ADVERTISEMENT

ಆಮ್ಲಜನಕ ಸಿಲಿಂಡರ್‌ಗಾಗಿ ನೂರಾರು ಕರೆಗಳು !

ಐದು ಪಟ್ಟು ಹೆಚ್ಚು ಬೇಡಿಕೆ * ಆಕ್ಸಿಜನ್‌ ಸಿಲಿಂಡರ್‌ಗೆ ಗೋಗರೆಯುತ್ತಿರುವ ರೋಗಿಗಳು

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2021, 19:48 IST
Last Updated 21 ಏಪ್ರಿಲ್ 2021, 19:48 IST
ಪೀಣ್ಯದಲ್ಲಿರುವ ‘ಯುನಿವರ್ಸಲ್‌ ಏರ್‌ ರಿಫಿಲ್ಲಿಂಗ್‌’ ಘಟಕದಲ್ಲಿ ಬುಧವಾರ ಪೊಲೀಸ್‌ ಭದ್ರತೆಯಲ್ಲಿ ಆಮ್ಲಜನಕವನ್ನು ಸಿಲಿಂಡರ್‌ಗೆ ತುಂಬಿಸಲಾಯಿತು. ಆಮ್ಲಜನಕ ಕೊರತೆ ಕಾರಣ ಘಟಕದ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ದೂರುಗಳ ಕಾರಣ ಇಂತಹ ಘಟಕಗಳಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ– ಪ್ರಜಾವಾಣಿ ಚಿತ್ರ
ಪೀಣ್ಯದಲ್ಲಿರುವ ‘ಯುನಿವರ್ಸಲ್‌ ಏರ್‌ ರಿಫಿಲ್ಲಿಂಗ್‌’ ಘಟಕದಲ್ಲಿ ಬುಧವಾರ ಪೊಲೀಸ್‌ ಭದ್ರತೆಯಲ್ಲಿ ಆಮ್ಲಜನಕವನ್ನು ಸಿಲಿಂಡರ್‌ಗೆ ತುಂಬಿಸಲಾಯಿತು. ಆಮ್ಲಜನಕ ಕೊರತೆ ಕಾರಣ ಘಟಕದ ಸಿಬ್ಬಂದಿ ಹಾಗೂ ಆಸ್ಪತ್ರೆಯ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯುತ್ತಿರುವ ದೂರುಗಳ ಕಾರಣ ಇಂತಹ ಘಟಕಗಳಲ್ಲಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ– ಪ್ರಜಾವಾಣಿ ಚಿತ್ರ   

ಬೆಂಗಳೂರು: ನಗರದಲ್ಲಿ ವೈದ್ಯಕೀಯ ಆಮ್ಲಜನಕ ಕೊರತೆ ವಿಪರೀತ ಹೆಚ್ಚಾಗಿದ್ದು, ಆಕ್ಸಿಜನ್‌ ಸಿಲಿಂಡರ್‌ಗಾಗಿ ಅಕ್ಷರಶಃ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಥಣಿಸಂದ್ರದ ಯುನೈಟೆಡ್ ಫೋರಂ, ಜೆ.ಸಿ. ನಗರದ ಹೆಲ್ಪ್ ಕ್ರಿಸ್ಸಿ ಮ್ಯಾನೇಜ್‌ಮೆಂಟ್‌, ಬಸವನಗುಡಿಯ ಮೈಸ್ಸಿ ಮಿಷನ್ ಸೇರಿದಂತೆ ಹಲವು ಸರ್ಕಾರೇತರ ಸಂಸ್ಥೆಗಳು ಉಚಿತವಾಗಿ ಆಕ್ಸಿಜನ್ ಸಿಲಿಂಡರ್‌ ನೀಡುತ್ತಿವೆ. ಆದರೆ, ಎಲ್ಲರಿಗೂ ವೈದ್ಯಕೀಯ ಆಮ್ಲಜನಕ ಪೂರೈಸಲು ಅವುಗಳಿಗೂ ಸಾಧ್ಯವಾಗುತ್ತಿಲ್ಲ. ನಿರೀಕ್ಷೆಗಿಂತ ಐದಾರು ಪಟ್ಟು ಹೆಚ್ಚು ಬೇಡಿಕೆ ಇದೆ ಎಂದು ಅವರು ಹೇಳುತ್ತಾರೆ.

