ADVERTISEMENT

ಗರ್ಭಿಣಿಯರಿಗೆ, 50 ವರ್ಷ ಮೇಲ್ಪಟ್ಟವರಿಗೆ ಸಂಬಳ ಸಹಿತ ರಜೆ

ಕೋವಿಡ್‌ ಮುನ್ನೆಚ್ಚರಿಕೆ: ಪೌರಕಾರ್ಮಿಕರಿಗೆ ಬಿಬಿಎಂಪಿಯಿಂದ ವಿವಿಧ ಸೌಲಭ್ಯ

​ಪ್ರಜಾವಾಣಿ ವಾರ್ತೆ
Published 25 ಜುಲೈ 2020, 19:30 IST
Last Updated 25 ಜುಲೈ 2020, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಕೊರೊನಾ ಸೋಂಕು ವ್ಯಾಪಕವಾಗಿ ಹಬ್ಬುತ್ತಿರುವುದರ ನಡುವೆಯೂ ನಗರವನ್ನು ಸ್ವಚ್ಛವಾಗಿಡಲು ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಬಿಬಿಎಂಪಿ ಅನೇಕ ಸವಲತ್ತುಗಳನ್ನು ಪ್ರಕಟಿಸಿದೆ.

ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವವವರಲ್ಲಿ 50 ವರ್ಷ ಮೇಲ್ಪಟ್ಟವರನ್ನು ಹಾಗೂ ಗರ್ಭಿಣಿಯರನ್ನು ಗುರುತಿಸಿ ಅವರಿಗೆ ಸಂಬಳಸಹಿತ ರಜೆ ನೀಡುವುದಕ್ಕೆ ಆಯಾ ವಲಯದ ಮುಖ್ಯ ಎಂಜಿನಿಯರ್‌ಗಳು ಹಾಗೂ ಜಂಟಿ ಆಯುಕ್ತರ ಮೂಲಕ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಬೇಕು ಎಂದು ವಿಶೇಷ ಆಯುಕ್ತ ಡಿ.ರಂದೀಪ್‌ (ಆರೋಗ್ಯ) ಸುತ್ತೋಲೆ ಹೊರಡಿಸಿದ್ದಾರೆ.

ಪೌರಕಾರ್ಮಿಕರಿಗೆ, ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಟೊ ಟಿಪ್ಪರ್, ಕಾಂಪ್ಯಾಕ್ಟರ್ ವಾಹನ ಚಾಲಕರಿಗೆ ಕೈಗವಸು (ಗ್ಲೌಸ್‌), ಮುಖಗವಸು (ಮಾಸ್ಕ್), ಮುಖ ಕವಚ (ಫೇಸ್ ಶೀಲ್ಡ್) ಹಾಗೂ ಕೈ ತೊಳೆಯಲು ಸಾಬೂನು ಪೂರೈಸಲು ಕ್ರಮವಹಿಸುವಂತೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗಳು ಹಾಗೂ ಆರೋಗ್ಯ ಪರಿವೀಕ್ಷಕರಿಗೆ ವಿಶೇಷ ಆಯುಕ್ತರು ಸೂಚಿಸಿದ್ದಾರೆ.

ADVERTISEMENT

ಸೋಂಕು ತಗುಲದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ಮಸ್ಟರಿಂಗ್ ಸೆಂಟರ್‌ನಲ್ಲಿ ಸ್ವಚ್ಛತಾ ಕಾರ್ಮಿಕವರ ದೇಹದ ಉಷ್ಣಾಂಶ ತಪಾಸಣೆಯನ್ನು ಕಡ್ಡಾಯಗೊಳಿಸಲಾಗಿದೆ. ಈ ಸಲುವಾಗಿ ಉಷ್ಣತಾ ಮಾಪಕಗಳನ್ನು ಒದಗಿಸಬೇಕು. ಅವರು ಕೈ ತೊಳೆದುಕೊಳ್ಳುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಕೆಲಸದ ವೇಳೆ ಹಾಗೂ ಹಾಜರಾತಿ ವೇಳೆ ಪೌರಕಾರ್ಮಿಕರು ಕನಿಷ್ಠ 3 ಮೀಟರ್‌ ಅಂತರ ಕಾಪಾಡಿಕೊಳ್ಳುವುದು ಕಡ್ಡಾಯ ಎಂದು ವಿಶೇಷ ಆಯುಕ್ತರು ಸೂಚಿಸಿದ್ದಾರೆ.

ಸ್ವಚ್ಛತಾ ಕಾರ್ಮಿಕರಿಗೆ ಅನಾರೋಗ್ಯದ ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ಕಳುಹಿಸಲು ವ್ಯವಸ್ಥೆ ಮಾಡಬೇಕು. ಮುಂದಿನ ಚಿಕಿತ್ಸೆ ಕುರಿತು ಆಯಾ ವಲಯದ ಆರೋಗ್ಯ ವೈದ್ಯಾಧಿಕಾರಿಗಳಿಗೆ ವರದಿ ನೀಡಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಮಿಕರು ಸತ್ತರೆ ಅವರ ಅಂತ್ಯ ಸಂಸ್ಕಾರಕ್ಕೆ ತಕ್ಷಣ ₹ 20 ಸಾವಿರ ಬಿಡುಗಡೆ ಮಾಡಬೇಕು. ಮೃತರ ಕುಟುಂಬದ ಸದಸ್ಯರೊಬ್ಬರನ್ನು ಗುತ್ತಿಗೆ ಆಧಾರದಲ್ಲಿ ಸ್ವಚ್ಛತಾ ಕಾರ್ಮಿಕರನ್ನಾಗಿ ನೇಮಿಸಲು ಕ್ರಮಕೈಗೊಳ್ಳುವ ಬಗ್ಗೆ ಹಾಗೂಸಂತ್ರಸ್ತ ಕುಟುಂಬಕ್ಕೆ ಪರಿಹಾರ ಧನ ನೀಡುವ ಬಗ್ಗೆ ಕೇಂದ್ರ ಕಚೇರಿಗೆ ಪ್ರಸ್ತಾವ ಸಲ್ಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.