ADVERTISEMENT

ಮಳಿಗೆಗಳ ಹಸ್ತಾಂತರಕ್ಕೆ ಆಗ್ರಹ: ತರಕಾರಿ ಬೀದಿಗೆಸೆದು ಆಕ್ರೋಶ

ಕಾಕ್ಸ್‌ಟೌನ್‌ ಮಾರ್ಕೆಟ್‌ನ ಮಳಿಗೆಗಳ ಹಸ್ತಾಂತರಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2020, 19:46 IST
Last Updated 24 ಫೆಬ್ರುವರಿ 2020, 19:46 IST
ಕಾಕ್ಸ್‌ಟೌನ್‌ನಲ್ಲಿ ನಿರ್ಮಾಣವಾಗಿರುವ ನೂತನ ಮಾರುಕಟ್ಟೆ - ಪ್ರಜಾವಾಣಿ ಚಿತ್ರ
ಕಾಕ್ಸ್‌ಟೌನ್‌ನಲ್ಲಿ ನಿರ್ಮಾಣವಾಗಿರುವ ನೂತನ ಮಾರುಕಟ್ಟೆ - ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ಬೇಕೇ ಬೇಕು, ಕಾಕ್ಸ್‌ಟೌನ್‌ ಮಾರ್ಕೆಟ್‌ ಬೇಕು’ ಎಂಬ ಘೋಷಣೆ ಕೂಗುತ್ತಾ ಸೋಮವಾರ ಪ್ರತಿಭಟನೆ ನಡೆಸಿದ ವ್ಯಾಪಾರಿಗಳು, ಸೊಪ್ಪು, ತರಕಾರಿಯನ್ನು ಬೀದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದರು.

ಕಾಕ್ಸ್‌ಟೌನ್‌ನ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಗಾಡಿಗಳನ್ನು ತೆರವುಗೊಳಿಸಿದ್ದ ಬಿಬಿಎಂಪಿಯು, 17 ವರ್ಷಗಳ ಹಿಂದೆ ಇಲ್ಲಿ 28 ಮಳಿಗೆಗಳನ್ನು ಒಳಗೊಂಡ ಹೊಸ ಮಾರುಕಟ್ಟೆ ನಿರ್ಮಿಸಿದೆ. ಆದರೆ, ಈವರೆಗೆ ಮಳಿಗೆಗಳನ್ನು ಹಸ್ತಾಂತರಿಸಿಲ್ಲ ಎಂದು ವ್ಯಾಪಾರಿಗಳು ದೂರಿದರು.

‘ಹೊಸ ಮಾರುಕಟ್ಟೆಯನ್ನು ₹2 ಕೋಟಿ ವೆಚ್ಚದಲ್ಲಿ ನಿರ್ಮಿಸಿ ಹಲವು ವರ್ಷಗಳೇ ಕಳೆದಿವೆ. ಆರು ತಿಂಗಳಲ್ಲಿ, ಒಂದು ವರ್ಷದಲ್ಲಿ ಮಳಿಗೆಗಳನ್ನು ಹಸ್ತಾಂತರ ಮಾಡಲಾಗುವುದು ಎಂದು ಬಿಬಿಎಂಪಿಯವರು ಭರವಸೆ ಕೊಡುತ್ತಲೇ ಬರುತ್ತಿದ್ದಾರೆ. ಆದರೆ, ಈವರೆಗೂ ಈ ಕಾರ್ಯಕ್ಕೆ ಮುಂದಾಗಿಲ್ಲ. ಹೊಸದಾಗಿ ನಿರ್ಮಿಸಲಾದ ಮಾರುಕಟ್ಟೆಯ ಮೇಲು ಹೊದಿಕೆಯೂ ಹಾಳಾಗುತ್ತಿದೆ’ ಎಂದು ವರ್ತಕರ ಮುಖಂಡ ಎನ್.ಎಸ್. ರವಿ ಹೇಳಿದರು.

ADVERTISEMENT

‘ಈಗ ಬೀದಿ ಬದಿಯಲ್ಲಿಯೇ ವ್ಯಾಪಾರ ಮಾಡುತ್ತಿದ್ದೇವೆ. ಇದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ. ಪಾದಚಾರಿ ಮಾರ್ಗದಲ್ಲಿಯೇ ವ್ಯಾಪಾರ ಮಾಡಬೇಕಾಗಿರುವುದರಿಂದ ಸಾರ್ವಜನಿಕರಿಗೂ ತೊಂದರೆಯಾಗುತ್ತಿದೆ’ ಎಂದು ವರ್ತಕರು ಅಳಲು ತೋಡಿಕೊಂಡರು.

‘ಈಗಕುಡಿಯುವ ನೀರು, ಶೌಚಾಲಯದ ಸಮಸ್ಯೆ ಇದೆ. ಹೊಸ ಮಾರುಕಟ್ಟೆಯಲ್ಲಿ ಮಳಿಗೆಗಳನ್ನು ನೀಡಿದರೆ ಅನುಕೂಲವಾಗುತ್ತದೆ’ ಎಂದೂ ಅವರು ಹೇಳಿದರು.

‘ಪಾಲಿಕೆ ಆಯುಕ್ತರಿಗೆ ಈ ಬಗ್ಗೆ ಮನವಿ ಮಾಡಿದ್ದೇವೆ. ಬೇಡಿಕೆ ಈಡೇರದಿದ್ದರೆ ಒಂದು ವಾರದೊಳಗೆ ಅವರ ಕಚೇರಿಯ ಎದುರೇ ಮತ್ತೊಮ್ಮೆ ಪ್ರತಿಭಟಿಸಲು ನಿರ್ಧರಿಸಿದ್ದೇವೆ’ ಎಂದು ರವಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.