ADVERTISEMENT

ಬೆಂಗಳೂರಿನಲ್ಲಿ ಕಾಣಿಸುತ್ತಿವೆ ‘ಹಾಸಿಗೆ ಇಲ್ಲ’ ಫಲಕಗಳು !

ನಗರದಲ್ಲಿ ಕೋವಿಡ್‌ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 21:00 IST
Last Updated 23 ಏಪ್ರಿಲ್ 2021, 21:00 IST
ಶಿವಾಜಿನಗರದ ಚರಕ ಆಸ್ಪತ್ರೆ ಎದುರು ‘ಹಾಸಿಗೆ ಇಲ್ಲ’ ಫಲಕ ಹಾಕಿರುವುದು
ಶಿವಾಜಿನಗರದ ಚರಕ ಆಸ್ಪತ್ರೆ ಎದುರು ‘ಹಾಸಿಗೆ ಇಲ್ಲ’ ಫಲಕ ಹಾಕಿರುವುದು   

ಬೆಂಗಳೂರು: ನಗರದಲ್ಲಿ ಕೋವಿಡ್‌ ರೋಗಿಗಳ ಪರದಾಟ ಮುಂದುವರಿದಿದೆ. ಸೋಂಕಿತರು ಮಾತ್ರವಲ್ಲದೆ, ಇತರೆ ಕಾಯಿಲೆಯಿಂದ ಬಳಲುತ್ತಿರುವವರಿಗೂ ಆಸ್ಪತ್ರೆಗಳಲ್ಲಿ ಹಾಸಿಗೆ ಸಿಗುತ್ತಿಲ್ಲ. ‘ಹಾಸಿಗೆ ಇಲ್ಲ’ ಎಂಬ ಫಲಕಗಳೂ ಆಸ್ಪತ್ರೆ ಮುಂದೆ ಕಾಣುತ್ತಿವೆ.

ನಗರದ ಶಿವಾಜಿ ನಗರದ ಚರಕ ಆಸ್ಪತ್ರೆಯಲ್ಲಿ ದಿನಗಳ ಹಿಂದೆಯಷ್ಟೇ ಕೋವಿಡ್‌ ರೋಗಿಗಳಿಗೆ 150 ಹಾಸಿಗೆಗಳನ್ನು ಮೀಸಲಿಡಲಾಗಿತ್ತು. ಆದರೆ, ಈಗಾಗಲೇ ಎಲ್ಲ ಹಾಸಿಗೆಗಳು ಭರ್ತಿ ಆಗಿದ್ದು, ಪ್ರವೇಶ ದ್ವಾರದ ಎದುರು ‘ನೋ ಬೆಡ್‌’ ಫಲಕ ಹಾಕಲಾಗಿದೆ.

‘ಹಲವು ಆಸ್ಪತ್ರೆಗಳಿಗೆ ತಿರುಗಿದರೂ ಇದೇ ಸಮಸ್ಯೆ ಇದೆ. ಆಂಬುಲೆನ್ಸ್‌ ಕೂಡ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ಹಾಸಿಗೆ ಇಲ್ಲ ಎಂದು ಹೊರಗಡೆಯೇ ಹೇಳಿ ಕಳುಹಿಸುತ್ತಿದ್ದಾರೆ’ ಎಂದು ಸೋಂಕಿತರೊಬ್ಬರ ಸಂಬಂಧಿ ‘ಪ್ರಜಾವಾಣಿ’ಗೆ ಹೇಳಿದರು.

ADVERTISEMENT

‘ಉಸಿರಾಟದ ಸಮಸ್ಯೆ ಇದ್ದರೂ ಆಸ್ಪತ್ರೆಯ ಒಳಗೆ ಬಿಟ್ಟುಕೊಳ್ಳುತ್ತಿಲ್ಲ. ವೈದ್ಯಕೀಯ ಆಮ್ಲಜನಕವಾದರೂ ಪೂರೈಸಿ ಎಂದು ಮನವಿ ಮಾಡಿಕೊಂಡರೆ, ಈಗಾಗಲೇ ದಾಖಲಾಗಿರುವ ರೋಗಿಗಳಿಗೇ ಆಮ್ಲಜನಕ ಪೂರೈಸಲು ಕಷ್ಟವಾಗುತ್ತಿದೆ. ಬೇರೆಯವರಿಗೆ ನೀಡಲು ಸಾಧ್ಯವಿಲ್ಲ ಎಂದೂ ಆಸ್ಪತ್ರೆಯವರು ಹೇಳುತ್ತಿದ್ದಾರೆ’ ಎಂದೂ ಅವರು ದೂರಿದರು.

ನಗರದ ಹಲವು ಆಸ್ಪತ್ರೆಗಳ ಎದುರು ಈ ರೀತಿ ಚೀಟಿ ಅಂಟಿಸಲಾಗಿದೆ. ಅನಿವಾರ್ಯವಾಗಿ ಸೋಂಕಿತರು ಮನೆಯಲ್ಲಿಯೇ ಇರುವಂತಾಗಿದೆ.

