ADVERTISEMENT

ಬೆಂಗಳೂರು | ಕೋವಿಡ್-19 ಸೋಂಕಿತರ ಸಂಖ್ಯೆ 600ರ ಸನಿಹಕ್ಕೆ

ಒಂದೇ ದಿನ 17 ಮಂದಿಗೆ ಸೋಂಕು * ನಗರದಲ್ಲಿ ಮೃತರ ಸಂಖ್ಯೆ 23ಕ್ಕೆ ಏರಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2020, 21:32 IST
Last Updated 11 ಜೂನ್ 2020, 21:32 IST
   

ಬೆಂಗಳೂರು: ನಗರದಲ್ಲಿ 17 ಮಂದಿಗೆ ಕೊರೊನಾ ಸೋಂಕು ತಗುಲಿರುವುದು ಗುರುವಾರ ದೃಢ ಪಟ್ಟಿದ್ದು, ಸೋಂಕಿತರ ಸಂಖ್ಯೆ 581ಕ್ಕೆ ಏರಿಕೆಯಾಗಿದೆ. ಮತ್ತೆ ಇಬ್ಬರು ಮೃತಪಟ್ಟಿದ್ದು, ಕೋವಿಡ್‌ಗೆ ಸಾವಿಗೀಡಾದವರ ಸಂಖ್ಯೆ 23ಕ್ಕೆ ತಲುಪಿದೆ.

ವಾರದಲ್ಲಿ 10 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ಶೀತಜ್ವರ ಮಾದರಿಯ ಅನಾರೋಗ್ಯ ಸಮಸ್ಯೆಯಿಂದ (ಐಎಲ್‌ಐ) ಬಳಲಿದವರು. ಹೊಸದಾಗಿ ವರದಿಯಾದ ಪ್ರಕರಣಗಳಲ್ಲಿಯೂ 6 ಮಂದಿ ಐಎಲ್ಐ ಸಮಸ್ಯೆಯಿಂದ ಬಳಲುತ್ತಿದ್ದವರು. ವಾಲ್ಮಿಕಿ ನಗರದಲ್ಲಿ 58 ವರ್ಷದ ಮಹಿಳೆ ಕೋವಿಡ್ ಪೀಡಿತರಾಗಿದ್ದು, ಜ್ವರ ಹಾಗೂ ಕೆಮ್ಮಿನ ಸಮಸ್ಯೆಯಿಂದ ಆಸ್ಪತ್ರೆಯೊಂದರಲ್ಲಿ ತಪಾಸಣೆ ಮಾಡಿಸಿಕೊಂಡಿದ್ದರು. ಬನಶಂಕರಿ ಎರಡನೇ ಹಂತದಲ್ಲಿ 23 ವರ್ಷದ ತುಂಬು ಗರ್ಭಿಣಿಗೆ ಸೋಂಕು ತಗುಲಿದೆ.

ಪಾದರಾಯನಪುರದ 25 ವರ್ಷದ ಮಹಿಳೆ ಜೂ.9ರಂದು ಮಗುವಿಗೆ ಜನ್ಮನೀಡಿದ್ದರು. ಅವರಿಗೂ ಕೊರೊನಾ ಇದೆ. ಇದರಿಂದ ಅವರನ್ನುವಿಕ್ಟೋರಿಯಾ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗಿದೆ. ಮಗುವನ್ನು ವಾಣಿವಿಲಾಸ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ADVERTISEMENT

ಬ ಅಂಜನಪ್ಪ ಗಾರ್ಡನ್‌ನ 55 ವರ್ಷದ ಮಹಿಳೆ , ಮೈಸೂರು ರಸ್ತೆಯ 45 ವರ್ಷದ ಪುರುಷ, ಬಿಟಿಎಂ ಬಡಾವಣೆಯ ಎರಡನೇ ಹಂತದ ಸೋಮೇಶ್ವರ ಕಾಲೊನಿಯ 37 ವರ್ಷದ ಮಹಿಳೆ ಕೋವಿಡ್ ಪೀಡಿತರಾಗಿದ್ದಾರೆ.

‌ಮಹಾರಾಷ್ಟ್ರದಿಂದ ಬಂದ 36 ವರ್ಷದ ಮಹಿಳೆ, 39 ವರ್ಷದ ಪುರುಷ, 16 ವರ್ಷದ ಬಾಲಕಿ ಹಾಗೂ 45 ವರ್ಷದ ಮಹಿಳೆ ಕ್ವಾರಂಟೈನ್‌ನಲ್ಲಿ ಇದ್ದರು. ಇವರೆಲ್ಲ ಕೋವಿಡ್‌ ರೋಗಿಗಳಾಗಿದ್ದು. ಎಚ್‌ಎಎಲ್‌ ನ 65ರ ವೃದ್ಧನಿಗೆ ಸೋಂಕು ತಗುಲಿರುವ ಬಗ್ಗೆ ಪತ್ತೆ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.