ADVERTISEMENT

PV Web Exclusive: ಕೋವಿಡ್‌ ಎಫೆಕ್ಟ್‌, ಬಹುತೇಕ ಪಿ.ಜಿಗಳು ಬಂದ್‌!

ಎ.ಎಂ.ಸುರೇಶ
Published 21 ಸೆಪ್ಟೆಂಬರ್ 2020, 4:32 IST
Last Updated 21 ಸೆಪ್ಟೆಂಬರ್ 2020, 4:32 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಜಾರಿ ಮಾಡಿದ್ದ ಲಾಕ್‌ಡೌನ್‌ನಿಂದಾಗಿ ಬಾಗಿಲು ಮುಚ್ಚಿದ್ದ ಪೇಯಿಂಗ್‌ ಗೆಸ್ಟ್‌ಗಳು (ಪಿ.ಜಿ) ಸದ್ಯಕ್ಕೆ ಪುನರಾರಂಭವಾಗುವ ಲಕ್ಷಣಗಳು ಕಾಣುತ್ತಿಲ್ಲ. ಲಾಕ್‌ಡೌನ್‌ ತೆರವಾದ ಬಳಿಕ ಕೆಲವು ಷರತ್ತುಗಳನ್ನು ವಿಧಿಸಿ ಪೇಯಿಂಗ್‌ ಗೆಸ್ಟ್‌ಗಳನ್ನು ತೆರೆಯಲು ಸರ್ಕಾರ ಅನುಮತಿ ನೀಡಿದೆ. ಆದರೆ, ಬೇಡಿಕೆ ಇಲ್ಲದ ಕಾರಣ ಶೇ 90ರಷ್ಟು ಪೇಯಿಂಗ್‌ ಗೆಸ್ಟ್‌ಗಳು ಈಗಲೂ ಮುಚ್ಚಿವೆ.

ಲಾಕ್‌ಡೌನ್‌ಗೆ ಮುನ್ನ ಪೇಯಿಂಗ್‌ ಗೆಸ್ಟ್‌ಗಳಿಗೆ ಭಾರಿ ಬೇಡಿಕೆ ಇತ್ತು. ಹೊರ ರಾಜ್ಯಗಳು ಹಾಗೂ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಉದ್ಯೋಗ ಹಾಗೂ ಶಿಕ್ಷಣ ಪಡೆಯಲು ಬೆಂಗಳೂರಿಗೆ ಬರುವ ಸಾವಿರಾರು ಜನರು ಪೇಯಿಂಗ್‌ ಗೆಸ್ಟ್‌ಗಳ ಮೇಲೆ ಅವಲಂಬನೆ ಆಗಿದ್ದರು. ನಿರೀಕ್ಷೆಗೂ ಮೀರಿ ಬೇಡಿಕೆ ಬಂದ ಕಾರಣ 3–4 ಕಡೆ ಪಿ.ಜಿ.ಗಳನ್ನು ನಡೆಸುತ್ತಿದ್ದೇವು. ಒಳ್ಳೆಯ ಆದಾಯವೂ ಇತ್ತು. ಆದರೆ ಈಗ ಕೊರೊನಾದಿಂದಾಗಿ ಪಿ.ಜಿ.ಗಳಿಗೆ ಬರುವವರೇ ಇಲ್ಲ ಎನ್ನುತ್ತಾರೆ ಮುರುಗೇಶ್‌ ಪಾಳ್ಯದಲ್ಲಿ ಪಿ.ಜಿ. ನಡೆಸುತ್ತಿರುವ ಶ್ರೀನಿವಾಸಲು.

‘ನಗರದಲ್ಲಿ ಶೇ 90ರಷ್ಟು ಪಿ.ಜಿ.ಗಳು ಈಗಾಗಲೇ ಬಂದ್‌ ಆಗಿವೆ. ಇನ್ನುಳಿದ ಶೇ 10ರಷ್ಟು ಪಿ.ಜಿಗಳಲ್ಲಿ ಬೆರಳೆಣಿಕೆಯಷ್ಟು ಮಂದಿ ಇದ್ದಾರೆ. ಲಾಕ್‌ಡೌನ್‌ಗೆ ಮುಂಚೆ ನಾವು ಐದು ಪಿ.ಜಿಗಳನ್ನು ನಡೆಸುತ್ತಿದ್ದೇವು. ಈಗ ಎರಡು ಮುಚ್ಚಿವೆ. ಇನ್ನುಳಿದ ಮೂರರಲ್ಲಿ ಈಗ 7, 10 ಹಾಗೂ 20 ಮಂದಿ ಇದ್ದಾರೆ. ಮಾರ್ಚ್‌ನಲ್ಲಿ ಇವುಗಳಲ್ಲಿ ಕ್ರಮವಾಗಿ 65, 45 ಹಾಗೂ 190 ಮಂದಿ ಇದ್ದರು. ನಮ್ಮ ಪರಿಸ್ಥಿತಿ ಎಷ್ಟು ಶೋಚನೀಯವಾಗಿದೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ’ ಎಂದು ಅಳಲು ತೋಡಿಕೊಂಡರು.

