ADVERTISEMENT

ತಯಾರಕ ಕಂಪನಿಗಳಿಂದ ಕೋವಿಡ್ ಲಸಿಕೆ ಪೂರೈಕೆ ಸ್ಥಗಿತ- ಖಾಸಗಿಯಲ್ಲೂ ಲಸಿಕೆ ಖಾಲಿ

ತುರ್ತಾಗಿ ಲಸಿಕೆ ಬೇಕಾದವರಿಗೆ ಸಮಸ್ಯೆ

ವರುಣ ಹೆಗಡೆ
Published 14 ಮೇ 2023, 21:15 IST
Last Updated 14 ಮೇ 2023, 21:15 IST
   

ಬೆಂಗಳೂರು: ಕೋವಿಡ್ ಲಸಿಕೆಯ ತಯಾರಿಕೆ ಕಂಪನಿಗಳು ಪೂರೈಕೆಯನ್ನು ಸ್ಥಗಿತಗೊಳಿಸಿವೆ. ಇದರಿಂದಾಗಿ ರಾಜ್ಯದ ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆಯ ದಾಸ್ತಾನು ಖಾಲಿಯಾಗಿದೆ. 

ಕೇಂದ್ರ ಸರ್ಕಾರ ಕೆಲ ದಿನಗಳ ಹಿಂದೆ ರಾಜ್ಯಗಳಿಗೆ ಲಸಿಕೆಯ ಪೂರೈಕೆ ಸ್ಥಗಿತಗೊಳಿಸಿತ್ತು. ಇದರಿಂದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆಯನ್ನು ಸ್ಥಗಿತ ಮಾಡಲಾಗಿದೆ. ವಿದೇಶಕ್ಕೆ ತೆರಳುವವರು, ಮುನ್ನೆಚ್ಚರಿಕೆ ಡೋಸ್ ಅಗತ್ಯವಿರುವವರು ಸೇರಿ ಲಸಿಕೆ ಬೇಕಿರುವವರು ಖಾಸಗಿ ಕೇಂದ್ರಗಳಲ್ಲಿ ಲಸಿಕೆ ಪಡೆಯುತ್ತಿದ್ದರು. ಈಗ ಪೂರೈಕೆ ಸ್ಥಗಿತವಾಗಿದ್ಡು, ಲಸಿಕೆ ಪಡೆಯುವುದು ಸಮಸ್ಯೆಯಾಗಿದೆ. 

ಕೋವಿಡ್‌ ಸಂಬಂಧ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿ ಕೊನೆಗೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿದೆ. ಲಸಿಕೆಗೆ ಬೇಡಿಕೆ ಇರದಿದ್ದರಿಂದ ಕೆಲ ಆಸ್ಪತ್ರೆಗಳು ದಾಸ್ತಾನು ಖಾಲಿಯಾದ ಬಳಿಕ ಖರೀದಿ ಮಾಡಿರಲಿಲ್ಲ. ಕೆಲ ಆಸ್ಪತ್ರೆಗಳು ತಯಾರಿಕೆ ಕಂಪನಿಗಳಿಗೆ ಬೇಡಿಕೆ ಸಲ್ಲಿಸಿದರೂ ಪೂರೈಕೆಯಾಗಿಲ್ಲ. ಕೋವಿನ್ ಪೋರ್ಟಲ್ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಂದು ಖಾಸಗಿ ಕೇಂದ್ರದಲ್ಲಿ ಮಾತ್ರ ಲಸಿಕೆ ಒದಗಿಸಲಾಗುತ್ತಿದೆ.

ADVERTISEMENT

ಹಂತ ಹಂತವಾಗಿ ಸ್ಥಗಿತ: ಕೋವಿಡ್ ಮೊದಲೆರಡು ಅಲೆಯಲ್ಲಿ ಬೆಂಗಳೂರಿನಲ್ಲೇ 200ಕ್ಕೂ ಅಧಿಕ ಖಾಸಗಿ ಕೆಂದ್ರಗಳಲ್ಲಿ ಲಸಿಕೆ ವಿತರಿಸಲಾಗಿತ್ತು. ಬಳಿಕ ಲಸಿಕೆ ವಿತರಣಾ ಕೇಂದ್ರಗಳ ಸಂಖ್ಯೆ ಇಳಿಕೆ ಕಂಡಿತ್ತು. ಕಳೆದ ವರ್ಷಾಂತ್ಯಕ್ಕೆ ಚೀನಾ ಸೇರಿ ಕೆಲವೆಡೆ ಕೋವಿಡ್ ಪ್ರಕರಣಗಳು ಹೆಚ್ಚಳವಾದ್ದರಿಂದ ಇಲ್ಲಿಯೂ ರೂಪಾಂತರಿ ವೈರಾಣು ಕಾಣಿಸಿಕೊಳ್ಳುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದ ಕೋವಿಡ್ ತಾಂತ್ರಿಕ ಸಲಹಾ ಸಮಿತಿ, ಮುನ್ನೆಚ್ಚರಿಕೆ ಡೋಸ್‌ಗೆ ಶಿಫಾರಸು ಮಾಡಿತ್ತು. ಇದರಿಂದಾಗಿ ಕಳೆದ ಜನವರಿ ತಿಂಗಳಲ್ಲಿ ಲಸಿಕೆಗೆ ಬೇಡಿಕೆ ಹೆಚ್ಚಳವಾಗಿತ್ತು. 