ಪರೀಕ್ಷಾ ಕಿಟ್‌ ‘ನೋ ಸ್ಟಾಕ್‌’ !

ಆರ್‌ಟಿ ಪಿಸಿಆರ್‌ ಪರೀಕ್ಷೆ ಮಾಡುವ ಕಿಟ್‌ಗಳು ಕೂಡ ಖಾಲಿ ಆಗಿದ್ದು, ಪ್ರಾಥಮಿಕ ಆರೋಗ್ಯ ಕೇಂದ್ರಗಳ ಮುಂದೆ ‘ನೋ ಸ್ಟಾಕ್‌’ ಫಲಕಗಳು ಕಾಣುತ್ತಿವೆ.

ನಗರದ ಕೆ. ನಾರಾಯಣಪುರ ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ಎದುರು ಶುಕ್ರವಾರ ‘ಆರ್‌ಟಿ ಪಿಸಿಆರ್‌ ಪರೀಕ್ಷಾ ಕಿಟ್‌ ಖಾಲಿ ಆಗಿರುವುದರಿಂದ ಇಂದು ಪರೀಕ್ಷೆ ಮಾಡಲಾಗುವುದಿಲ್ಲ’ ಎಂದು ಬರೆಯಲಾಗಿತ್ತು.

‘ಕೆಮ್ಮು, ಜ್ವರದಂತಹ ಸಮಸ್ಯೆ ಕಾಣಿಸಿಕೊಳ್ಳುತ್ತಿತ್ತು. ಕೋವಿಡ್‌ ಪರೀಕ್ಷೆ ಮಾಡಿಸಿಕೊಳ್ಳೋಣ ಎಂದು ಬಂದರೆ ಸ್ಟಾಕ್ ಇಲ್ಲ ನಾಳೆ ಬನ್ನಿ ಎಂದು ಹೇಳಿದರು’ ಎಂದು ಸಮೀರ್‌ ತಿಳಿಸಿದರು.

‘ಯಾವುದೇ ಕೇಂದ್ರಗಳಲ್ಲೂ ಪರೀಕ್ಷಾ ಕಿಟ್‌ಗಳ ಕೊರತೆ ಇಲ್ಲ. ಹಾಗೊಂದು ವೇಳೆ, ಸ್ಟಾಕ್ ಇಲ್ಲ ಎಂದು ಹೇಳಿದ್ದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ. ಬಿ.ಕೆ. ವಿಜಯೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಕೆ. ನಾರಾಯಣಪುರ ಪಿಎಚ್‌ಸಿಯ ವೈದ್ಯಾಧಿಕಾರಿಯವರಿಗೆ ಕರೆ ಮಾಡಲಾಯಿತು. ಅವರು ಸಂಪರ್ಕಕ್ಕೆ ಸಿಗಲಿಲ್ಲ.

ವಿದ್ಯುತ್‌ ವ್ಯತ್ಯಯ: ಆಕ್ಸಿಜನ್ ಉತ್ಪಾದನೆ ಸ್ಥಗಿತ

ನಗರದ ಹೂಡಿಯಲ್ಲಿನ ವಿದ್ಯುತ್‌ ಕೇಂದ್ರದಲ್ಲಿ ಶುಕ್ರವಾರ ಸಂಜೆ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದ್ದರಿಂದ ಹತ್ತಿರದ ‘ಭುರುಕ ಗ್ಯಾಸಸ್‌’ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಕೇಂದ್ರದಲ್ಲಿ ಉತ್ಪಾದನೆ ಸ್ಥಗಿತಗೊಂಡಿತ್ತು.

‘ಕೆಪಿಟಿಸಿಎಲ್‌ ತಪ್ಪಿನಿಂದ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ. ವಿದ್ಯುತ್‌ ಇಲ್ಲದೆ ಆಕ್ಸಿಜನ್‌ ಉತ್ಪಾದನೆ ಸ್ಥಗಿತಗೊಂಡಿದೆ. ನಮ್ಮ ಘಟಕದಲ್ಲಿ ದಿನಕ್ಕೆ 65 ಟನ್‌ ಆಕ್ಸಿಜನ್‌ ಉತ್ಪಾದಿಸಲಾಗುತ್ತಿತ್ತು. ವಿದ್ಯುತ್‌ ಸರಬರಾಜು ಪ್ರಾರಂಭವಾಗುತ್ತಿದ್ದಂತೆ ಉತ್ಪಾದನೆ ಶುರು ಮಾಡಲಾಗುವುದು’ ಎಂದು ಕಂಪನಿಯ ನಿರ್ದೇಶಕ ಸತೀಶ್ ಕೇಸರಿ ಹೇಳಿದರು.

ನಗರದಲ್ಲಿ ಕೇವಲ ಎರಡು ಆಕ್ಸಿಜನ್‌ ಉತ್ಪಾದಕ ಘಟಕಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.