ADVERTISEMENT

ಕೋವಿಡ್ ಲಸಿಕೆ: ಮತ್ತಷ್ಟು ಸಿಬ್ಬಂದಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 27 ಮೇ 2021, 21:47 IST
Last Updated 27 ಮೇ 2021, 21:47 IST

ಬೆಂಗಳೂರು: ಕೋವಿಡ್ ಲಸಿಕೆ ವಿತರಣೆಗೆ ಸಂಬಂಧಿಸಿ 18ರಿಂದ 44 ವರ್ಷದೊಳಗಿನ ಕೊರೊನಾ ಮುಂಚೂಣಿ ಕಾರ್ಯಕರ್ತರ ಗುಂಪಿಗೆ ಅಗ್ನಿಶಾಮಕ ಇಲಾಖೆ ಸೇರಿದಂತೆ ವಿವಿಧೆಡೆ ಕಾರ್ಯನಿರ್ವಹಿಸುವ ಸಿಬ್ಬಂದಿಯನ್ನು ಸೇರಿಸಲಾಗಿದೆ.

ಈ ಸಂಬಂಧ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರು ಜಿಲ್ಲಾಧಿಕಾರಿಗಳು ಹಾಗೂ ಬಿಬಿಎಂಪಿ ಮಖ್ಯ ಆಯುಕ್ತರಿಗೆ ಸೂಚನೆ ನೀಡಿದ್ದಾರೆ. ಒಂದು ವಾರದ ಹಿಂದೆ ಮುಖ್ಯ ಕಾರ್ಯದರ್ಶಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 18ರಿಂದ 44 ವರ್ಷದವರೆಗಿನ ಕೊರೊನಾ ಮುಂಚೂಣಿ ಕಾರ್ಯಕರ್ತರು ಹಾಗೂ ಆದ್ಯತಾ ಗುಂಪುಗಳನ್ನು ಗುರುತಿಸಲಾಗಿತ್ತು. ಅವರಿಗೆ ಮೇ 22ರಿಂದ ಲಸಿಕೆ ವಿತರಣೆ ಪ್ರಾರಂಭಿಸಲಾಗಿದೆ. ಈಗ ಆ ಸಾಲಿಗೆ ಮತ್ತಷ್ಟು ಗುಂಪುಗಳನ್ನು ಸೇರ್ಪಡೆ ಮಾಡಲಾಗಿದೆ.

ಕರ್ನಾಟಕ ರಾಜ್ಯ ಅಗ್ನಿಶಾಮಕ ಇಲಾಖೆ ಸಿಬ್ಬಂದಿ, ಆಸ್ಪತ್ರೆಗಳಿಗೆ ವೈದ್ಯಕೀಯ ಆಮ್ಲಜನಕ, ಔಷಧ ಹಾಗೂ ವೈದ್ಯಕೀಯ ಉಪಕರಣಗಳನ್ನು ಸರಬರಾಜು ಮಾಡುವ ಸಿಬ್ಬಂದಿ, ಕರ್ನಾಟಕ ರಾಜ್ಯ ಆಹಾರ ನಿಗಮ ಸಿಬ್ಬಂದಿ, ದೀರ್ಘಾವಧಿ ಅನಾರೋಗ್ಯ ಸಮಸ್ಯೆ ಎದುರಿಸುತ್ತಿರುವವರು, ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಸಿಬ್ಬಂದಿ, ತೋಟಗಾರಿಕೆ ಇಲಾಖೆ ಸಿಬ್ಬಂದಿ ಹಾಗೂ ಭಾರತ್ ಎಲೆಕ್ಟ್ರಾನಿಕ್ ಲಿಮಿಟೆಡ್ ಸಿಬ್ಬಂದಿ ಹೊಸದಾಗಿ ಮುಂಚೂಣಿ ಕಾರ್ಯಕರ್ತರ ಗುಂಪಿಗೆ ಸೇರ್ಪಡೆಯಾಗಿದ್ದಾರೆ.

ADVERTISEMENT

ಆದ್ಯತೆ ಗುಂಪಿಗೆ ವಿಮೆ ಸಿಬ್ಬಂದಿಯನ್ನು ಸೇರ್ಪಡೆಮಾಡಲಾಗಿದೆ. ಒಟ್ಟು 29 ವಿಭಾಗದಲ್ಲಿ ಮುಂಚೂಣಿ ಕಾರ್ಯಕರ್ತರನ್ನು ಗುರುತಿಸಲಾಗಿದೆ. ಅದೇ ರೀತಿ, ಹೋಟೆಲ್ ಮತ್ತು ಆತಿಥ್ಯ ಸೇವಾದಾರರು, ಪೆಟ್ರೋಲ್ ಬಂಕ್ ಕೆಲಸಗಾರರು ಸೇರಿದಂತೆ 19 ವಿಭಾಗಗಳಲ್ಲಿ ವಿವಿಧ ವಲಯಗಳಲ್ಲಿ ಕೆಲಸ ಮಾಡುತ್ತಿರುವವರನ್ನು ಆದ್ಯತಾ ಗುಂಪಿನಲ್ಲಿ ಗುರುತಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.