ADVERTISEMENT

ಕೋವಿಡ್ | ಮೌಲ್ಯಮಾಪನ ನಡೆಸಿ ದಾಖಲಾತಿ: ತ್ರಿಲೋಕ್ ಚಂದ್ರ ಮಾಹಿತಿ

ಆರೋಗ್ಯ ಇಲಾಖೆ ಆಯುಕ್ತ

​ಪ್ರಜಾವಾಣಿ ವಾರ್ತೆ
Published 15 ಮೇ 2021, 21:19 IST
Last Updated 15 ಮೇ 2021, 21:19 IST
ತ್ರಿಲೋಕ್ ಚಂದ್ರ
ತ್ರಿಲೋಕ್ ಚಂದ್ರ   

ಬೆಂಗಳೂರು: ‘ಕೋವಿಡ್ ಪೀಡಿತರಲ್ಲಿ ಕೆಲವರು ಭಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಪರಿಣಾಮ ತುರ್ತಾಗಿ ಆಸ್ಪತ್ರೆ ಚಿಕಿತ್ಸೆ ಅಗತ್ಯ ಇರುವವರಿಗೆ ಹಾಸಿಗೆ ದೊರೆಯದೆ ಸಮಸ್ಯೆಯಾಗಲಿದೆ. ಹಾಗಾಗಿ, ವ್ಯಕ್ತಿಯನ್ನು ದಾಖಲಿಸಿಕೊಳ್ಳುವ ಮೊದಲು ಮೌಲ್ಯಮಾಪನ ನಡೆಸಲು ಆಸ್ಪತ್ರೆಗಳಿಗೆ ಸೂಚಿಸಲಾಗಿದೆ’ ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ.ಕೆ.ವಿ. ತ್ರಿಲೋಕ್ ಚಂದ್ರ ತಿಳಿಸಿದರು.

ಕೋವಿಡ್ ನಿರ್ವಹಣೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ಸದ್ಯದ ಪರಿಸ್ಥಿತಿಯಲ್ಲಿ ಶೇ 85ರಷ್ಟು ಮಂದಿ ಮನೆ ಆರೈಕೆಗೆ ಒಳಗಾಗುತ್ತಿದ್ದಾರೆ. ಸೋಂಕಿತರಲ್ಲಿ ಬಹುತೇಕರಿಗೆ ಲಕ್ಷಣಗಳು ಅಷ್ಟಾಗಿ ಕಾಣಿಸಿಕೊಳ್ಳುತ್ತಿಲ್ಲ. ಮಾರ್ಗಸೂಚಿಯನ್ನು ಕಟ್ಟಿನಿಟ್ಟಾಗಿ ಪಾಲನೆ ಮಾಡಿ, ಅಗತ್ಯ ಆರೈಕೆ ಮಾಡಿಕೊಂಡಲ್ಲಿ ವಿಶೇಷ ಚಿಕಿತ್ಸೆ ಅಗತ್ಯ ಇರುವುದಿಲ್ಲ. ಹಾಗಾಗಿ, ಚಿಕಿತ್ಸೆ ಸಂಬಂಧ ಆಸ್ಪತ್ರೆಗೆ ಬರುವವರನ್ನು ದಾಖಲಿಸಿಕೊಳ್ಳುವ ಮುನ್ನವೇ ತಪಾಸಣೆ ನಡೆಸಿ, ಆಸ್ಪತ್ರೆ ಚಿಕಿತ್ಸೆ ಅಗತ್ಯವಿರದಿದ್ದರೆ ಕೋವಿಡ್ ಆರೈಕೆ ಕೇಂದ್ರಗಳಿಗೆ ದಾಖಲಾಗಲು ಸೂಚಿಸಲಾಗುತ್ತದೆ’ ಎಂದು ಹೇಳಿದರು.

