ADVERTISEMENT

ವಾರದಲ್ಲಿ 9,694 ಮಂದಿಗೆ ಸೋಂಕು, ಬಹುತೇಕರಲ್ಲಿ ಸೋಂಕಿನ ಲಕ್ಷಣವೇ ಇಲ್ಲ

ಕೋವಿಡ್: ಒಂದೇ ದಿನ 1,533 ಪ್ರಕರಣ ಪತ್ತೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2020, 20:19 IST
Last Updated 11 ಜುಲೈ 2020, 20:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ನಗರದಲ್ಲಿ ಕೇವಲ ಒಂದು ವಾರದಲ್ಲಿ 9,694 ಮಂದಿ ಕೊರೊನಾ ಸೋಂಕಿತರಾಗಿ ಆಸ್ಪತ್ರೆಗಳನ್ನು ಸೇರಿದ್ದಾರೆ.
ಇದೇ ಅವಧಿಯಲ್ಲಿ 124 ಮಂದಿ ಸೋಂಕಿನ ತೀವ್ರತೆಗೆ ಕೊನೆಯುಸಿರೆಳೆದಿದ್ದಾರೆ.

ಶನಿವಾರ ಒಂದೇ ದಿನ 1,533 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಇದರಿಂದಾಗಿ ಸೋಂಕಿತರ ಸಂಖ್ಯೆ 16,862ಕ್ಕೆ ತಲುಪಿದೆ. ನಗರದಲ್ಲಿ ಹೊಸದಾಗಿ ವರದಿಯಾಗುತ್ತಿರುವ ಬಹುತೇಕ ಪ್ರಕರಣಗಳಲ್ಲಿ ಸೋಂಕಿನ ಲಕ್ಷಣಗಳೇ ಬಹಿರಂಗವಾಗಿ ಗೋಚರಿಸುತ್ತಿಲ್ಲ. ಇದರಿಂದಾಗಿ ಅವರೊಂದಿಗೆ ಸಂಪರ್ಕ ಹೊಂದಿರುವವರ ಪತ್ತೆ ಕಾರ್ಯ ಕೂಡ ಸಮರ್ಪಕವಾಗಿ ನಡೆಯುತ್ತಿಲ್ಲ. ಸೋಂಕಿನಿಂದ ಬಳಲಿದವರಲ್ಲಿ ಮತ್ತೆ 23 ಮಂದಿ ಮೃತಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 229ಕ್ಕೆ ಏರಿಕೆಯಾಗಿದೆ.

ಕೇವಲ 48 ಗಂಟೆಗಳಲ್ಲಿ 2,980 ಮಂದಿಗೆ ಸೋಂಕು ತಗುಲಿದೆ. ಈ ಅವಧಿಯಲ್ಲಿ 52 ಮಂದಿ ಕೋವಿಡ್‌ ಪೀಡಿತರಾಗಿ ಮೃತಪಟ್ಟಿರುವುದು ಪ್ರಯೋಗಾಲಯದ ವರದಿಗಳಿಂದ ಖಚಿತಪಟ್ಟಿದೆ.

ADVERTISEMENT

ಮೃತರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲಿಯೇ ತೀವ್ರ ನಿಗಾ ಘಟಕಕ್ಕೆ (ಐಸಿಯು) ದಾಖಲಾಗುವವರ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಸದ್ಯ 322 ರೋಗಿಗಳ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೇ ದಿನ 404 ಮಂದಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಇದರಿಂದಾಗಿ ಗುಣಮುಖರಾದವರ ಸಂಖ್ಯೆ 3,839ಕ್ಕೆ ತಲುಪಿದೆ.

ನಾಲ್ವರು ನೌಕರರಿಗೆ ಸೋಂಕು: ಬಾಗಲೂರು ರಸ್ತೆಯ ಕಣ್ಣೂರು ಸಮೀಪವಿರುವ ಎಲ್‌ ಆ್ಯಂಡ್‌ ಟಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ನಾಲ್ವರು ನೌಕರರಿಗೆ ಕೊರೊನಾ ಸೋಂಕು ತಗುಲಿದೆ. ಹೀಗಾಗಿ ಸಂಸ್ಥೆಯನ್ನು ಸೋಂಕು ನಿವಾರಕದಿಂದ ಸ್ವಚ್ಛಪಡಿಸಿ, ಸೀಲ್ ಡೌನ್ ಮಾಡಲಾಗಿದೆ. ಅಲ್ಲಿ ಕಾರ್ಯನಿರ್ವಹಿಸುತ್ತಿದ್ದ 80 ಮಂದಿಯನ್ನು ಕ್ವಾರಂಟೈನ್‌ಗೆ ಒಳಪಡಿಸಲಾಗಿದ್ದು, ಅವರ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ.

ಕೋವಿಡ್: ಚಿಕಿತ್ಸೆಯಲ್ಲಿ ವ್ಯತ್ಯಯ

ನಗರದ ಕೋವಿಡ್ ಹಾಗೂ ಕೋವಿಡೇತರ ಆಸ್ಪತ್ರೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿಗೆ ಕೂಡ ಸೋಂಕು ತಗುಲುತ್ತಿರುವ‍ಪರಿಣಾಮ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ.

ರಾಜ್ಯದ ಪ್ರಥಮ ಕೋವಿಡ್ ಆಸ್ಪತ್ರೆ ಎಂಬ ಹಿರಿಮೆಗೆ ಭಾಜನವಾಗಿದ್ದ ವಿಕ್ಟೋರಿಯಾದಲ್ಲಿ ಈವರೆಗೆ ವೈದ್ಯರು ಸೇರಿದಂತೆ 76 ಮಂದಿ ಕೋವಿಡ್ ಪೀಡಿತರಾಗಿದ್ದಾರೆ. ಇದರಲ್ಲಿ ಕೆಲವರು ಚೇತರಿಸಿಕೊಂಡು ಸೇವೆಗೆ ಹಾಜರಾಗಿದ್ದಾರೆ.

ಜಯದೇವ ಹೃದ್ರೋಗ ಸಂಸ್ಥೆ (60),ಕೆ.ಸಿ.ಜನರಲ್ ಆಸ್ಪತ್ರೆ(30), ನಿಮ್ಹಾನ್ಸ್ (15), ನೆಪ್ರೋ ಯುರಾಲಜಿ (9), ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ (20) ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯರು, ಶುಶ್ರೂಷಕರು ಹಾಗೂ ಆರೋಗ್ಯ ಸಿಬ್ಬಂದಿ ಸೋಂಕಿತರಾಗಿದ್ದಾರೆ. ಕಿದ್ವಾಯಿ, ಜಯದೇವ ಸೇರಿದಂತೆ ಕೆಲ ಆಸ್ಪತ್ರೆಗಳಲ್ಲಿ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದ ಸೇವೆಗಳನ್ನುಕೆಲ ದಿನಗಳು ಸ್ಥಗಿತ ಮಾಡಲಾಗಿತ್ತು.

ಆರೋಗ್ಯ ಸಿಬ್ಬಂದಿಗಾಗಿ ಜಯನಗರ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೆಲ ಹಾಸಿಗೆಗಳನ್ನು ಮೀಸಲಿಡಲು ಸರ್ಕಾರ ಸೂಚಿಸಿತ್ತು. ಆದರೆ, ಈಗಾಗಲೇ ಹಾಸಿಗೆಗಳು ಭರ್ತಿಯಾದ ಪರಿಣಾಮ ಆರೋಗ್ಯ ಸಿಬ್ಬಂದಿ ಕೂಡ ಸೋಂಕಿತರಾದಲ್ಲಿ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.