ADVERTISEMENT

ದಂಪತಿ ಅಡ್ಡಗಟ್ಟಿ ಕಿರುಕುಳ ಪೊಲೀಸರ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2023, 5:20 IST
Last Updated 8 ಫೆಬ್ರುವರಿ 2023, 5:20 IST
   

ಬೆಂಗಳೂರು: ‘ಆಸ್ಪತ್ರೆಗೆ ಹೊರಟಿದ್ದ ತಂದೆ–ತಾಯಿಯನ್ನು ಅಡ್ಡಗಟ್ಟಿದ್ದ ಜಯನಗರ ಸಂಚಾರ ಠಾಣೆ ಪೊಲೀಸರು, ಅಮಾನವೀಯವಾಗಿ ವರ್ತಿಸಿ ಕಿರುಕುಳ ನೀಡಿದ್ದಾರೆ’ ಎಂದು ಆರೋಪಿಸಿ ಎನ್‌ಎಸ್‌ಯುಐ ಪ್ರಧಾನ ಕಾರ್ಯದರ್ಶಿ ರಾಕೇಶ್ ಅವರು ಇನ್‌ಸ್ಪೆಕ್ಟರ್‌ಗೆ ದೂರು ನೀಡಿದ್ದಾರೆ.

‘ದಂಡ ವಸೂಲಿ ನೆಪದಲ್ಲಿ ತಂದೆ–ತಾಯಿ ಜೊತೆ ಅಗೌರವದಿಂದ ನಡೆದುಕೊಂಡು ದೌರ್ಜನ್ಯ ಎಸಗಲಾಗಿದೆ. ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಿ’ ಎಂದು ರಾಕೇಶ್ ಆಗ್ರಹಿಸಿದ್ದಾರೆ.

ಕೀ ಕಿತ್ತುಕೊಂಡು ದೌರ್ಜನ್ಯ: ‘ತಾಯಿ ಮಂಗಳ (47), ಮಧುಮೇಹ ಹಾಗೂ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರು. ಅವರಿಗೆ ಚಿಕಿತ್ಸೆ ಕೊಡಿಸಲೆಂದು ತಂದೆ ಮಲ್ಲೇಶ್ (50) ದ್ವಿಚಕ್ರ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದರು. ಸಂಗಂ ವೃತ್ತದ ಬಳಿ ವಾಹನ ಅಡ್ಡಗಟ್ಟಿದ್ದ ಪೊಲೀಸರು, ಕೀ ಕಿತ್ತುಕೊಂಡಿದ್ದರು. ₹ 5,000 ಬಾಕಿ ದಂಡ ಪಾವತಿಸುವಂತೆ ಒತ್ತಾಯಿಸಿದ್ದರು’ ಎಂದು ರಾಕೇಶ್ ಹೇಳಿದ್ದಾರೆ.

ADVERTISEMENT

‘ಆಸ್ಪತ್ರೆಗೆ ಹೊರಟಿರುವುದಾಗಿ ಹೇಳಿದ್ದ ತಂದೆ, ₹ 2 ಸಾವಿರ ಮಾತ್ರ ಇರುವುದಾಗಿ ತಿಳಿಸಿದ್ದರು. ಮತ್ತಷ್ಟು ಕೋಪಗೊಂಡಿದ್ದ ಪೊಲೀಸರು, ದಂಡ ಕಟ್ಟಬೇಕೆಂದು ರಶೀದಿ ನೀಡಿದ್ದರು. ವಾಹನ ಹಾಗೂ ತಾಯಿಯನ್ನು ಸ್ಥಳದಲ್ಲೇ ಬಿಟ್ಟು ಹಣ ತರಲೆಂದು 2 ಕಿ.ಮೀ. ದೂರದಲ್ಲಿರುವ ಮನೆಗೆ ತಂದೆ ನಡೆದುಕೊಂಡು ಹೋಗಿದ್ದರು. ಗಂಟೆ ಕಾಲ ತಾಯಿ ರಸ್ತೆಯಲ್ಲೇ ಕುಳಿತು, ನಿದ್ರಾಹೀನ ಸ್ಥಿತಿಗೆ ತಲುಪಿದ್ದರು’ ಎಂದು ದೂರಿದ್ದಾರೆ.

‘ವಿಷಯ ಗೊತ್ತಾಗಿ ಪೊಲೀಸರ ಜೊತೆ ಮಾತನಾಡಿದ್ದೆ. ಶಾಸಕಿ ಸೌಮ್ಯ ರೆಡ್ಡಿ ಕಚೇರಿಯಲ್ಲಿ ಕೆಲಸ ಮಾಡುತ್ತೇನೆ. ತಂದೆ–ತಾಯಿ ಆಸ್ಪತ್ರೆಗೆ ಹೊರಟಿದ್ದಾರೆ. ದಯವಿಟ್ಟು ಬಿಟ್ಟುಬಿಡಿ ಎಂದು ಕೋರಿದ್ದೆ. ಅದಕ್ಕೂ ಅವರು ಸ್ಪಂದಿಸಲಿಲ್ಲ’ ಎಂದು ರಾಕೇಶ್ ಹೇಳಿದ್ದಾರೆ.

ಕ್ಯಾಮೆರಾದಲ್ಲಿ ಸೆರೆ: ‘ಪೊಲೀಸರು ಕರ್ತವ್ಯ ನಿರ್ವಹಿಸಿದ್ದಾರೆ. ದಂಡ ಸಂಗ್ರಹ ಪ್ರಕ್ರಿಯೆ ದೃಶ್ಯ ಪೊಲೀಸರ ಬಾಡಿವೋರ್ನ್‌ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ದಂಪತಿ ಹೆಲ್ಮೆಟ್‌ ಧರಿಸದೇ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅವರನ್ನು ತಡೆದಿದ್ದ ಪೊಲೀಸರು, ಹಳೇ ಪ್ರಕರಣ ಪರಿಶೀಲಿಸಿದ್ದರು. ದಂಡ ಬಾಕಿ ಇರುವುದು ಗೊತ್ತಾಗಿ, ಪಾವತಿಸುವಂತೆ ತಿಳಿಸಿದ್ದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.