ADVERTISEMENT

ಇಡೀ ಕುಟುಂಬದ ಕನಸನ್ನೇ ಕೊಂದ ಕೋವಿಡ್

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2021, 21:39 IST
Last Updated 27 ಏಪ್ರಿಲ್ 2021, 21:39 IST
corona
corona   

ಬೆಂಗಳೂರು: ರಾಜರಾಜೇಶ್ವರಿ ವಲಯ ವ್ಯಾಪ್ತಿಯ ನಾಯಂಡಹಳ್ಳಿಯ ಕುಟುಂಬವೊಂದರ ಭವಿಷ್ಯವನ್ನೇ ಕೋವಿಡ್‌ ಕಸಿದುಕೊಂಡಿದೆ!

ಈ ಕುಟುಂಬದ ಐವರು ಸದಸ್ಯರ ಪೈಕಿ ಮೂವರಿಗೆ (ತಾಯಿ, ಹಿರಿಯ ಮಗ ಮತ್ತು ಕಿರಿಯ ಮಗ) ಕೊರೊನಾ ಸೋಂಕು ದೃಢಪಟ್ಟಿದ್ದು, ಈ ಪೈಕಿ ತಾಯಿ ಮತ್ತು ಹಿರಿಯ ಮಗ ನಿಧನರಾಗಿದ್ದಾರೆ. ಕಿರಿಯ ಮಗ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ.

ದುರಂತವೆಂದರೆ, ವಾರದ ಹಿಂದೆ ತಾಯಿ ಇನ್ನಿಲ್ಲವಾದಾಗ ಅಂತಿಮ ವಿಧಿವಿಧಾನದಲ್ಲಿ ಭಾಗವಹಿಸಲು ಕೂಡಾ ಈ ಇಬ್ಬರು ಮಕ್ಕಳಿಗೆ ಸಾಧ್ಯ ಆಗಿರಲಿಲ್ಲ. ಅಷ್ಟೇ ಅಲ್ಲದೆ, ಆ ಸಂದರ್ಭದಲ್ಲಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಮಗನಿಗೆ ತಾಯಿ ಮೃತಪಟ್ಟ ವಿಷಯವನ್ನೇ ತಿಳಿಸಿರಲಿಲ್ಲ. ನಾಲ್ಕು ದಿನಗಳ ಬಳಿಕ ಅವರು ಕೂಡಾ ಕೊನೆಯುಸಿರೆಳೆದಿದ್ದಾರೆ.

ADVERTISEMENT

‘ಇನ್ನೂ ದುರಂತವೆಂದರೆ, ಚಿಕಿತ್ಸೆ ಪಡೆಯುತ್ತಿರುವ ಕಿರಿಯ ಸಹೋದರನಿಗೆ, ತನ್ನ ಅಣ್ಣ ಸಾವಿಗೀಡಾಗಿರುವುದುಇನ್ನೂ ಗೊತ್ತಿಲ್ಲ. ತೀವ್ರ ಮಾನಸಿಕ ಒತ್ತಡದಲ್ಲಿರುವ ಈ ಸಹೋದರ, ಕೋವಿಡ್‌ನಿಂದ ಚೇತರಿಸಿಕೊಂಡರೂ, ತಾಯಿ ಮತ್ತು ಅಣ್ಣನಿಲ್ಲದ ಕೊರಗಿನಿಂದ ಹೊರಬರುವುದು ಬಹಳ ಕಷ್ಟವಿದೆ’ ಎನ್ನುತ್ತಾರೆ ವೈದ್ಯರು.

‘ವಿವಾಹಿತರಾಗಿರುವ ಇಬ್ಬರು ಸಹೋದರರು ತಮ್ಮ ಪತ್ನಿಯರು ಮತ್ತು ತಾಯಿಯೊಂದಿಗೆ ಒಂದೇ ಮನೆಯಲ್ಲಿದ್ದರು. ಇತರರಿಗೆ ಮಾದರಿಯಂತೆ ಇಡೀ ಕುಟುಂಬ ಜೀವನ ನಡೆಸುತ್ತಿತ್ತು’ ಎನ್ನುತ್ತಾರೆ ಅಕ್ಕಪಕ್ಕದ ನಿವಾಸಿಗಳು.

‘ಪ್ರಜಾವಾಣಿ’ ಜೊತೆ ಮಾತನಾಡಿದ ಕಿರಿಯ ಸಹೋದರನ ಪತ್ನಿ, ‘ಪತಿ ಚೇತರಿಸಿಕೊಂಡು ಮನೆಗೆ ಬರುವ ವಿಶ್ವಾಸವಿದೆ. ಆದರೆ, ಭವಿಷ್ಯದ ಕನಸುಗಳನ್ನೆಲ್ಲ ನಾವು ಕಳೆದುಕೊಂಡೆವು. ಎಲ್ಲ ನೋವುಗಳನ್ನು ನಾವಿಬ್ಬರು ಹೆಣ್ಣು ಮಕ್ಕಳು ಅನುಭವಿಸಿದೆವು. ಇಂಥ ಕಷ್ಟ ಯಾರಿಗೂ ಬರಬಾರದು. ನನ್ನ ಪತಿಯನ್ನು ಸಂತೈಸುವ ಸ್ಥಿತಿಯಲ್ಲಿ ನಾನಿಲ್ಲ. ಮನೆಗೆ ಬಂದ ಬಳಿಕ ಪತಿ, ಈಗಾಗಲೇ ಸಂಭವಿಸಿದ ದುರಂತ ಸನ್ನಿವೇಶಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಬಹುದು ಎನ್ನುವುದನ್ನೂ ಊಹಿಸಲು ಸಾಧ್ಯ ಆಗುತ್ತಿಲ್ಲ’ ಎಂದು ನೋವಿನಿಂದ ಹೇಳಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.