ADVERTISEMENT

ಕೋವಿಡ್‌: ಪ್ರತಿ 100 ಸೋಂಕಿತರಲ್ಲಿ 7ಕ್ಕೂ ಹೆಚ್ಚು ಮಂದಿ ಸಾವು!

ಜೂನ್‌ನಲ್ಲಿ ಆರೇ ದಿನಗಳಲ್ಲಿ ವರದಿಯಾಗಿವೆ 1,529 ಸಾವು ಪ್ರಕರಣಗಳು * ಸೋಂಕು ಪತ್ತೆ ದರ ಶೇ 5.46ಕ್ಕೆ ಇಳಿಕೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2021, 21:42 IST
Last Updated 6 ಜೂನ್ 2021, 21:42 IST
ಕೋವಿಡ್‌ ಮರಣ ಪಟ್ಟಿ
ಕೋವಿಡ್‌ ಮರಣ ಪಟ್ಟಿ   

ಬೆಂಗಳೂರು: ಕೋವಿಡ್‌ ಎರಡನೇ ಅಲೆಯಲ್ಲಿ ಸೋಂಕು ಪತ್ತೆ ಪ್ರಮಾಣಕ್ಕಿಂತ ಈ ರೋಗದಿಂದ ಸಾಯುತ್ತಿರುವವರ ಪ್ರಮಾಣವೇ ಹೆಚ್ಚಾಗಿದೆ. ನಗರದಲ್ಲಿ ಪ್ರತಿ 100 ಮಂದಿ ಸೋಂಕಿತರಲ್ಲಿ ಏಳಕ್ಕೂ ಅಧಿಕ ಮಂದಿ ಸಾವಿನ ಮನೆಯ ಕದ ತಟ್ಟುತ್ತಿದ್ದಾರೆ. ಜೂನ್‌ ತಿಂಗಳಲ್ಲಿ ಆರೇ ದಿನಗಳಲ್ಲಿ 1,529 ಮಂದಿ ಕೋವಿಡ್‌ನಿಂದ ಸತ್ತಿರುವುದು ವರದಿಯಾಗಿದೆ ಎಂದು ಬಿಬಿಎಂಪಿಯ ಅಧಿಕೃತ ಅಂಕಿ–ಅಂಶಗಳು ಹೇಳುತ್ತಿವೆ.

‌ಬಿಬಿಎಂ‍ಪಿ ಭಾನುವಾರ ಬಿಡುಗಡೆ ಮಾಡಿರುವ ಅಂಕಿ–ಅಂಶಗಳ ಪ್ರಕಾರ, ಸೊಂಕು ಪತ್ತೆ ದರ ಶೇ 5.46ಕ್ಕೆ ಇಳಿಕೆ ಕಂಡಿದೆ. ಆದರೆ, ಕೋವಿಡ್‌ನಿಂದ ಸತ್ತವರ ದರ ಶೇ 7.41ಕ್ಕೆ ಏರಿಕೆ ಕಂಡಿದೆ. 2021ರ ಏಪ್ರಿಲ್‌ ಆರಂಭದಲ್ಲಿ ಈ ದರವು ಕೇವಲ ಶೇ 0.37ರಷ್ಟಿತ್ತು. ಮೇ ತಿಂಗಳಲ್ಲಿ ನಗರದಲ್ಲಿ ಇದುವರೆಗೆ ಒಟ್ಟು 14,847 ಮಂದಿ ಕೋವಿಡ್‌ನಿಂದ ಅಸುನೀಗಿದ್ದಾರೆ.

‘ಸೋಂಕು ಪತ್ತೆ ಪ್ರಮಾಣವು ಕುಸಿತ ಕಂಡಾಗ ಸಾಮಾನ್ಯವಾಗಿ ಈ ರೋಗದಿಂದ ಸಾಯುವವರ ದರ ಹೆಚ್ಚಳವಾಗುತ್ತದೆ. ಆದರೆ, ವಾಸ್ತವದಲ್ಲಿ ಕೋವಿಡ್‌ನಿಂದ ಸಾಯುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈಗ ವರದಿಯಾದ ಸಾವುಗಳ ಸಂಖ್ಯೆಯಲ್ಲಿ 10– 15 ದಿನಗಳ ಹಿಂದೆಯೇ ಆಸ್ಪತ್ರೆಗೆ ದಾಖಲಾಗಿರುವವರು ಹೆಚ್ಚು. ಕೋವಿಡ್‌ ಪ್ರಕರಣಗಳು ಗಣನೀಯವಾಗಿ ಕಡಿಮೆ ಆಗಿರುವುದರಿಂದ ಕ್ರಮೇಣ ಈ ರೋಗದಿಂದ ಸಾಯುವವರ ದರವೂ ಕಡಿಮೆ ಆಗಲಿದೆ’ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ.ಬಿ.ಕೆ.ವಿಜಯೇಂದ್ರ ಅಭಿಪ್ರಾಯಪಟ್ಟರು.

