’, ‘ಕಾರ್‌’ ಮತ್ತು ‘ಬೈಕ್‌ ರೇಸ್‌‘ಗಳಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಜಪಾನ್‌ ಸಂಸ್ಕೃತಿ ಬಿಂಬಿಸುವ ಪುಸ್ತಕಗಳೂ ಮಾರಾಟಕ್ಕಿದ್ದವು.

ಜಪಾನಿನ ಸಂಸ್ಕೃತಿಯನ್ನು ಭಾರತದಲ್ಲಿ ಪರಿಚಯಿಸುವುದು, ಉಭಯದೇಶಗಳ ಸಂಬಂಧ ಗಟ್ಟಿಗೊಳಿಸುವುದು ಮತ್ತು ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಉದ್ದೇಶವಾಗಿತ್ತು. ಸೇಂಟ್ ಮಾರ್ಕ್ಸ್‌ ಹೋಟೆಲ್‌ ಆವರಣದಿಂದ ಸೇಂಟ್‌ ಮಾರ್ಕ್ಸ್‌ ವೃತ್ತದವರೆಗೆ ಜಾಥಾ ನಡೆಯಿತು.

ಬೆಂಗಳೂರು–ಟೋಕಿಯೊ ನಡುವೆ ನೇರ ವಿಮಾನ

‘ಜಪಾನ್ ಏರ್‌ಲೈನ್ಸ್‌ನಿಂದ ಬೆಂಗಳೂರು-ಟೋಕಿಯೊಗೆ ನೇರ ವಿಮಾನ ಯಾನ ಆರಂಭಿಸಲಾಗಿದೆ. ಇಲ್ಲಿಂದ ಕೇವಲ 9 ಗಂಟೆಯೊಳಗೆ ಟೋಕಿಯೊ ತಲುಪಬಹುದು. ಇದಕ್ಕೂ ಮುನ್ನ ನವದೆಹಲಿ, ಚೆನ್ನೈ ಮೂಲಕ ಟೋಕಿಯೋಗೆ ಪ್ರಯಾಣಿಸಬೇಕಿತ್ತು. ವ್ಯಾಪಾರ ದೃಷ್ಟಿಯಿಂದಲೂಇದು ಸಹಕಾರಿ ಆಗಲಿದೆ’ ಎಂದು ಜಪಾನ್‌ನ ರಾಯಭಾರಿ ಕಚೇರಿಯ ಕಾನ್ಸಲ್‌ ಜನರಲ್‌ ಟಕಾಯುಕಿ ಕಿತಾಗವ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.