ADVERTISEMENT

ಪಿ.ಜಿ ಕಟ್ಟಡಗಳ ಮಾಲೀಕರಿಗೆ ₹10 ಲಕ್ಷ ಮುಂಗಡ ಹಣ ನೀಡಿದ್ದೇವೆ. ಇದಲ್ಲದೆ ಪ್ರತಿ ತಿಂಗಳು ಬಾಡಿಗೆ ಕಟ್ಟಬೇಕು. ಆದರೆ, ಪಿ.ಜಿಗಳಿಗೆ ಬರುವವರೇ ಇಲ್ಲದ ಕಾರಣ 3–4 ತಿಂಗಳಿಂದ ಬಾಡಿಗೆ ಕಟ್ಟಲು ಆಗುತ್ತಿಲ್ಲ. ಬಂದ್‌ ಮಾಡುತ್ತೇವೆ ಎಂದು ಹೇಳಿದರೂ, ಮಾಲೀಕರು ಮುಂಗಡ ಹಣ ವಾಪಸ್‌ ನೀಡುವುದಿಲ್ಲ. ಹೀಗಾಗಿ ಮುಂದೆ ಎನ್ನು ಮಾಡಬೇಕು ಎಂಬ ಬಗ್ಗೆ ದಾರಿ ತೋಚದಂತಾಗಿದೆ ಎನ್ನುತ್ತಾರೆ ಹಲವು ಪಿ.ಜಿ.ಗಳ ವ್ಯವಸ್ಥಾಪಕರು.

‘ಕಳೆದ ಮಾರ್ಚ್‌ನಲ್ಲೇ ಸುದ್ದಗುಂಟೆಪಾಳ್ಯದ ಪಿ.ಜಿ.ಯನ್ನು ಬಂದ್‌ ಮಾಡಿದ್ದೇವೆ. ಮತ್ತೊಂದು ಪಿ.ಜಿ. ಆರಂಭಿಸಲು ಮುಂಗಡವಾಗಿ ನೀಡಿದ್ದ ಎರಡು ಲಕ್ಷ ರೂಪಾಯಿ ಇನ್ನೂ ವಾಪಸ್‌ ಬಂದಿಲ್ಲ. ಇದರಿಂದ ಬಹಳಷ್ಟು ನಷ್ಟವಾಗಿದೆ. ಸದ್ಯಕ್ಕೆ ಪಿ.ಜಿಗಳಿಗೆ ಭವಿಷ್ಯವಿಲ್ಲ. ಪರಿಸ್ಥಿತಿ ಯಾವಾಗ ಸುಧಾರಣೆಯಾಗುತ್ತದೆ ಎಂಬುದೂ ಗೊತ್ತಿಲ್ಲ ಎನ್ನುತ್ತಾರೆ’ ಆಂಧ್ರಪ್ರದೇಶ ಮೂಲದ ನಾರಾಯಣ ರೆಡ್ಡಿ.

ಬಹುತೇಕ ಸಾಫ್ಟ್‌ವೇರ್‌ ಕಂಪನಿಗಳು, ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಬೆಂಗಳೂರು ನಗರ ಹಾಗೂ ಸುತ್ತಮುತ್ತ ಇರುವುದರಿಂದ ಕಳೆದ 4–5 ವರ್ಷಗಳಿಂದ ಪಿ.ಜಿ.ಗಳಿಗೆ ಭಾರಿ ಬೇಡಿಕೆ ಇತ್ತು. ಈ ಕ್ಷೇತ್ರದಲ್ಲಿ ಬಂಡವಾಳ ಹೂಡಿದವರಿಗೆ ಹಾಗೂ ಕಟ್ಟಡ ಮಾಲೀಕರಿಗೆ ಹೆಚ್ಚಿನ ಲಾಭವೂ ಆಗಿದೆ. ಆದರೆ, ಈಗ ಕೊರೊನಾದಿಂದಾಗಿ ಸಾವಿರಾರು ಜನ ತಮ್ಮ ಊರುಗಳಿಗೆ ವಾಪಸ್‌ ಆಗಿರುವ ಕಾರಣ ಪಿ.ಜಿ.ಗಳು ಬಿಕೊ ಎನ್ನುತ್ತಿವೆ. ನಮ್ಮ ಪಿ.ಜಿ.ಯಲ್ಲಿ ಹಿಂದೆ 50 ಜನ ಇದ್ದರು. ಈಗ ಇಬ್ಬರು ಅಷ್ಟೇ ಇದ್ದಾರೆ ಎನ್ನುತ್ತಾರೆ ಕೇಶವಮೂರ್ತಿ.

ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಮುಂಜಾಗ್ರತಾ ಕ್ರಮವಾಗಿ ಬಹುತೇಕ ಖಾಸಗಿ ಕಂಪನಿಗಳು ಮನೆಯಿಂದಲೇ ಕೆಲಸ ಮಾಡಲು ತಮ್ಮ ಉದ್ಯೋಗಿಗಳಿಗೆ ಅವಕಾಶ ಕಲ್ಪಿಸಿವೆ. ಹೀಗಾಗಿ ಊರುಗಳಿಗೆ ಹೋಗಿರುವ ಉದ್ಯೋಗಿಗಳು ಸದ್ಯಕ್ಕೆ ವಾಪಸ್‌ ಬರುವುದಿಲ್ಲ. ಇನ್ನು ಶಿಕ್ಷಣ ಸಂಸ್ಥೆಗಳು ಪುನರಾರಂಭವಾಗದ ಕಾರಣ ವಿದ್ಯಾರ್ಥಿಗಳೂ ಬರುವುದಿಲ್ಲ. ಈಗಿನ ಪರಿಸ್ಥಿತಿಯನ್ನು ನೋಡಿದರೆ 6–7 ತಿಂಗಳ ಕಾಲ ಇದೇ ರೀತಿ ಇರುವ ಸಾಧ್ಯತೆ ಹೆಚ್ಚಾಗಿದೆ ಎನ್ನುತ್ತಾರೆ ಖಾಸಗಿ ಕಂಪನಿಯೊಂದರ ಉದ್ಯೋಗಿ ಮಹೇಶ್‌.

ಎಲೆಕ್ಟ್ರಾನಿಕ್‌ ಸಿಟಿ, ಮಹದೇವಪುರ, ಮಾರತ್‌ಹಳ್ಳಿ, ಹೆಬ್ಬಾಳ, ಬಿಟಿಎಂ ಲೇಹೌಟ್‌ ಸೇರಿದಂತೆ ಹಲವು ಕಡೆ ಆಂಧ್ರಪ್ರದೇಶ ಮೂಲದವರೇ ಹೆಚ್ಚಾಗಿ ಪಿ.ಜಿ.ಗಳನ್ನು ನಡೆಸುತ್ತಿದ್ದರು. ಬೇಡಿಕೆ ಹೆಚ್ಚುತ್ತಿದ್ದಂತೆಯೇ ಕೆಲವು ಕಡೆ ವಾಸದ ಮನೆಗಳನ್ನೇ ಪಿ.ಜಿ.ಗಳನ್ನಾಗಿ ಪರಿವರ್ತಿಸಲಾಯಿತು. ಇನ್ನೂ ಕೆಲವರು ಪಿ.ಜಿ.ಗಳಿಗೆ ಕೊಡುವ ಉದ್ದೇಶದಿಂದ ಅದಕ್ಕೆ ಅನುಗುಣವಾಗಿ ಕಟ್ಟಡಗಳನ್ನು ನಿರ್ಮಾಣ ಮಾಡಿದರು. ಅಂಥಹ ಮಾಲೀಕರು ಈಗ ಬಾಡಿಗೆ ಇಲ್ಲದೆ ಪರಿತಪ್ಪಿಸುತ್ತಿದ್ದಾರೆ ಎಂದು ಮಧ್ಯವರ್ತಿ ಶ್ರೀನಿವಾಸ ರೆಡ್ಡಿ ತಿಳಿಸಿದರು.

ಕೊರೊನಾ ನಿಯಂತ್ರಣಕ್ಕೆ ಬರುವವರೆಗೂ ದೈಹಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯ. ಆದರೆ, ಪಿ.ಜಿ.ಗಳಲ್ಲಿ ವಾಸವಿದ್ದರೆ ಇದು ಅಸಾಧ್ಯ. ಅಲ್ಲಿ ಒಂದು ಕೊಠಡಿಯಲ್ಲಿ 3–4 ಜನರನ್ನು ಹಾಕುತ್ತಾರೆ. ಇಂತಹ ವಾತಾವರಣದಲ್ಲಿ ಇದ್ದರೆ ಅಂತರದಲ್ಲಿ ಇರಲು ಆಗುವುದಿಲ್ಲ. ಆದ್ದರಿಂದ ಕೊರೊನಾ ನಿರ್ಮೂಲನೆ ಆಗುವವರೆಗೂ ಪಿ.ಜಿ.ಗಳಿಗೆ ಮೊದಲಿನ ಬೇಡಿಕೆ ಬರುವುದಿಲ್ಲ. ಊರುಗಳಿಗೆ ತೆರಳಿರುವ ಉದ್ಯೋಗಿಗಳು, ವಿದ್ಯಾರ್ಥಿಗಳು ನಗರಕ್ಕೆ ವಾಪಸ್‌ ಆದರೂ, ಪಿ.ಜಿ.ಗಳನ್ನು ಆಯ್ಕೆ ಮಾಡಿಕೊಳ್ಳುವ ಬದಲು ಮನೆಗಳಲ್ಲಿ ವಾಸವಿರಲು ಆದ್ಯತೆ ನೀಡುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.