ADVERTISEMENT

‘ಕೆಲವು ಆಸ್ಪತ್ರೆಗಳು ಕೋವಿಡ್‌ ಸಾವಿನ ಕುರಿತ ಮಾಹಿತಿಯನ್ನು ಅದೇ ದಿನ ಬಿಬಿಎಂಪಿಗೆ ನೀಡುತ್ತಿಲ್ಲ. ಮನೆಯಲ್ಲೇ ಪ್ರತ್ಯೇಕ ವಾಸಕ್ಕೆ ಒಳಗಾಗುವವರು ಕೊನೆಯುಸಿರೆಳೆದಾಗ ಅವರ ಕುಟುಂಬಸ್ಥರು ತಕ್ಷಣವೇ ಬಿಬಿಎಂಪಿಗೆ ಮಾಹಿತಿ ನೀಡುವುದಿಲ್ಲ. ಅಂತಹ ಸಾವಿನ ಪ್ರಕರಣಗಳು ತಡವಾಗಿ ವರದಿಯಾಗುತ್ತಿವೆ. ಆದರೆ, ಸಾವಿನ ಮಾಹಿತಿ ಖಚಿತಪಟ್ಟ ಬಳಿಕ ಆ ಅಂಕಿ–ಅಂಶಗಳನ್ನು ಬಿಬಿಎಂಪಿ ಪರಿಗಣಿಸುತ್ತದೆ. ಈ ಕಾರಣದಿಂದಾಗಿಯೂ ಸಾವಿದ ದರ ಹೆಚ್ಚು ಇರುವಂತೆ ತೋರುತ್ತದೆ’ ಎಂದು ಅವರು ವಿವರಿಸಿದರು.

ಬಿಬಿಎಂಪಿಯ ಇನ್ನೊಬ್ಬ ಅಧಿಕಾರಿಯ ಪ್ರಕಾರ, ಕೋವಿಡ್‌ನಿಂದ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವವರಿಗೆ ಚಿಕಿತ್ಸೆ ನೀಡಲು ತೀವ್ರ ನಿಗಾ ಘಟಕದಲ್ಲಿ (ಐಸಿಯು) ವೆಂಟಿಲೇಟರ್‌ ಸೌಲಭ್ಯ ಇರುವ ಹಾಸಿಗೆಗಳ ಕೊರತೆ ಇದ್ದಿದ್ದು ಕೂಡ ಕಾರಣ. ‘10 ದಿನಗಳ ಹಿಂದಿನವರೆಗೂ ಕೊರೊನಾ ಸೋಂಕಿತರ ಚಿಕಿತ್ಸೆಗೆ ಐಸಿಯುಗಳಲ್ಲಿ ಹಾಸಿಗೆಗಳ ಕೊರತೆ ತೀವ್ರವಾಗಿತ್ತು. ಈಗ ಸೊಂಕು ಪತ್ತೆ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಸಮಸ್ಯೆ ಸ್ವಲ್ಪ ಮಟ್ಟಿಗೆ ಕಡಿಮೆಯಾಗಿದೆ’ ಎಂದರು.

‘ಮನೆ ಆರೈಕೆ: ಸತ್ತವರ ಸಂಖ್ಯೆ 1,599ಕ್ಕೆ ಹೆಚ್ಚಳ’

ನಗರದಲ್ಲಿ ಮನೆಯಲ್ಲೇ ಪ್ರತ್ಯೇಕವಾಗಿದ್ದು ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದ 778 ಮಂದಿ ಸಾವಿಗೀಡಾಗಿದ್ದಾರೆ ಎಂದು ಬಿಬಿಎಂಪಿ ಮೇ 21ರಂದು ಮಾಹಿತಿ ನೀಡಿತ್ತು. ಈಗ ಇಂತಹ ಸಾವುಗಳ ಪ್ರಮಾಣ ಮತ್ತಷ್ಟು ಏರಿಕೆಯಾಗಿದ್ದು, ಇದುವರೆಗೆ ಒಟ್ಟು 1,599 ಮಂದಿ ಮೃತಪಟ್ಟಿದ್ದಾರೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಬಿಡುಗಡೆ ಮಾಡಿರುವ ಅಂಕಿ–ಅಂಶಗಳಲ್ಲಿ ಈ ಮಾಹಿತಿ ಇದೆ. ಮನೆಯಿಂದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಸತ್ತವರ ವಿವರಗಳನ್ನೂ ಇದು ಒಳಗೊಂಡಿದೆ. ಆದರೆ, ಜೂನ್‌ 2ರ ಬಳಿಕ ಇಂತಹ ಸಾವುಗಳು ವರದಿಯಾಗಿಲ್ಲ.

ಕೋವಿಡ್‌: ಸಾವಿರ ದರ, ಸೋಂಕು ಪತ್ತೆ ದರ

(ಎಂಟು ವಾರಗಳ ವಿವರ)

ದಿನಾಂಕ; ಸೋಂಕು ಪತ್ತೆ; ಸೋಂಕು ಪತ್ತೆ ದರ (ಶೇ); ಸಾವಿನ ದರ (ಶೇ)

ಏ. 11– ಏ.17; 64,653; 10.89; 0.48

ಏ. 18– ಏ.24; 1,07,021; 15.90; 0.63

ಏ.25– ಮೇ 01; 1,43,636; 29.76; 0.56

ಮೇ 02– ಮೇ 08; 1,53,601; 38.97; 0.95

ಮೇ 09– ಮೇ 15; 1,00,165; 33.89; 1.42

ಮೇ 16– ಮೇ 22; 64,494; 21.51; 2.53

ಮೇ 23– ಮೇ 29; 39,705; 10.98; 4.76

ಮೇ 30–ಜೂನ್ 05; 23,883; 5.46; 7.41

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.