ADVERTISEMENT

ಬಿಎಂಸಿಆರ್‌ಐ: ಕೋವಿಡ್ ಪರೀಕ್ಷೆಗೆ ರೋಗಿಗಳ ಅಲೆದಾಟ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 16:29 IST
Last Updated 7 ಡಿಸೆಂಬರ್ 2021, 16:29 IST

ಬೆಂಗಳೂರು:ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆಯಡಿ (ಬಿಎಂಸಿಆರ್‌ಐ) ಕಾರ್ಯನಿರ್ವಹಿಸುತ್ತಿರುವ ಆಸ್ಪತ್ರೆಗಳಲ್ಲಿ ಕೋವಿಡ್ ಪರೀಕ್ಷೆ ಸಮಸ್ಯೆಯಾಗಿದ್ದು, ರೋಗಿಗಳು ಅಲೆದಾಟ ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಸಂಸ್ಥೆಯ ಅಡಿಯಲ್ಲಿವಿಕ್ಟೋರಿಯಾ, ವಾಣಿವಿಲಾಸ, ಮಿಂಟೊ,ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ (ಪಿಎಂಎಸ್‌ಎಸ್‌ವೈ) ಹಾಗೂ ನೆಪ್ರೊ ಯುರಾಲಜಿ ಸಂಸ್ಥೆ ಕಾರ್ಯನಿರ್ವಹಿಸುತ್ತಿವೆ. 10 ದಿನಗಳಿಂದ ಈ ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಕೋವಿಡ್ ಪರೀಕ್ಷೆ ಸಮಸ್ಯೆಯಾಗಿದೆ. ಪರೀಕ್ಷೆ ನಡೆಸಲು ಬೇಕಾದ ನಳಿಕೆಗಳನ್ನು (ವೈರಲ್ ಟ್ರಾನ್ಸ್‌ಫೋರ್ಟ್‌ ಮೀಡಿಯಾ ಟ್ಯೂಬ್) ಪೂರೈಸುವ ಕಂಪನಿಗೆ ಸಂಸ್ಥೆ ಹಣ ಪಾವತಿಸಿಲ್ಲ. ಇದರಿಂದಾಗಿ ಈ ನಳಿಕೆಗಳು ಅಗತ್ಯ ಪ್ರಮಾಣದಲ್ಲಿ ಪೂರೈಕೆಯಾಗದೆ ಕೊರತೆ ಉಂಟಾಗಿದ್ದು, ಹೊರಗಡೆಯಿಂದ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಆಸ್ಪತ್ರೆಗಳು ಸೂಚಿಸುತ್ತಿವೆ.

ಆಸ್ಪತ್ರೆಗೆ ದಾಖಲಾಗುವ ರೋಗಿಗಳು ಸೋಂಕಿತರಾಗಿಲ್ಲ ಎನ್ನುವುದರ ಬಗ್ಗೆ ಕೋವಿಡ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಹೊಂದಿರಬೇಕು. ಇಷ್ಟು ದಿನ ಆಸ್ಪತ್ರೆಗಳಲ್ಲಿಯೇ ರೋಗಿಗಳ ಗಂಟಲ ದ್ರವದ ಮಾದರಿ ಸಂಗ್ರಹಿಸಿ, ಕೋವಿಡ್ ಪರೀಕ್ಷೆ ನಡೆಸಲಾಗುತ್ತಿತ್ತು. ಆದರೆ, ಈಗ ನಳಿಕೆಗಳು ಇಲ್ಲದಿರುವುದರಿಂದ ರೋಗಿಗಳು ತಮ್ಮ ಸ್ವಂತ ಖರ್ಚಿನಲ್ಲಿ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿದೆ. ದಾಖಲಾತಿಯೂ ವಿಳಂಬವಾಗಿ, ಚಿಕಿತ್ಸೆ ಸಮಸ್ಯೆಯಾಗುತ್ತಿದೆ.

ADVERTISEMENT

ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ:‘ರೋಗಿಯನ್ನು ದಾಖಲಿಸಿಕೊಳ್ಳಲು ಕೋವಿಡ್ ಪರೀಕ್ಷೆಯ ವರದಿ ಹಾಜರುಪಡಿಸುವಂತೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸೂಚಿಸಿದರು. ಇದರಿಂದಾಗಿ ರೋಗಿಯೊಂದಿಗೆ ಅಲೆದಾಟ ನಡೆಸಬೇಕಾಯಿತು. ಎಲ್ಲಿ ಪರೀಕ್ಷೆ ಮಾಡುತ್ತಾರೆ ಎನ್ನುವ ಮಾಹಿತಿಯನ್ನೂ ಸರಿಯಾಗಿ ನೀಡುತ್ತಿಲ್ಲ. ಅಂತಿಮವಾಗಿಪಿಎಂಎಸ್‌ಎಸ್‌ವೈ ಆಸ್ಪತ್ರೆಯಲ್ಲಿನ ಖಾಸಗಿ ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿಸಿಕೊಳ್ಳಲಾಯಿತು’ ಎಂದು ರೋಗಿಯ ಸಂಬಂಧಿಯೊಬ್ಬರು ತಿಳಿಸಿದರು.

‘ಬೆರಳಣಿಕೆಯಷ್ಟು ನಳಿಕೆಗಳು ಮಾತ್ರ ಆಸ್ಪತ್ರೆಯಲ್ಲಿದ್ದು, ಈಗಾಗಲೇ ದಾಖಲಾದ ಒಳರೋಗಿಗಳ ಪರೀಕ್ಷೆಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಹೊಸದಾಗಿ ಬರುವ ರೋಗಿಗಳನ್ನು ಹೊರಗಡೆ ಕಳುಹಿಸಲಾಗುತ್ತಿದೆ’ ಎಂದು ವಿಕ್ಟೋರಿಯಾ ಆಸ್ಪತ್ರೆಯ ವೈದ್ಯರೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.