‘ಕಳೆದ ವರ್ಷವೂ ನಾವು ಉಚಿತವಾಗಿ ಸಿಲಿಂಡರ್‌ಗಳನ್ನು ಪೂರೈಸಿದ್ದೆವು. ಆದರೆ, ಇಷ್ಟು ಬೇಡಿಕೆ ಇರಲಿಲ್ಲ. ಬಹಳಷ್ಟು ಹಾಗೆಯೇ ಉಳಿದಿದ್ದವು. ಆದರೆ, ಈಗ ದಿನಕ್ಕೆ ನೂರಾರು ಸಿಲಿಂಡರ್‌ ವಿತರಿಸಿದರೂ ಸಾಧ್ಯವಾಗುತ್ತಿಲ್ಲ’ ಎಂದು ಥಣಿಸಂದ್ರದ ಯುನೈಟೆಡ್‌ ಫೋರಂ ಸಂಸ್ಥೆಯ ಸಿಬ್ಬಂದಿಯೊಬ್ಬರು ಹೇಳಿದರು.

ADVERTISEMENT

‘ನಮ್ಮ ಸಂಸ್ಥೆಯಲ್ಲಿ ಈ ಉದ್ದೇಶಕ್ಕೆ ಆರು ಜನ ಕೆಲಸ ಮಾಡುತ್ತಿದ್ದೇವೆ. ಪ್ರತಿದಿನ ಒಬ್ಬೊಬ್ಬರಿಗೆ 200ಕ್ಕೂ ಹೆಚ್ಚು ಕರೆಗಳು ಬರುತ್ತಿವೆ. ಅಂದರೆ, ದಿನಕ್ಕೆ ಸಾವಿರಕ್ಕೂ ಹೆಚ್ಚು ಜನ ಕರೆ ಮಾಡುತ್ತಿದ್ದಾರೆ. ವೈದ್ಯಕೀಯ ಆಮ್ಲಜನಕ ಸಿಲಿಂಡರ್ ಪೂರೈಸಿ ಜೀವ ಉಳಿಸಿ ಎಂದು ಮನವಿ ಮಾಡಿಕೊಳ್ಳುತ್ತಾರೆ. ಎಲ್ಲರಿಗೂ ಪೂರೈಸಲು ಸಾಧ್ಯವಾಗದಿರುವುದಕ್ಕೆ ತುಂಬಾ ಬೇಸರವಾಗುತ್ತಿದೆ’ ಎಂದು ಹೇಳಿದರು.

‘ಕೋವಿಡ್‌ನ ಸಾಮಾನ್ಯ ಲಕ್ಷಣಗಳಾದ ಶೀತ, ಜ್ವರ, ನಿಶಕ್ತಿ ಅಥವಾ ಕೆಮ್ಮು ಕೆಲವು ಸೋಂಕಿತರಲ್ಲಿ ಕಂಡು ಬರುವುದಿಲ್ಲ. ಆದರೂ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದರಿಂದ ಸಿಲಿಂಡರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ’ ಎಂದು ಅವರು ಹೇಳಿದರು.

ದಿನಕ್ಕೆ 250 ಟನ್‌ ಬೇಡಿಕೆ:

‘ನಗರದಲ್ಲಿ ದಿನಕ್ಕೆ 100 ಟನ್‌ನಷ್ಟು ಮಾತ್ರ ವೈದ್ಯಕೀಯ ಆಮ್ಲಜನಕ ಲಭ್ಯವಾಗುತ್ತಿದೆ' ಎಂದು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಸಂಘ (ಫನಾ) ಹೇಳಿದೆ.

‘ನಗರಕ್ಕೆ ಸಾಮಾನ್ಯವಾಗಿ ದಿನಕ್ಕೆ 50 ಟನ್‌ನಷ್ಟು ವೈದ್ಯಕೀಯ ಆಮ್ಲಜನಕ ಸಾಕಾಗುತ್ತಿತ್ತು. ಆದರೆ, ಈಗ ಬೇಡಿಕೆ ಐದು ಪಟ್ಟು (250 ಟನ್‌) ಹೆಚ್ಚಾಗಿದೆ. ಇದರ ಕೊರತೆ ಉದ್ಭವಿಸದಂತೆ ಬಿಬಿಎಂಪಿ ಎಲ್ಲ ಕ್ರಮ ಕೈಗೊಳ್ಳಲಿದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.