ADVERTISEMENT

ಗೋಹತ್ಯೆ ನಿಷೇಧ ಕಾಯ್ದೆ: ನಿಲುವಿನಲ್ಲಿ ಬದಲಾವಣೆ ಇಲ್ಲ- ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2020, 20:22 IST
Last Updated 21 ನವೆಂಬರ್ 2020, 20:22 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬೆಂಗಳೂರು: ‘ಗೋಹತ್ಯೆ ನಿಷೇಧ ಕಾಯ್ದೆ ವಿಚಾರದಲ್ಲಿ 1964ರಲ್ಲಿ ಜಾರಿಗೆಬಂದಿದ್ದ ಮೂಲ ಕಾಯ್ದೆಯನ್ನೇ ಉಳಿಸಿ
ಕೊಳ್ಳಬೇಕೆಂಬ ನಮ್ಮ ನಿಲುವಿನಲ್ಲಿ ಬದಲಾವಣೆ ಇಲ್ಲ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಶನಿವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಹಿಂದಿನ ಬಿಜೆಪಿ ನೇತೃತ್ವದ ಸರ್ಕಾರ 1964ರ ಮೂಲ ಕಾಯ್ದೆಗೆ ತಂದಿದ್ದ ತಿದ್ದುಪಡಿಯನ್ನು ನಮ್ಮ ಸರ್ಕಾರ ರದ್ದುಗೊಳಿಸಿತ್ತು. ಬಳಿಕ ಮೂಲ ಕಾಯ್ದೆಯನ್ನು ಮತ್ತೆ ಜಾರಿಗೊಳಿಸಲಾಗಿದೆ. ಅದನ್ನೇ ಮುಂದುವರಿಸಬೇಕೆಂಬುದು ನಮ್ಮ ನಿಲುವು’ ಎಂದರು.

ಗೋಹತ್ಯೆ ವಿಚಾರದಲ್ಲಿ ಬಿಜೆಪಿನಾಯಕರು ದ್ವಂದ್ವ ನಿಲುವು ಹೊಂದಿದ್ದಾರೆ. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಗೋಮಾಂಸ ರಫ್ತು ಹೆಚ್ಚಳವಾಗಿದೆ. ಉತ್ತರ ಪ್ರದೇಶದಿಂದ ಹೆಚ್ಚಿನ ಪ್ರಮಾಣದ ರಫ್ತು ನಡೆಯುತ್ತಿದ್ದು, ಪ್ರಮುಖ ವ್ಯಾಪಾರಿಗಳಲ್ಲಿ ಹಲವರು ಬಿಜೆಪಿಯವರು. ಆಡಳಿತ ವೈಫಲ್ಯವನ್ನು ಮುಚ್ಚಿಕೊಳ್ಳಲು ಬಿಜೆಪಿಯವರು ಗೋಹತ್ಯೆ, ಲವ್‌ ಜಿಹಾದ್‌ನಂತಹ ವಿಚಾರಗಳ ಕುರಿತು ಮಾತನಾಡಿ ಜನರ ದಿಕ್ಕು ತಪ್ಪಿಸುತ್ತಾರೆ ಎಂದು ಆರೋಪಿಸಿದರು.

ADVERTISEMENT

ಗೃಹ ಸಚಿವರನ್ನು ಕೇಳಲಿ: ‘ಮದುವೆಗೆ ಜಾತಿ, ಧರ್ಮಗಳ ನಿರ್ಬಂಧ ಯಾವುದೇ ಕಾನೂನಿನಲ್ಲಿ ಇಲ್ಲ ಎಂದು ಕೇಂದ್ರ ಗೃಹ ಸಚಿವರು ಸಂಸತ್ತಿನಲ್ಲಿ ಹೇಳಿದ್ದಾರೆ. ‘ಲವ್‌ ಜಿಹಾದ್‌’ ಎಂದರೆ ಏನು ಎಂಬುದನ್ನು ಯಾವುದೇ ಕಾನೂನಿನಲ್ಲೂ ವ್ಯಾಖ್ಯಾನಿಸಿಲ್ಲ ಎಂದೂ ತಿಳಿಸಿದ್ದಾರೆ. ಈಗ ಆ ಕುರಿತು ಮಾತನಾಡುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಒಮ್ಮೆ ಕೇಂದ್ರ ಗೃಹ ಸಚಿವರನ್ನು ಕೇಳಲಿ’ ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದರು.

‘ಅಲಹಾಬಾದ್‌ ಹೈಕೋರ್ಟ್‌ ಅಂತರ ಧರ್ಮೀಯ ವಿವಾಹಗಳು ಅಕ್ರಮ ಎಂದು ತೀರ್ಪಿನಲ್ಲಿ ಹೇಳಿಲ್ಲ. ಆ ತೀರ್ಪನ್ನು ಉಲ್ಲೇಖಿಸುವವರು ಒಮ್ಮೆ ಓದಲಿ. ಆರ್‌ಎಸ್‌ಎಸ್‌ ಶಾಖೆಗೆ ಹೋಗಿ ನಾನು ಏನನ್ನೂ ಕಲಿಯಬೇಕಾಗಿಲ್ಲ. ಆ ಸಂಘಟನೆಯ ಬಗ್ಗೆ ತಿಳಿದುಕೊಂಡೇ ನಾನು ವಿರೋಧಿಸುತ್ತಿದ್ದೇನೆ. ಆಡಳಿತ ನಡೆಸುವವರಿಗೆ ಆರ್‌ಎಸ್‌ಎಸ್‌ ಅಲ್ಲ, ಸಂವಿಧಾನದ ಬಗ್ಗೆ ತಿಳಿದಿರಬೇಕು. ಬಿಜೆಪಿ ನಾಯಕರು ಸಂವಿಧಾನ ಓದಲಿ. ಸಂವಿಧಾನದ ಕುರಿತು ಅವರಿಗೆ ನಾನೇ ಪಾಠ ಮಾಡುತ್ತೇನೆ’ ಎಂದು ಹೇಳಿದರು.

ಬಸನಗೌಡ ತುರ್ವಿಹಾಳ್‌ಇಂದು ಕಾಂಗ್ರೆಸ್‌ಗೆ: ‘ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸನಗೌಡ ತುರ್ವಿಹಾಳ್‌ ಭಾನುವಾರ ಕಾಂಗ್ರೆಸ್‌ ಪಕ್ಷ ಸೇರಲಿದ್ದಾರೆ. ಉಪ ಚುನಾವಣೆಯಲ್ಲಿ ಅವರೇ ಪಕ್ಷದ ಅಭ್ಯರ್ಥಿಯಾಗಬಹುದು’ ಎಂದು ಸಿದ್ದರಾಮಯ್ಯ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.