ADVERTISEMENT

ಕೋವಿಡ್: ಬೆಂಗಳೂರಿನಲ್ಲಿ ಪರೀಕ್ಷೆ ಹೆಚ್ಚಳ, ದೃಢ ಪ್ರಮಾಣ ಇಳಿಕೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2022, 2:40 IST
Last Updated 31 ಡಿಸೆಂಬರ್ 2022, 2:40 IST
   

ಬೆಂಗಳೂರು:ನಗರದಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ವಾರದಿಂದ ಕೋವಿಡ್ ದೈನಂದಿನ ಪರೀಕ್ಷೆಗಳ ಸಂಖ್ಯೆಯನ್ನು ಏರಿಕೆ ಮಾಡಲಾಗಿದೆ. ಈ ಅವಧಿಯಲ್ಲಿ ಸೋಂಕು ದೃಢ ಪ್ರಮಾಣ ಇಳಿಕೆ ಕಂಡಿದ್ದು, ಸದ್ಯ ಶೇ 1ಕ್ಕಿಂತ ಕಡಿಮೆಯಿದೆ.

ಚೀನಾ ಸೇರಿ ಕೆಲ ದೇಶಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಾಗೂ ರೂಪಾಂತರಿ ವೈರಾಣುವಿನ ಆತಂಕದಿಂದ ನಗರದಲ್ಲಿ ಮುಖಗವಸು ಧರಿಸುವಿಕೆ ಸೇರಿ ಕೆಲ ನಿರ್ಬಂಧ ವಿಧಿಸಲಾಗಿದೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿಯು ನಗರದಲ್ಲಿದೈನಂದಿನ ಕೋವಿಡ್ ಪರೀಕ್ಷೆಗಳನ್ನು 1,500ರಿಂದ 5 ಸಾವಿರಕ್ಕೆ ಹೆಚ್ಚಳ ಮಾಡಬೇಕು ಎಂದು ಶಿಫಾರಸು ಮಾಡಿತ್ತು. ಅದರಂತೆ ಪರೀಕ್ಷೆಗಳ ಸಂಖ್ಯೆ 5 ಸಾವಿರದ ಗಡಿ ದಾಟಿದೆ.‍ಪರೀಕ್ಷೆಗಳ ಸಂಖ್ಯೆ ಎರಡು ಸಾವಿರದ ಆಸುಪಾಸಿನಲ್ಲಿದ್ದಾಗ ಸೋಂಕು ದೃಢ ಪ್ರಮಾಣ ಶೇ 2ರ ಗಡಿಯ ಆಸುಪಾಸಿನಲ್ಲಿತ್ತು.

ಕಳೆದ ಏಳು ದಿನಗಳಲ್ಲಿ 22,869 ಕೋವಿಡ್ಪರೀಕ್ಷೆಗಳನ್ನು ನಡೆಸಲಾಗಿದ್ದು, 196 ಮಂದಿಕೋವಿಡ್ಪೀಡಿತರಾಗಿದ್ದಾರೆ. ಈ ಅವಧಿಯಲ್ಲಿ 142 ಮಂದಿ ಚೇತರಿಸಿಕೊಂಡಿದ್ದಾರೆ.

ADVERTISEMENT

ನಗರದಲ್ಲಿ ಈವರೆಗೆ 18.76 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಸೋಂಕಿತರಲ್ಲಿ 18.58 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ. 1,249 ಸಕ್ರಿಯ ಪ್ರಕರಣಗಳಿವೆ. ನಗರದ ಆಸ್ಪತ್ರೆಗಳು ಕೋವಿಡ್ ಮುಕ್ತವಾಗಿದ್ದು,ಸೋಂಕಿತರೆಲ್ಲರೂ ಮನೆ ಆರೈಕೆಗೆ ಒಳಗಾಗಿದ್ದಾರೆ.

‘ಕೋವಿಡ್ ಬಗ್ಗೆ ಆತಂಕ ಪಡಬೇಕಾಗಿಲ್ಲ.ಕೊರೊನಾ ಸೋಂಕಿನ ತೀವ್ರತೆ ಕಡಿಮೆ ಇರುವುದರಿಂದ ಕೋವಿಡ್ ಪೀಡಿತರು ವಿಶೇಷ ಚಿಕಿತ್ಸೆ ಇಲ್ಲದೆಯೇ ಚೇತರಿಸಿಕೊಳ್ಳುತ್ತಿದ್ದಾರೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಐಎಲ್‌ಐ, ಸಾರಿ ಪ್ರಕರಣಗಳ ಮೇಲೆ ನಿಗಾ ಇರಿಸಿ, ತಪಾಸಣೆ ಮಾಡಲಾಗುತ್ತಿದೆ’ ಎಂದುರಾಜೀವ್ ಗಾಂಧಿ ಎದೆರೋಗಗಳ ಸಂಸ್ಥೆಯ ನಿರ್ದೇಶಕ ಡಾ.ಸಿ. ನಾಗರಾಜ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.