‘ಕೋವಿಡ್ ಆರೈಕೆ ಕೇಂದ್ರಗಳಲ್ಲಿ ಕೂಡ ಆಮ್ಲಜನಕ ಸಾಂದ್ರಕವನ್ನು ಒದಗಿಸಿ, ಚಿಕಿತ್ಸೆ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಂಡವರನ್ನು ಸ್ಟೆಪ್‌ಡೌನ್ ಆಸ್ಪತ್ರೆಗೆ ಸ್ಥಳಾಂತರ ಮಾಡಲಾಗುತ್ತದೆ. ‘ರೆಮ್‌ಡಿಸಿವಿರ್’ ಹಾಗೂ ಆಮ್ಲಜನಕವು ಸಮರ್ಪಕವಾಗಿ ಬಳಕೆಯಾಗಬೇಕೆಂಬ ಉದ್ದೇಶದಿಂದ ಕೆಪಿಎಂಇ ಪೋರ್ಟಲ್‌ನಲ್ಲಿ ರೋಗಿಯ ವಿವರ ಸಹಿತ ವಿವಿಧ ಮಾಹಿತಿಗಳನ್ನು ನಮೂದಿಸುವ ವ್ಯವಸ್ಥೆ ತರಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಸಿ.ವಿ. ರಾಮನ್ ಸಾರ್ವಜನಿಕ ಆಸ್ಪತ್ರೆ, ಕೆ.ಸಿ. ಜನರಲ್ ಸಾಂಕ್ರಾಮಿಕ ರೋಗಗಳ ಆಸ್ಪತ್ರೆ, ಜಯನಗರ ಸಾರ್ವಜನಿಕ ಆಸ್ಪತ್ರೆ ಹಾಗೂ ಕುಷ್ಠರೋಗ ಆಸ್ಪತ್ರೆಯಲ್ಲಿ ಸುಮಾರು 125 ಐಸಿಯು ಹಾಸಿಗೆ ನಿರ್ಮಿಸಲು ಎನ್‌ಡಿಸಿಪಿ ಮತ್ತು ಸಿಐಎ ಕಂಪನಿ ಮುಂದೆ ಬಂದಿದೆ. ಕಾರ್ಪೊರೇಟ್‌ ಕಂಪನಿಗಳ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್‌ಆರ್‌) ಅಡಿಯಲ್ಲಿ ವಿವಿಧ ಕಂಪನಿಗಳು ಆಸ್ಪತ್ರೆಗಳಿಗೆ ಅಗತ್ಯವಿರುವ ಮಾಡ್ಯುಲಾರ್ ಐಸಿಯು, ಆಮ್ಲಜನಕ ಜನರೇಟರ್ ಮತ್ತು ಆಮ್ಲಜನಕ ಸಾಂದ್ರಕ ಒದಗಿಸಲು ಮುಂದೆಬರಬೇಕು’ ಎಂದು ಮನವಿ ಮಾಡಿಕೊಂಡರು.

ಆಮ್ಲಜನಕ ಸಾಂದ್ರಕ ಪೂರೈಕೆ
‘ಆಮ್ಲಜನಕದ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ 10ರಿಂದ 15 ಲೀ. ವೈದ್ಯಕೀಯ ಆಮ್ಲಜನಕ ಅಗತ್ಯ ಇರುವವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹಂತದಲ್ಲಿಯೇ ಆಮ್ಲಜನಕ ಸಾಂದ್ರಕವನ್ನು ಒದಗಿಸುವ ಯೋಜನೆ ರೂಪಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ 40 ಆಸ್ಪತ್ರೆಗಳಲ್ಲಿ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಪ್ರಾರಂಭಮಾಡಲು ಕಾರ್ಯಾದೇಶ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ 28 ಹಾಗೂ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯಿಂದ (ಡಿಆರ್‌ಡಿಒ) 20 ಕಡೆ ಇಂತಹ ಘಟಕ ಅಳವಡಿಕೆ ಮಾಡಲಾಗುತ್ತದೆ’ ಎಂದು ಡಾ.ಕೆ.ವಿ. ತ್ರಿಲೋಕ್ ಚಂದ್ರ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.