ADVERTISEMENT

ಲೆಕ್ಕ ಕೊಟ್ಟು ಹೋಗಿ: ಬಿಜೆಪಿಗೆ ಸಿಪಿಐ ಒತ್ತಾಯ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2020, 18:39 IST
Last Updated 3 ಸೆಪ್ಟೆಂಬರ್ 2020, 18:39 IST
   

ಬೆಂಗಳೂರು: ಬಿಬಿಎಂಪಿಯ ಪ್ರಸಕ್ತ ಆಡಳಿತದ ಅವಧಿ ಸೆ.10ಕ್ಕೆ ಮುಗಿಯಲಿದೆ. ಒಂದು ವರ್ಷದಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದು, ‘ಹೋಗುವ ಮುನ್ನ ಲೆಕ್ಕ ಕೊಟ್ಟು ಹೋಗಿ’ ಎಂಬ ಅಭಿಯಾನವನ್ನು ಸಿಪಿಐ (ಎಂ) ಆರಂಭಿಸಿದೆ. ಈ ಒತ್ತಾಯವನ್ನು ಮುಂದಿಟ್ಟುಕೊಂಡು ಸೆ.9ರಂದು ಬಿಬಿಎಂಪಿ ಕೇಂದ್ರ ಕಚೇರಿ ಮತ್ತು ಇತರೆ ವಲಯ ಕಚೇರಿಗಳ ಎದುರು ಪ್ರತಿಭಟನೆ ನಡೆಸಲು ಪಕ್ಷ ಮುಂದಾಗಿದೆ.

‘ಬಿಜೆಪಿ ಆಡಳಿತವು ಕೋವಿಡ್‌ ಪರಿಸ್ಥಿತಿ ನಿರ್ವಹಣೆ ಮತ್ತು ಕೈಗೊಂಡಿರುವ ಪರಿಹಾರ ಕಾರ್ಯಗಳ ಕುರಿತು ಲೆಕ್ಕ ಕೊಡಬೇಕು. ಇದಕ್ಕೆ ಸಂಬಂಧಿಸಿದಂತೆ ಹತ್ತು ಪ್ರಶ್ನೆಗಳಿಗೆ ಬಿಜೆಪಿ ಉತ್ತರಿಸಬೇಕು’ ಎಂದು ಪಕ್ಷದ ಬೆಂಗಳೂರು ವಿಭಾಗದ ಕಾರ್ಯದರ್ಶಿಗಳಾದ ಕೆ.ಎನ್. ಉಮೇಶ್, ಎನ್. ಪ್ರತಾಪಸಿಂಹ ಒತ್ತಾಯಿಸಿದ್ದಾರೆ.

ಬಿಜೆಪಿಗೆ ಸಿಪಿಐ ಪ್ರಶ್ನೆಗಳು

ADVERTISEMENT

* ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮತ್ತು ಕಾರ್ಮಿಕ ಇಲಾಖೆಯಿಂದ ಎಷ್ಟು ಆಹಾರ ಕಿಟ್‌ಗಳನ್ನು ನೀಡಲಾಗಿತ್ತು ? ಫಲಾನುಭವಿಗಳ ಪಟ್ಟಿ ಕೊಡಿ.

* 2020–21ರ ಬಿಬಿಎಂಪಿ ಬಜೆಟ್‌ನಲ್ಲಿ ಮೇಯರ್‌ ವಿವೇಚನಾ ನಿಧಿಯ ₹150 ಕೋಟಿ, ಉಪಮೇಯರ್‌ ಅವರ ₹75 ಕೋಟಿ, ಆಡಳಿತ ಪಕ್ಷದ ನಾಯಕರ ₹75 ಕೋಟಿ, ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರ ವಿವೇಚನಾ ನಿಧಿಯ ₹75 ಕೋಟಿಯ ಲೆಕ್ಕ ನೀಡಿ.

* ಅಸಂಘಟಿತ ಕಾರ್ಮಿಕರಿಗೆ ಈ ವಿವೇಚನಾ ನಿಧಿಯಿಂದ ಲಾಕ್‌ಡೌನ್‌ ಕಾಲಾವಧಿಯ ಪರಿಹಾರ ನೆರವು ಏಕೆ ನೀಡಲಿಲ್ಲ ?

* ಕೋವಿಡ್‌ ನಿಯಂತ್ರಣಕ್ಕಾಗಿ ಎಷ್ಟು ಕಂಟೈನ್‌ಮೆಂಟ್ ವಲಯಗಳನ್ನು ಘೋಷಿಸಲಾಗಿತ್ತು ? ಈ ವಲಯಗಳಲ್ಲಿ ತಡೆಗೋಡೆ ನಿರ್ಮಿಸಲು ಒಟ್ಟು ಎಷ್ಟು ಖರ್ಚು ಮಾಡಲಾಗಿದೆ ?

*ಪಿಎಂ ಕೇರ್ಸ್‌ ನಿಧಿಯಿಂದ ಬಿಬಿಎಂಪಿಗೆ ಎಷ್ಟು ಹಣ ಬಂದಿದೆ?

* ಕೋವಿಡ್‌ನಿಂದ ಸಾವಿಗೀಡಾದವರ ಶವಸಂಸ್ಕಾರಕ್ಕೆ ಎಷ್ಟು ಹಣ ನೀಡಲಾಗಿದೆ ? ಒಟ್ಟು ಎಷ್ಟು ಹಣ ಖರ್ಚು ಮಾಡಲಾಗಿದೆ ?

* ಲಾಕ್‌ಡೌನ್‌ ಅವಧಿಯಲ್ಲಿ ಕೈಗೊಂಡ ಪರಿಹಾರ ಕ್ರಮಗಳಿಗೆ ಮಾಡಲಾದ ವೆಚ್ಚದ ಲೆಕ್ಕ ಕೊಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.