ADVERTISEMENT

5 ಲಕ್ಷ ದಾಟಿದ ಕೋವಿಡ್, ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2021, 21:11 IST
Last Updated 14 ಏಪ್ರಿಲ್ 2021, 21:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೆಲ ದಿನಗಳಿಂದ ಕೋವಿಡ್ ಪೀಡಿತರ ಸಂಖ್ಯೆ ಏರಿಕೆ ಕಂಡಿದ್ದು, ಕೇವಲ 9 ದಿನಗಳಲ್ಲಿ 50 ಸಾವಿರ ಮಂದಿ ಸೋಂಕಿತರಾಗಿದ್ದಾರೆ. ಇದರಿಂದಾಗಿ ಮೊದಲ ಪ್ರಕರಣ ವರದಿಯಾಗಿ ಒಂದು ವರ್ಷದ ಒಂದು ತಿಂಗಳು ಕಳೆಯುವ ಮುನ್ನವೇ ಒಟ್ಟು ಕೋವಿಡ್ ಪೀಡಿತರ ಸಂಖ್ಯೆ 5 ಲಕ್ಷದ ಗಡಿ ದಾಟಿದೆ.

ಸದ್ಯ ಸೋಂಕು ದೃಢ ಪ್ರಮಾಣ ಶೇ 6.80ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ಮಾ.8ರಂದು ವಿದೇಶದಿಂದ ನಗರಕ್ಕೆ ಮರಳಿದ್ದ 40 ವರ್ಷದ ಸಾಫ್ಟ್‌ವೇರ್ ಉದ್ಯೋಗಿಯೊಬ್ಬರು ಕೋವಿಡ್‌ ಪೀಡಿತರಾಗಿದ್ದರು. ಇದು ನಗರದಲ್ಲಿ ವರದಿಯಾದ ಪ್ರಥಮ ಕೋವಿಡ್‌ ಪ್ರಕರಣವಾಗಿತ್ತು. ಸೋಂಕಿತರ ಸಂಖ್ಯೆ 1 ಲಕ್ಷದ ಗಡಿ ದಾಟಲು ಐದೂವರೆ ತಿಂಗಳು ಬೇಕಾಗಿದ್ದವು. ತದನಂತರ ಪ್ರಕರಣಗಳ ಸಂಖ್ಯೆ ಏರುಗತಿ ‍ಪಡೆದ ಕಾರಣ ಒಂದು ತಿಂಗಳ ಅವಧಿಯಲ್ಲಿ ಮತ್ತೊಂದು ಲಕ್ಷ ಮಂದಿ ಸೋಂಕಿತರಾಗಿದ್ದರು.

2020ರ ಅಕ್ಟೋಬರ್ 16ರಂದು ಸೋಂಕಿತರ ಸಂಖ್ಯೆ 3 ಲಕ್ಷದ ಗಡಿ ದಾಟಿತ್ತು. ಬಳಿಕ ಪ್ರಕರಣಗಳ ಸಂಖ್ಯೆ ಇಳಿಮುಖ ಕಂಡ ಪರಿಣಾಮ 113 ದಿನಗಳಲ್ಲಿ ಒಂದು ಲಕ್ಷ ಪ್ರಕರಣಗಳು ವರದಿಯಾಗಿ, ಕೋವಿಡ್ ಪೀಡಿತರ ಸಂಖ್ಯೆ 4 ಲಕ್ಷಕ್ಕೆ ಏರಿಕೆಯಾಗಿತ್ತು. ಕಡೆಯ ಒಂದು ಲಕ್ಷ ಪ್ರಕರಣಗಳು ಎರಡೂವರೆ ತಿಂಗಳೊಳಗೆ ವರದಿಯಾಗಿವೆ.

ADVERTISEMENT

ನಗರದಲ್ಲಿ ಬುಧವಾರ 8,155 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಆರು ತಿಂಗಳ ಬಳಿಕ ವರದಿಯಾದ ಗರಿಷ್ಠ ಪ್ರಕರಣಗಳು ಇವಾಗಿವೆ. ಕಳೆದೊಂದು ವಾರದಿಂದ ಪ್ರತಿನಿತ್ಯ ಸರಾಸರಿ 6 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿರುವ ಕಾರಣ ಸಕ್ರಿಯ ಪ್ರಕರಣಗಳ ಸಂಖ್ಯೆ 63,167ಕ್ಕೆ ಏರಿಕೆಯಾಗಿದೆ. ಅವರಲ್ಲಿ ಸದ್ಯ 184 ಮಂದಿ ತೀವ್ರ ನಿಗಾ ಘಟಕದಲ್ಲಿ ಇದ್ದಾರೆ. ಇದರಿಂದಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಸಿಗೆ ಸಮಸ್ಯೆ ತಲೆದೋರಿದೆ.

ಕೋವಿಡ್‌ಗೆ ಸಾವಿಗೀಡಾಗುವವರ ಸಂಖ್ಯೆ ಕೂಡ ಏರಿಕೆ ಕಂಡಿದೆ. ಮತ್ತೆ 23 ಮಂದಿ ಮೃತಪಟ್ಟಿರುವುದು ಬುಧವಾರ ದೃಢಪಟ್ಟಿದೆ. ನಗರದಲ್ಲಿ 10 ದಿನಗಳಲ್ಲಿ 266 ಮಂದಿ ಮರಣ ಹೊಂದಿದ್ದಾರೆ. ಇದರಿಂದಾಗಿ ಈವರೆಗೆ ಕೊರೊನಾ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 4,933ಕ್ಕೆ ಏರಿಕೆಯಾಗಿದೆ. ಸದ್ಯ ಮರಣ ಪ್ರಮಾಣ ದರ ಶೇ 0.50ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.