ADVERTISEMENT

ಕೋವಿಡ್ ಲಸಿಕೆ ಪಡೆಯಲು ಗರ್ಭಿಣಿಯರು ಹಿಂದೇಟು

​ಪ್ರಜಾವಾಣಿ ವಾರ್ತೆ
Published 23 ಜುಲೈ 2021, 20:19 IST
Last Updated 23 ಜುಲೈ 2021, 20:19 IST
   

ಬೆಂಗಳೂರು: ‘ಕೋವಿಡ್ ಲಸಿಕೆ ಸುರಕ್ಷಿತ’ ಎಂದು ಆರೋಗ್ಯ ಇಲಾಖೆ ಜಾಗೃತಿ ಅಭಿಯಾನ ಕೈಗೊಂಡರೂ ನಗರದಲ್ಲಿನ ಗರ್ಭಿಣಿಯರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ.

ಕೆಲ ದಿನಗಳ ಹಿಂದಷ್ಟೇ ಕೇಂದ್ರ ಆರೋಗ್ಯ ಸಚಿವಾಲಯವು ಗರ್ಭಿಣಿಯರಿಗೆ ಲಸಿಕೆ ಒದಗಿಸುವ ಸಂಬಂಧ ಮಾರ್ಗಸೂಚಿಯನ್ನು ಹೊರಡಿಸಿ, ಮಗು ಮತ್ತು ತಾಯಿಯ ಆರೋಗ್ಯದ ದೃಷ್ಟಿಯಿಂದ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ಸೂಚಿಸಿತ್ತು. ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ ಎಂದು ಆರೋಗ್ಯ ಇಲಾಖೆ ಜಾಗೃತಿ ಮೂಡಿಸಿತ್ತು. ಆದರೂ ಹಿಂಜರಿಕೆ, ತಪ್ಪು ಕಲ್ಪನೆ ಹಾಗೂ ಅಡ್ಡ ಪರಿಣಾಮದ ಆತಂಕದಿಂದ ಲಸಿಕೆ ಪಡೆಯಲು ಗರ್ಭಿಣಿಯರು ಮುಂದೆ ಬರುತ್ತಿಲ್ಲ ಎಂದು ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ.

ಕೋವಿಡ್ ಕಾಣಿಸಿಕೊಳ್ಳುವ ಮೊದಲು ನಗರದ ವಾಣಿವಿಲಾಸ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1,200ಕ್ಕೂ ಅಧಿಕ ಹೆರಿಗೆಗಳು ನಡೆಯುತ್ತಿದ್ದವು. ಈಗ 800ರಿಂದ 900 ಹೆರಿಗೆಗಳನ್ನು ಮಾಡಲಾಗುತ್ತಿದೆ. ಪ್ರತಿನಿತ್ಯ 300ಕ್ಕೂ ಅಧಿಕ ಗರ್ಭಿಣಿಯರು ಹೊರ ರೋಗಿ ವಿಭಾಗಕ್ಕೆ ಭೇಟಿ ನೀಡಿ, ತಪಾಸಣೆಗೆ ಒಳಪಡುತ್ತಿದ್ದಾರೆ. ಅಲ್ಲಿನ ವೈದ್ಯರು ಲಸಿಕೆ ಪಡೆದುಕೊಳ್ಳುವಂತೆ ಕೂಡ ಸೂಚಿಸುತ್ತಿದ್ದು, ಕೆಲವರಲ್ಲಿನ ತಪ್ಪು ಕಲ್ಪನೆ ಹೋಗಲಾಡಿಸಲು ಕೌನ್ಸಲಿಂಗ್ ಕೂಡ ನಡೆಸುತ್ತಿದ್ದಾರೆ. ಅಷ್ಟಾಗಿಯೂ ಪ್ರತಿನಿತ್ಯ ಸರಾಸರಿ ಮೂರರಿಂದ ನಾಲ್ಕು ಗರ್ಭಿಣಿಯರು ಮಾತ್ರ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ADVERTISEMENT

ಬಿಬಿಎಂಪಿ ವ್ಯಾಪ್ತಿಯಲ್ಲಿ ಈವರೆಗೆ 69.01 ಲಕ್ಷ ಡೋಸ್ ಲಸಿಕೆಯನ್ನು 18 ವರ್ಷ ಮೇಲ್ಪಟ್ಟವರಿಗೆ ವಿತರಿಸಲಾಗಿದೆ. 54.96 ಲಕ್ಷ ಮಂದಿ ಮೊದಲ ಡೋಸ್ ಹಾಗೂ 14.04 ಲಕ್ಷ ಮಂದಿ ಎರಡನೇ ಡೋಸ್ ಲಸಿಕೆ ಪಡೆದುಕೊಂಡಿದ್ದಾರೆ. ಗರ್ಭಿಣಿಯರು ಮತ್ತು ಬಾಣಂತಿಯರು ಲಸಿಕೆ ನೀಡಿರುವ ಬಗ್ಗೆ ಕೋವಿನ್ ಪೋರ್ಟಲ್‌ನಲ್ಲಿ ಪ್ರತ್ಯೇಕವಾಗಿ ಮಾಹಿತಿಯನ್ನು ನಮೂದಿಸಲಾಗುತ್ತಿಲ್ಲ.

‘ಕೋವಿಡ್ ಲಸಿಕೆ ಪಡೆದುಕೊಳ್ಳುವಂತೆ ಎಷ್ಟೇ ಜಾಗೃತಿ ಮೂಡಿಸಿದರೂ ಗರ್ಭಿಣಿಯರು ಹೆಚ್ಚಿನ ಸಂಖ್ಯೆಯಲ್ಲಿ ಮಂದೆ ಬರುತ್ತಿಲ್ಲ. ಹೊಟ್ಟೆಯಲ್ಲಿರುವ ಶಿಶುವಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದೆಂಬ ಆತಂಕವನ್ನು ಕೆಲವರಲ್ಲಿ ಕಾಣುತ್ತಿದ್ದೇವೆ. ಕುಟುಂಬದ ಸದಸ್ಯರೊಂದಿಗೆ ಬಂದವರಲ್ಲಿ ಕೆಲವರು ಮಾತ್ರ ಲಸಿಕೆ ಪಡೆದುಕೊಳ್ಳುತ್ತಿದ್ದಾರೆ. ಕೋವಿಡ್ ಲಸಿಕೆಯನ್ನು ಗರ್ಭಾವಸ್ಥೆಯ ಯಾವುದೇ ಸಮಯದಲ್ಲಾದರೂ ಪಡೆದುಕೊಳ್ಳಬಹುದು’ ಎಂದು ವಾಣಿವಿಲಾಸ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.