ಕೋವಿನ್ ಪೋರ್ಟಲ್‌ ಮಾಹಿತಿ ಪ್ರಕಾರ ಕಳೆದ ತಿಂಗಳು ಶ್ರೀಸಾಯಿ, ಮೆಡಿಹೋಪ್, ಪರಿಮಳಾ ಸೇರಿ ರಾಜ್ಯದಲ್ಲಿ 8 ಖಾಸಗಿ ವೈದ್ಯಕೀಯ ಕೇಂದ್ರಗಳಲ್ಲಿ ಲಸಿಕೆ ಒದಗಿಸಲಾಗುತ್ತಿತ್ತು. ಈಗ ಸಕ್ರಾ ವರ್ಲ್ಡ್ ಆಸ್ಪತ್ರೆಯಲ್ಲಿ ಮಾತ್ರ ವಿತರಿಸಲಾಗುತ್ತಿದೆ. ವಿವಿಧ ಪ್ರಮುಖ ಆಸ್ಪತ್ರೆಗಳಲ್ಲಿ ದಾಸ್ತಾನು ಖಾಲಿಯಾಗಿದೆ.

ಡಾ.ಆರ್. ರವೀಂದ್ರ
ಕೋರ್ಬಿವ್ಯಾಕ್ಸ್ ಲಸಿಕೆ

Highlights - ಅಂಕಿ–ಅಂಶಗಳು 12.21 ಕೋಟಿ ರಾಜ್ಯದಲ್ಲಿ ಈವರೆಗೆ ವಿತರಿಸಿದ ಲಸಿಕೆಯ ಡೋಸ್‌ಗಳು 5.53 ಕೋಟಿ ಎರಡು ಡೋಸ್ ಲಸಿಕೆ ಪಡೆದವರು 1.15 ಕೋಟಿ ಮುನ್ನೆಚ್ಚರಿಕೆ ಡೋಸ್ ಲಸಿಕೆ ಪಡೆದವರು

Quote - ಲಸಿಕೆ ತಯಾರಿಕಾ ಕಂಪನಿಗಳು ಪೂರೈಕೆ ಮಾಡುತ್ತಿಲ್ಲ. ಇದರಿಂದ ಖಾಸಗಿ ಆಸ್ಪತ್ರೆಗಳಲ್ಲಿ ದಾಸ್ತಾನು ಖಾಲಿಯಾಗಿದೆ. ।ಡಾ. ಗೋವಿಂದಯ್ಯ ಯತೀಶ್ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಮ್ಸ್ ಅಸೋಸಿಯೇಷನ್ ಅಧ್ಯಕ್ಷ

Quote - ಲಸಿಕೆಗೆ ಬೇಡಿಕೆ ತಗ್ಗಿದ ಬಳಿಕ ಖರೀದಿ ಮಾಡುವುದನ್ನು ನಿಲ್ಲಿಸಿದೆವು. ದಾಸ್ತಾನು ಇದ್ದ ಕೆಲ ಡೋಸ್‌ಗಳೂ ಅವಧಿ ಮೀರಿ ವ್ಯರ್ಥವಾಯಿತು. ।ಡಾ.ಆರ್. ರವೀಂದ್ರ ಸುಗುಣಾ ಆಸ್ಪತ್ರೆ ಮುಖ್ಯಸ್ಥ ‌

Cut-off box - ನಾಲ್ಕು ಲಸಿಕೆ ಅಲಭ್ಯ ರಾಜ್ಯದಲ್ಲಿ 2022ರ ಜ.10ರಿಂದ ಮೂರನೇ ಡೋಸ್ ಲಸಿಕೆ ವಿತರಿಸಲಾಗುತ್ತಿದೆ. ಎರಡು ಡೋಸ್ ಲಸಿಕೆ ಪಡೆದು ಆರು ತಿಂಗಳಾದವರಿಗೆ ಖಾಸಗಿ ಆಸ್ಪತ್ರೆಗಳಲ್ಲಿ ಮುನ್ನೆಚ್ಚರಿಕೆ ಡೋಸ್ ನೀಡಲಾಗುತ್ತದೆ. ‘ಕೋವಿಶೀಲ್ಡ್‌’ ಹಾಗೂ ‘ಕೋವ್ಯಾಕ್ಸಿನ್’ ಲಸಿಕೆ ಮುನ್ನೆಚ್ಚರಿಕೆ ಡೋಸ್‌ಗೆ ಖಾಸಗಿ ಆಸ್ಪತ್ರೆಗಳು ₹386 ಪಡೆಯುತ್ತಿದ್ದವು. ಲಸಿಕೆ ಪೂರೈಕೆ ಸ್ಥಗಿತವಾದ ಬಳಿಕ ‘ಕೊವೊವ್ಯಾಕ್ಸ್’ ಮೂಗಿನ ಮೂಲಕ ಹಾಕುವ ‘ಇನ್‌ಕೋವ್ಯಾಕ್’ ಹಾಗೂ ಕೋರ್ಬಿವ್ಯಾಕ್ಸ್ ಲಸಿಕೆ ಒದಗಿಸಲಾಗುತ್ತಿತ್ತು. ಇವುಗಳಿಗೆ ಕ್ರಮವಾಗಿ ₹386 ₹990 ಹಾಗೂ ₹400 ನಿಗದಿಪಡಿಸಿವೆ. ಸದ್ಯ ಕೋರ್ಬಿವ್ಯಾಕ್ಸ್ ಒಂದು ಆಸ್ಪತ್ರೆಯಲ್ಲಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.